
ಶ್ರೀನಗರ(ಜೂ.02): ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆಯುತ್ತಿರುವ ಹತ್ಯೆಯ ಪ್ರಕರಣಗಳ ಹಿನ್ನೆಲೆಯಲ್ಲಿ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಎಲ್ಲ ಹಿಂದೂ ಸರ್ಕಾರಿ ಸಿಬ್ಬಂದಿಯ ಸುರಕ್ಷತೆಗಾಗಿ ಅವರನ್ನು ಜಿಲ್ಲಾ ಕೇಂದ್ರಕ್ಕೆ ವರ್ಗಾಯಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಪೊಲೀಸ್ ಹಾಗೂ ನಾಗರಿಕ ಸೇವಾ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಭೆಯಲ್ಲಿ ಬುಧವಾರ ಮನೋಜ್ ಸಿನ್ಹಾ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
‘ಕಾಶ್ಮೀರದ ಕಣಿವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದೂ ಸರ್ಕಾರಿ ಸಿಬ್ಬಂದಿಗಳನ್ನು ಜಿಲ್ಲಾ ಕೇಂದ್ರಕ್ಕೆ ವರ್ಗಾಯಿಸಬೇಕು. ಅವರಿಗೆ ಸುರಕ್ಷಿತ ವಸತಿ ವ್ಯವಸ್ಥೆ ಹಾಗೂ ಸೂಕ್ತ ಭದ್ರತೆಯನ್ನು ಒದಗಿಸಬೇಕು’ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಸರ್ಕಾರಿ ಸಿಬ್ಬಂದಿ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ಸಚಿವಾಲಯದಲ್ಲಿರುವ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸಿನ್ಹಾ ಹೇಳಿದ್ದಾರೆ.
ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಗೊಳ್ಳಲು ಇಷ್ಟಪಡದ ಹಿಂದೂ ಸರ್ಕಾರಿ ಉದ್ಯೋಗಿಗಳು ಜಮ್ಮು ವಲಯದಲ್ಲಿ ವರ್ಗಾವಣೆಗಾಗಿಯೂ ಬೇಡಿಕೆ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಮಂಗಳವಾರ ರಜನೀ ಬಾಲಾ ಎಂಬ ಕಾಶ್ಮೀರದ ಕುಲ್ಗಾಂನ ಹಿಂದೂ ಶಾಲಾ ಶಿಕ್ಷಕಿಯನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಹಿಂದೆ ಮೇ 12 ರಂದು ಆದಾಯ ಇಲಾಖೆ ಹಿಂದೂ ಅಧಿಕಾರಿ ರಾಹುಲ್ ಭಟ್ ಹಾಗೂ ಕಳೆದ ವಾರ ಟಿಕ್‌ಟಾಕ್ ಸ್ಟಾರ್ ಅಮ್ರೀನ್ ಭಟ್ ಅವರ ಹತ್ಯೆ ಮಾಡಲಾಗಿತ್ತು.
ನಾಳೆ ಶಾ ಸಭೆ:
ಈ ನಡುವೆ, ಕಾಶ್ಮೀರದಲ್ಲಿನ ಪರಿಸ್ಥಿತಿ ಚರ್ಚೆಗೆ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಲಿದ್ದಾರೆ.
'ಕಾಶ್ಮೀರಿ ಪಂಡಿತರು ಪ್ರತಿಭಟಿಸುತ್ತಿದ್ದರೆ, ಬಿಜೆಪಿ ಸಂಭ್ರಮಾಚರಣೆಯಲ್ಲಿ ವ್ಯಸ್ತವಾಗಿದೆ'
ಸರ್ಕಾರವು ಕಾಶ್ಮೀರಿ ಪಂಡಿತರು ಕಣಿವೆಯಲ್ಲಿ ಮರು ನೆಲೆಸಬೇಕೆಂದು ಬಯಸುತ್ತದೆ, ಆದರೆ ಹಿಂದೂ ಅಲ್ಪಸಂಖ್ಯಾತರು ಒಂದಾದ ಬಳಿಕ ಮತ್ತೊಂದರಂತೆ ನಡೆಯುತ್ತಿರುವ ಹತ್ಯೆಗಳಿಗೆ ಹೆದರುತ್ತಾರೆ. ಹೀಗಿರುವಾಗ ಅಲ್ಲಿ ಸರ್ಕಾರಿ ಕೆಲಸ ಮಾಡುತ್ತಿರುವ ಹಿಂದೂಗಳು ವರ್ಗಾವಣೆಗೆ ಆಗ್ರಹಿಸಿದ್ದಾರೆ. ಮೇ ತಿಂಗಳಲ್ಲಿ ಪ್ರಧಾನಿ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಉದ್ಯೋಗಿಗಳನ್ನು ಭಯೋತ್ಪಾದಕರು ಕೊಂದಿದ್ದರು. ನಿನ್ನೆ ಕಾಶ್ಮೀರದಲ್ಲಿ ನಡೆದ ಹಿಂದೂ ಶಿಕ್ಷಕನ ಹತ್ಯೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿದ್ದಾರೆ. ಕಾಶ್ಮೀರಿ ಪಂಡಿತರು ಧರಣಿಯಲ್ಲಿದ್ದಾರೆ, ಆದರೆ ಸರ್ಕಾರ ತನ್ನ ಎಂಟು ವರ್ಷಗಳ ಸಂಭ್ರಮಾಚರಣೆಯಲ್ಲಿ ನಿರತವಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಶ್ಮೀರದಲ್ಲಿ ಕಳೆದ 5 ತಿಂಗಳಲ್ಲಿ 15 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು, 18 ನಾಗರಿಕರು ಸಾವನ್ನಪ್ಪಿದ್ದಾರೆ. ನಿನ್ನೆಯೂ ಶಿಕ್ಷಕಿಯೊಬ್ಬರ ಕೊಲೆಯಾಗಿತ್ತು ಎಂದಿದ್ದಾರೆ.
ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, "ಕಾಶ್ಮೀರಿ ಪಂಡಿತರು 18 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ ಆದರೆ ಬಿಜೆಪಿ ತನ್ನ ಎಂಟು ವರ್ಷಗಳ ಅಧಿಕಾರದ ಸಂಭ್ರಮಾಚರಣೆಯಲ್ಲಿ ನಿರತವಾಗಿದೆ" ಎಂದು ಹೇಳಿದರು. ಪ್ರಧಾನಿಯವರೇ, ಇದು ಸಿನಿಮಾವಲ್ಲ, ಇದು ಇಂದಿನ ಕಾಶ್ಮೀರದ ವಾಸ್ತವ. ಕಾಶ್ಮೀರ ಕಣಿವೆಯ ಕುಲ್ಗಾಮ್ ಜಿಲ್ಲೆಯಲ್ಲಿ ಹಿಂದೂ ಶಿಕ್ಷಕಿಯ ಹತ್ಯೆಯನ್ನು ವಿರೋಧಿಸಿ ಮಂಗಳವಾರ ಜಮ್ಮು ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು. ಪ್ರತಿಭಟನಾಕಾರರು ಆಡಳಿತದ ಪ್ರತಿಕೃತಿ ದಹಿಸಿ ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದೆಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ