Farmers Protest: ಅನ್ಯಾಯವಾದರೆ ಮತ್ತೆ ಪ್ರತಿಭಟಿಸ್ತೀವಿ: ಗವರ್ನರ್ ಎಚ್ಚರಿಕೆ!

By Suvarna NewsFirst Published Jan 3, 2022, 8:48 AM IST
Highlights

* ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವುದು ರೈತರ ಐತಿಹಾಸಿಕ ವಿಜಯ

* ರೈತ ಚಳುವಳಿ ಸ್ಥಗಿತಗೊಂಡಿದ್ದಷ್ಟೇ, ಮತ್ತೆ ಅನ್ಯಾಯವಾದರೆ ಮತ್ತೆ ಪ್ರತಿಭಟಿಸ್ತೀವಿ

* ಸರ್ಕಾರವು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕಾನೂನುಬದ್ಧಗೊಳಿಸಬೇಕು

ನವದೆಹಲಿ(ಜ.03): ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವುದು ರೈತರ ಐತಿಹಾಸಿಕ ವಿಜಯ ಎಂದು ಬಣ್ಣಿಸಿರುವ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್, ಪ್ರತಿಭಟನಾನಿರತ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಭಾನುವಾರ ಹೇಳಿದ್ದಾರೆ. ಸರ್ಕಾರವು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕಾನೂನುಬದ್ಧಗೊಳಿಸಬೇಕು ಎಂದು ಅವರು ಹೇಳಿದರು. ಸ್ವತಃ ತಾವೂ ಕೂಡ ಈ ಕೃಷಿ ಕಾನೂನುಗಳಿಗೆ ವಿರುದ್ಧವಾಗಿರುವುದಾಗಿ ಮಲಿಕ್ ಹೇಳಿದ್ದಾರೆ.

ಹರಿಯಾಣದ ಚಾರ್ಖಿ ದಾದ್ರಿಯಲ್ಲಿ ಫೋಗಟ್ ಖಾಪ್ ಅವರಿಗೆ ಸನ್ಮಾನ ಕಾರ್ಯಕ್ರಮದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್, ರೈತರ ಚಳವಳಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಅನ್ಯಾಯವಾದರೆ ಮತ್ತೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಅನ್ನದಾತರು (ರೈತರು) ತಮ್ಮ ಹಕ್ಕುಗಳ ಹೋರಾಟದಲ್ಲಿ ಗೆದ್ದಿದ್ದಾರೆ ಮತ್ತು ಮುಂದೆ ಯಾವುದೇ ಸರ್ಕಾರ ರೈತರ ವಿರುದ್ಧ ಕ್ರಮಕೈಗೊಂಡರೆ ಅದನ್ನು ಪ್ರಾಮಾಣಿಕವಾಗಿ ವಿರೋಧಿಸುತ್ತೇನೆ ಮತ್ತು ಹುದ್ದೆ ತೊರೆಯಲು ಬಂದರೂ ಹಿಂದೆ ಸರಿಯುವುದಿಲ್ಲ ಎಂದು ಮಲಿಕ್ ಹೇಳಿದರು. ಅಲ್ಲದೇ ಈಗಾಗಲೇ ರೈತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವಂತೆ ಮನವಿ ಮಾಡಿರುವ ಮಲಿಕ್, ಎಂಎಸ್‌ಪಿಯನ್ನು ಕಾನೂನು ಚೌಕಟ್ಟಿನಡಿ ತರಬೇಕೆಂದೂ ಆಗ್ರಹಿಸಿದ್ದಾರೆ. 

‘ನನಗೆ ನನ್ನ ಹುದ್ದೆಗಿಂತ ರೈತರ ಹಿತಾಸಕ್ತಿಯೇ ಮುಖ್ಯ’ ಎಂದು ಮಲಿಕ್ ಹೇಳಿದರು. ರೈತರ ಹಕ್ಕುಗಳಿಗೆ ಧಕ್ಕೆ ಬರಲು ಬಿಡುವುದಿಲ್ಲ ಎಂದೂ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿಸರಕಾರ ರೈತರಿಗೆ ಸಂಬಂಧಿಸಿದ ಕಾನೂನು ರೂಪಿಸುವಾಗ ಮೊದಲು ರೈತರ ಅಭಿಪ್ರಾಯ ಪಡೆದು ಯಾವುದೇ ಕಾನೂನು ರೂಪಿಸುವುದಾದರೆ ರೈತರ ಅನುಕೂಲಕ್ಕಾಗಿ ಮಾಡಬೇಕು ಎಂದಿದ್ದಾರೆ. 

click me!