
ಅಯೋಧ್ಯಾ: ನಿತ್ಯ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿರುವ ಅಯೋಧ್ಯೆಯ ಐತಿಹಾಸಿಕ ರಾಮಮಂದಿರದ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸೋಮವಾರ ಘೋಷಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಟ್ರಸ್ಟ್, ‘ಪ್ರಭು ಶ್ರೀರಾಮನ ಎಲ್ಲಾ ಭಕ್ತರಿಗೆ ಮಂದಿರ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿವೆ ಎಂದು ತಿಳಿಸಲು ಸಂತೋಷಪಡುತ್ತೇವೆ. ಇದರಲ್ಲಿ ಮುಖ್ಯಮಂದಿರ ಮತ್ತು ಆವರಣದೊಳಗಿನ ಮಹಾದೇವ, ಗಣೇಶ, ಹನುಮಾನ್, ಸೂರ್ಯದೇವ, ಭಗವತಿ ಮತ್ತು ಅನ್ನಪೂರ್ಣ ದೇವರ 6 ಮಂದಿರಗಳು ಸೇರಿವೆ. ಜೊತೆಗೆ ಶೇಷಾವತಾರ ಮಂದಿರವೂ ಪೂರ್ಣಗೊಂಡಿದೆ. ಈ ಮಂದಿರಗಳ ಮೇಲೆ ಧ್ವಜ ಮತ್ತು ಕಲಶವನ್ನು ಸ್ಥಾಪಿಸಲಾಗಿದೆ’ ಎಂದು ತಿಳಿಸಿದೆ.
ಇದರ ಜೊತೆಗೆ ಋಷಿಗಳಾದ ವಾಲ್ಮೀಕಿ, ವಸಿಷ್ಠ, ವಿಶ್ವಾಮಿತ್ರ, ಅಗಸ್ತ್ಯ, ಸಂತ ತುಳಸೀದಾಸ ಹಾಗೂ ನಿಷಾದರಾಜ, ಶಬರಿ, ದೇವಿ ಅಹಲ್ಯೆಯ ಮಂಟಪಗಳನ್ನು ನಿರ್ಮಿಸಲಾಗಿದೆ. ಜಟಾಯು ಮತ್ತು ಅಳಿಲಿನ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ರಸ್ತೆ ನಿರ್ಮಾಣ ಮತ್ತು ಕಲ್ಲಿನ ನೆಲಹಾಸು ಕೆಲಸವನ್ನು ಎಲ್&ಟಿ ಸಂಸ್ಥೆ ನಿರ್ವಹಿಸುತ್ತಿದ್ದರೆ, 10 ಎಕರೆಗಿಂತ ಹೆಚ್ಚಿನ ವಿಸ್ತೀರ್ಣದ ಪಂಚವಟಿಯ ಅಭಿವೃದ್ಧಿಯನ್ನು ಜಿಎಂಆರ್ ಕಾರ್ಯಗತಗೊಳಿಸುತ್ತಿದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ.
2019ರ ನ.9ರಂದು ಸುಪ್ರೀಂ ಕೋರ್ಟ್ ಅಯೋಧ್ಯೆಯ 2.77 ಎಕರೆ ವಿವಾದಿತ ಭೂಮಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ರಾಮಮಂದಿರ ನಿರ್ಮಾಣಕ್ಕಾಗಿ ನೀಡಿದರೆ, ಮುಸ್ಲಿಂ ಸಮುದಾಯಕ್ಕೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಪರ್ಯಾಯ ಭೂಮಿಯನ್ನು ನೀಡಿ ಐತಿಹಾಸಿಕ ತೀರ್ಪು ಪ್ರಕಟಿಸಿತು. 2020ರ ಆ.5ರಂದು ಪ್ರಧಾನಿ ನರೇಂದ್ರ ಮೋದಿಯವರು ಭೂಮಿಪೂಜೆ ನೆರವೇರಿಸಿ ಮಂದಿರ ನಿರ್ಮಾಣಕಾರ್ಯಕ್ಕೆ ಚಾಲನೆ ನೀಡಿದ್ದರು.
ರಾಮಮಂದಿರವನ್ನು ಸುಮಾರು 2.7 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಇದರ ಒಟ್ಟು ಸಂಕೀರ್ಣ 70 ಎಕರೆ ವಿಸ್ತಾರವಾಗಿದೆ. ಇದರಲ್ಲಿ ಉದ್ಯಾನವನ, ವಸ್ತುಸಂಗ್ರಹಾಲಯ ಮತ್ತು ಇತರ ಸೌಲಭ್ಯಗಳಿವೆ. ಮಂದಿರವು 3 ಅಂತಸ್ತುಗಳನ್ನು ಹೊಂದಿದ್ದು, ಉಕ್ಕು ಅಥವಾ ಕಬ್ಬಿಣವನ್ನು ಬಳಸದೆ ಕೇವಲ ಕಲ್ಲುಗಳಿಂದ ನಿರ್ಮಿಸಲಾಗಿದೆ. ಮೊದಲ ಹಂತದ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ 2024ರ ಜ.22ರಂದು ಶ್ರೀರಾಮನ ಪ್ರತಿಷ್ಠಾಪನೆಯೊಂದಿಗೆ ದೇವಾಲಯವನ್ನು ಭಕ್ತರಿಗೆ ತೆರೆಯಲಾಯಿತು. ದೇಗುಲಕ್ಕಾಗಿ ಭಕ್ತರು ಒಟ್ಟು 3500 ಕೋಟಿ ರು. ದೇಣಿಗೆ ನೀಡಿದ್ದು, ಇದುವರೆಗೂ 1850 ಕೋಟಿ ರು. ವೆಚ್ಚವಾಗಿರುವ ನಿರೀಕ್ಷೆ ಇದೆ.
2ನೇ ಹಂತದ ಕಾರ್ಯ:
ಪ್ರಾಣಪ್ರತಿಷ್ಠೆಯ ನಂತರ ಮಂದಿರದ 2ನೇ ಹಂತದ ನಿರ್ಮಾಣಕಾರ್ಯ ಆರಂಭವಾಯಿತು. ಮೊದಲ ಅಂತಸ್ತಿನಲ್ಲಿ ರಾಮನ ಭವ್ಯವಾದ ದರ್ಬಾರ್, ಮಂದಿರ ಸಂಕೀರ್ಣದಲ್ಲಿ ಸುಮಾರು 21 ದೇವಾಲಯಗಳು, ಉಬ್ಬುಶಿಲ್ಪ, ವಸ್ತುಸಂಗ್ರಹಾಲಯ ಮುಂತಾದವನ್ನು ನಿರ್ಮಿಸಲಾಗಿದೆ. ಇದೀಗ ಇವುಗಳ ಕಾರ್ಯವೂ ಮುಕ್ತಾಯವಾಗಿರುವುದರಿಂದ ಇಡೀ ರಾಮಮಂದಿರ ಪರಿಪೂರ್ಣವಾದಂತಾಗಿದೆ.
ಮೋದಿಯಿಂದ ಭಗವಾಧ್ವಜ ಹಾರಾಟ:
ಭವ್ಯ ರಾಮಮಂದಿರದ ಗರ್ಭಗುಡಿಯ ಮೇಲೆ 22 ಅಡಿ ಉದ್ದದ ಕೇಸರಿ ಧ್ವಜವನ್ನು ಹಾರಿಸಲು ತೀರ್ಮಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ನ.25ರಂದು ರಾಮಮಂದಿರದ ಮೇಲ್ಭಾಗದಲ್ಲಿ ಧ್ವಜಾರೋಹಣ ನಡೆಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ