ಸಲಿಂಗಿಗಳ ವಿವಾಹ, ಲಿವಿಂಗ್ ಟುಗೆದರ್ ಸಂಸ್ಕೃತಿಗೆ ಕೇಂದ್ರ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ನಿರ್ಧಾರ ಕೆಲವರಲ್ಲಿ ಆಕ್ರೋಶ ತರಿಸಿದ್ದರೆ, ಭಾರತದ ಬಹುತೇಕ ಸಮುದಾಯಗಳು ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದೆ. ಇದೀಗ ಮುಸ್ಲಿಮ್, ಕ್ರಿಶ್ಟಿಯ್ ಸೇರಿದಂತೆ ಹಲವು ಅಲ್ಪ ಸಂಖ್ಯಾತ ಸಮುದಾಯಗಳು ಕೇಂದ್ರ ಸರ್ಕಾರದ ನಿರ್ಧಾರ ಬೆಂಬಲಿಸಿ ಪತ್ರ ಬರೆದಿದೆ.
ನವದೆಹಲಿ(ಮಾ.29): ಸಲಿಂಗಿ ವಿವಾಹ ಸರಿಯೋ? ತಪ್ಪೋ? ಈ ಚರ್ಚೆ ದಶಕಗಳಿಂದ ನಡೆಯುತ್ತಲೇ ಇದೆ. ಇದಕ್ಕೆ ಸುಪ್ರೀಂ ಕೋರ್ಟ್ ಕೆಲ ವರ್ಷದ ಹಿಂದೆ ಸಲಿಂಗ ವಿವಾಹ ಅಪರಾಧ ಮುಕ್ತಗೊಳಿಸಿ ತೀರ್ಪು ನೀಡುವ ಮೂಲಕ ಹೊಸ ಅಧ್ಯಾಯ ಬರೆದಿತ್ತು. ಆದರೆ ಕೇಂದ್ರ ಸರ್ಕಾರ ಸಲಿಂಗ ವಿವಾಹ, ಲಿವಿಂಗ್ ಟುಗದರ್ ಭಾರತೀಯ ಕೌಟುಂಬಿಕ ವ್ಯವಸ್ಥೆಗೆ ವಿರುದ್ಧ ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಿರೋಧ ವ್ಯಕ್ತಪಡಿಸಿದೆ. ಆದರೆ ಕೇಂದ್ರದ ವಿರುದ್ದ ಕೆಲವರು ಆಕ್ರೋಶ ಹೊರಹಾಕಿದ್ದರು. ಆದರೆ ಹಲವು ಸಮುದಾಯಗಳು ಕೇಂದ್ರ ಸರ್ಕಾರವನ್ನು ಬೆಂಬಲಿಸಿತ್ತು. ಇದೀಗ ಮುಸ್ಲಿಮರು, ಕ್ರಿಶ್ಟಿಯನ್ನರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯ ಸಲಿಂಗ ವಿವಾಹ ವಿರೋಧಿಸಿದೆ. ಇದೀಗ ಕೇಂದ್ರದ ನಿರ್ಧಾರ ಬೆಂಬಲಿಸಿ ರಾಷ್ಟ್ರಪತಿ ಹಾಗೂ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆದಿದೆ.
ಗ್ರ್ಯಾಂಡ್ ಮುಫ್ತಿ ಆಫ್ ಇಂಡಿಯಾ, ಚಿಸ್ಟಿ ಮಂಜಿಲ್ ಸೂಫಿ ಕಾನಾಖ್, ಕ್ರಿಶ್ಟಿಯನ್ ಸಮುದಾಯ ಇದೀಗ ಸಲಿಂಗ ವಿವಾಹ ವಿರೋಧಿಸಿ ಪತ್ರ ಬರೆದಿದೆ. ಇಸ್ಲಾಂನಲ್ಲಿ ಉತ್ತಮ ಹಾಗೂ ಆರೋಗ್ಯ ಸಮುದಾಯದ ಅಡಿಪಾಯ ಮದುವೆ. ಇಸ್ಲಾಂನಲ್ಲಿ ಮದುವೆ ಅನ್ನೋದು ಗಂಡು ಹೆಣ್ಣಿನ ನಡುವೆ ನಡೆಯುವ ಪವಿತ್ರ ಸಂಬಂಧವಾಗಿದೆ. ಇದೇ ವೇಳೆ ಮಕ್ಕಳ ಹಕ್ಕುಗಳು ಸಂಪೂರ್ಣವಾಗಿ ತಂದೆ ಹಾಗೂ ತಾಯಿಗೆ ಸೇರಿದೆ. ಹೀಗಾಗಿ ಮುಸ್ಲಿಂ ಸಮುದಾಯ ಸಲಿಂಗಿ ವಿವಾಹವನ್ನು ವಿರೋಧಿಸುತ್ತದೆ. ಇದು ಇಸ್ಲಾಂಗೆ ವಿರುದ್ಧವಾಗಿದೆ. ಸಂವಿಧಾನದ ಆರ್ಟಿಕಲ್ 25ರಲ್ಲಿ ಪ್ರತಿಯೊಬ್ಬರಿಗೆ ಅವರ ಧರ್ಮವನ್ನು ಪಾಲಿಸಲು, ಪೂಜಿಸಲು ಅವಕಾಶ ನೀಡಿದೆ. ಆದರೆ ಸಲಿಂಗ ವಿವಾಹಕ್ಕೆ ಕಾನೂನು ಅನುಮತಿ ನೀಡಿದರೆ ಅದು ಧರ್ಮಕ್ಕೆ ವಿರುದ್ಧವಾಗಿದೆ ಎಂದು ಭಾರತದ ಗ್ರ್ಯಾಂಡ್ ಮುಫ್ತಿ ಮುಸ್ಲಿಂ ಒಕ್ಕೂಟ ಪ್ರಕಟಣೆಯಲ್ಲಿ ಹೇಳಿದೆ.
ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದ ರಾಷ್ಟ್ರ. ಹಲವು ಭಾಷೆ, ಹಲವು ಜಾತಿ, ಧರ್ಮಗಳ ಸಂಗಮವಾಗಿದೆ. ಕಳೆದ 800 ವರ್ಷಗಳಿಂದ ಭಾರತದ ಮುಸ್ಲಿಮರು ಅಜ್ಮೀರ್ ದರ್ಗಾಗೆ ಬೇಟಿ ನೀಡುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ ಮುಸ್ಲಿಮರು ತಮ್ಮ ಧಾರ್ಮಿಕ ಸ್ವಾತಂತ್ರ್ಯವನ್ನು ಹಾಗೂ ಹಕ್ಕುಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಆದರೆ ಇಸ್ಲಾಂಗೆ ವಿರುದ್ಧವಾಗಿರುವ ಸಲಿಂಗ ವಿವಾಹಕ್ಕೆ ಕಾನೂನು ಅವಕಾಶ ನೀಡುವುದು ಸೂಕ್ತವಲ್ಲ. ಇದು ಭಾರತೀಯ ಕೌಟುಂಬಿಕ ವ್ಯವಸ್ಥೆ, ಸಾಮಾಜಿಕ ಮೌಲ್ಯಗಳಿದೆ ವಿರುದ್ಧವಾಗಿದೆ ಎಂದು ಚಿಸ್ಟಿ ಮಂಜಿಲ್ ಸೂಫಿ ಕಾನಾಖ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದೆ.
ಗೆಳತಿ ಮಾತು ನಂಬಿ ಪುರುಷನಾದ ಯುವತಿ, ಲಿಂಗ ಪರಿವರ್ತನೆ ಮಾಡಿಕೊಂಡ ಬಳಿಕ ಕೈಕೊಟ್ಟಗೆಳತಿ!
ಕಮ್ಯೂನಿಯನ್ ಚರ್ಚ್ ಆಫ್ ಇಂಡಿಯಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದೆ. ಕ್ರಿಶ್ಟಿಯನ್ ಸಮುದಾಯದಲ್ಲಿ ಮದುವೆ ಅತ್ಯಂತ ಪವಿತ್ರವಾಗಿದೆ. ಆದರೆ ಸಲಿಂಗ ವಿವಾಹವನ್ನು ಸ್ವೀಕರಿಸಲು ಸಾಧ್ಯವಿಲ್ಲ. ಇದು ಭಾರತೀಯ ಮೌಲ್ಯಗಳಿಗೂ ವಿರುದ್ಧವಾಗಿದೆ.ಹೀಗಾಗಿ ಸಲಿಂಗ ವಿವಾಹಕ್ಕೆ ಅವಕಾಶ ನೀಡಬಾರದು ಎಂದು ಕಮ್ಯೂನಿಯನ್ ಚರ್ಚ್ ಆಫ್ ಇಂಡಿಯಾ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.