ಕೇಂದ್ರ ಸರ್ಕಾರದ ಭೂಮಿ ನಗದೀಕರಣಕ್ಕೆ ಹೊಸ ನಿಗಮ!

Published : Mar 10, 2022, 07:17 AM IST
ಕೇಂದ್ರ ಸರ್ಕಾರದ ಭೂಮಿ ನಗದೀಕರಣಕ್ಕೆ ಹೊಸ ನಿಗಮ!

ಸಾರಾಂಶ

* ಬೃಹತ್‌ ಸುಧಾರಣಾ ಕ್ರಮಕ್ಕೆ ಮೋದಿ ಸಂಪುಟ ಅಸ್ತು * ಕೇಂದ್ರ ಸರ್ಕಾರದ ಭೂಮಿ ನಗದೀಕರಣಕ್ಕೆ ಹೊಸ ನಿಗಮ * 4 ವರ್ಷದಲ್ಲಿ 6 ಲಕ್ಷ ಕೋಟಿ ರು. ಸಂಗ್ರಹ?

ನವದೆಹಲಿ(ಮಾ.10): ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬೃಹತ್‌ ಸುಧಾರಣಾ ಕ್ರಮಗಳಲ್ಲಿ ಒಂದು ಎನ್ನಲಾದ ಕೇಂದ್ರ ಸರ್ಕಾರದ ಭೂಮಿ ನಗದೀಕರಣ ವ್ಯವಸ್ಥೆಗೆ ಅಧಿಕೃತ ಚಾಲನೆ ದೊರೆತಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಆರು ಲಕ್ಷ ಕೋಟಿ ರು.ಗಳನ್ನು ಸರ್ಕಾರದ ಬೊಕ್ಕಸಕ್ಕೆ ಹರಿದು ಬರುವಂತೆ ಮಾಡಬಲ್ಲ ಈ ಯೋಜನೆಯ ಜಾರಿಗೆ ಪ್ರತ್ಯೇಕ ನಿಗಮದ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ.

2021 ಹಾಗೂ 2022ನೇ ಸಾಲಿನ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಕೇಂದ್ರ ಸರ್ಕಾರದ ಬಳಿಯಿರುವ ಹೆಚ್ಚುವರಿ ಅಥವಾ ಅನುಪಯುಕ್ತ ಭೂಮಿಯನ್ನು ನಗದೀಕರಣಗೊಳಿಸುವ ಮೂಲಕ ದೊಡ್ಡ ಮೊತ್ತದ ಹಣ ಸಂಗ್ರಹಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಪ್ರಕಟಿಸಿದ್ದರು. ಅದರಂತೆ ಬುಧವಾರ ರಾಷ್ಟ್ರೀಯ ಭೂಮಿ ನಗದೀಕರಣ ನಿಗಮ (ಎನ್‌ಎಲ್‌ಎಂಸಿ) ಸ್ಥಾಪನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಭೂಮಿ ನಗದೀಕರಣ ಹೇಗೆ?:

ಎನ್‌ಎಲ್‌ಎಂಸಿ ನಿಗಮವು ಕೇಂದ್ರ ಸರ್ಕಾರದ ಕಂಪನಿಗಳು, ಸಂಸ್ಥೆಗಳು ಹಾಗೂ ಏಜೆನ್ಸಿಗಳ ಬಳಿಯಿರುವ ಹೆಚ್ಚುವರಿ ಅಥವಾ ಅನುಪಯುಕ್ತ ಭೂಮಿಗೆ ಮ್ಯಾನೇಜರ್‌ ರೀತಿ ಕೆಲಸ ಮಾಡಲಿದೆ. ದೇಶಾದ್ಯಂತ ಇಂತಹ ಭೂಮಿಯನ್ನು ಗುರುತಿಸುವುದು, ಮಾರಾಟ ಮಾಡುವುದು, ಗುತ್ತಿಗೆ ನೀಡುವುದು, ಬಾಡಿಗೆ ನೀಡುವುದೂ ಸೇರಿದಂತೆ ನಾನಾ ಉಪಕ್ರಮಗಳಿಂದ ಸರ್ಕಾರಕ್ಕೆ ಹಣ ಬರುವಂತೆ ನೋಡಿಕೊಳ್ಳಲಿದೆ.

ಈಗಾಗಲೇ 3400 ಎಕರೆ ಲಭ್ಯ:

ನಿಗಮವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಒಡೆತನದಲ್ಲಿ ಕೆಲಸ ಮಾಡಲಿದೆ. ಇದರ ಸ್ಥಾಪನೆಗೆ ಅಧಿಕೃತವಾಗಿ 5000 ಕೋಟಿ ರು. ಷೇರು ಬಂಡವಾಳ ಹಾಗೂ 150 ಕೋಟಿ ರು. ಆರಂಭಿಕ ಷೇರು ಬಂಡವಾಳವನ್ನು ಕೇಂದ್ರ ಸರ್ಕಾರ ನೀಡಲಿದೆ. ಈಗಾಗಲೇ ಕೇಂದ್ರ ಸರ್ಕಾರಿ ಸಂಸ್ಥೆಗಳಾದ ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌, ಭಾರತ್‌ ಪೆಟ್ರೋಲಿಯಂ, ಬಿಇಎಂಎಲ್‌, ಎಚ್‌ಎಂಟಿ ಮುಂತಾದವು ತಮ್ಮಲ್ಲಿ 3400 ಎಕರೆ ಹೆಚ್ಚುವರಿ ಜಾಗ ಲಭ್ಯವಿರುವುದಾಗಿ ಕೇಂದ್ರಕ್ಕೆ ವರದಿ ನೀಡಿವೆ.

5ರಿಂದ 10 ವರ್ಷ ಭಾರಿ ಆದಾಯ:

ಕೇಂದ್ರ ವಿತ್ತ ಸಚಿವಾಲಯದಡಿ ಕೆಲಸ ಮಾಡುವ ಎನ್‌ಎಲ್‌ಎಂಸಿ ನಿಗಮಕ್ಕೆ ಒಬ್ಬ ಸಿಇಒ ಇರುತ್ತಾರೆ. ಅಲ್ಲದೆ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮದ ಪ್ರಮುಖರು ಸದಸ್ಯರಾಗಿರುತ್ತಾರೆ. ಮುಂದಿನ 5ರಿಂದ 10 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರಿ ಸಂಸ್ಥೆಗಳ ಬಳಿಯಿರುವ ಅನುಪಯುಕ್ತ ಭೂಮಿಯನ್ನು ಗುರುತಿಸುವುದು ಹಾಗೂ ನಗದೀಕರಣಗೊಳಿಸುವ ಕಾರ್ಯವನ್ನು ದೊಡ್ಡ ಪ್ರಮಾಣದಲ್ಲಿ ಈ ನಿಗಮ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?