ನಿರ್ಬಂಧಿತ ಗಣಿಗಳಿಂದ 50% ಕಲ್ಲಿದ್ದಲು ಮಾರಾಟಕ್ಕೆ ಕೇಂದ್ರದ ಸಿದ್ಧತೆ!

By Suvarna NewsFirst Published Oct 6, 2021, 5:04 PM IST
Highlights

* ವಾರ್ಷಿಕ 500 ದಶಲಕ್ಷ ಟನ್ ಕಲ್ಲಿದ್ದಲು ಮತ್ತು ಲಿಗ್ನೈಟ್ ಮಾರಾಟ ಸಾಮರ್ಥ್ಯ

* ನಿರ್ಬಂಧಿತ ಗಣಿಗಳಿಂದ 50% ಕಲ್ಲಿದ್ದಲು ಮಾರಾಟಕ್ಕೆ ಕೇಂದ್ರದ ಸಿದ್ಧತೆ

* ಗಣಿ ಸಚಿವಾಲಯದಿಂದ ನಿಯಮಾವಳಿಗಳ ಅಧಿಸೂಚನೆ ಪ್ರಕಟ

* 100ಕ್ಕಿಂತ ಅಧಿಕ ನಿರ್ಬಂಧಿತ ಗಣಿಗಳು, ಕಂದು ಕಲ್ಲಿದ್ದಲು ಗಣಿಗಳಿಗೆ ಪ್ರಯೋಜನ

ನವದೆಹಲಿ(ಆ.06): ಕೇಂದ್ರ ಕಲ್ಲಿದ್ದಲು ಸಚಿವಾಲಯ( Ministry of Coal) 1960ರ ಖನಿಜ ವಿನಾಯಿತಿ ನಿಯಮಾವಳಿಗಳಿಗೆ(Mineral Concession Rules, 1960) ತಿದ್ದುಪಡಿ ತಂದಿದ್ದು, ನಿರ್ಬಂಧಿತ ಗಣಿಗಳಲ್ಲಿ 50% ಕಲ್ಲಿದ್ದಲು ಹಾಗೂ ಕಂದು ಕಲ್ಲಿದ್ದಲನ್ನು(Coal) ಹೆಚ್ಚುವರಿ ದರಕ್ಕೆ ಮಾರಾಟ ಮಾಡಲು ಇದು ಅನುವು ಕಲ್ಪಿಸಲಿದೆ. ನಿರ್ಬಂಧಿತ ಗಣಿಗಳ ಹರಾಜುದಾರ ಆರ್ಥಿಕ ವರ್ಷದಲ್ಲಿ ಉತ್ಪಾದಿಸುವ ಕಲ್ಲಿದ್ದಲಿನ 50% ಪ್ರಮಾಣವನ್ನು ಮಾರಾಟ ಮಾಡಬಹುದು.

ಈ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರ ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯಿದೆಗೆ ತಿದ್ದುಪಡಿ ತಂದಿದೆ. ಕೇಂದ್ರ ಸರ್ಕಾರದ ಈ ನಿಯಮಾವಳಿಗಳು ಖಾಸಗಿ ಮತ್ತು ಸಾರ್ವಜನಿಕ ವಲಯದ ನಿರ್ಬಂಧಿತ ಗಣಿಗಳಿಗೆ ಅನ್ವಯವಾಗಲಿದೆ.

ದೇಶದಲ್ಲಿ ಕಲ್ಲಿ​ದ್ದಲು ಕೊರತೆ: ವಿದ್ಯುತ್‌ ಉತ್ಪಾ​ದನೆ, ಪೂರೈಕೆ ಕುಂಠಿತ ಭೀತಿ!

ಈ ತಿದ್ದುಪಡಿಯಿಂದ ಕೇಂದ್ರ ಸರ್ಕಾರವು, ಮಾರುಕಟ್ಟೆಯಲ್ಲಿ ಹೆಚ್ಚುವರಿ ಕಲ್ಲಿದ್ದಲು(Coal) ಲಭ್ಯತೆಗೆ ಅವಕಾಶ ಕಲ್ಪಿಸಿದಂತಾಗಿದೆ. ಜತೆಗೆ, ಹೆಚ್ಚುವರಿ ಕಲ್ಲಿದ್ದಲು ಬಳಕೆ ಹಾಗೂ ಗಣಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ.

ಹೆಚ್ಚುವರಿ ಕಲ್ಲಿದ್ದಲು ಲಭ್ಯತೆಯಿಂದ ವಿದ್ಯುತ್ ಸ್ಥಾವರಗಳ ಮೇಲಿನ ಒತ್ತಡ ಕಡಿಮೆಯಾಲಿದೆ, ಆಮದು ಪ್ರಮಾಣ ತಗ್ಗಲಿದೆ. ನಿರ್ಬಂಧಿತ ಗಣಿಗಳ ಕಲ್ಲಿದ್ದಲು ಉತ್ಪಾದನೆ ಹೆಚ್ಚಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ರಾಜ್ಯ ಸರಕಾರಗಳ ರಾಯಧನ ಹೆಚ್ಚಳ, ಬೊಕ್ಕಸ ತುಂಬಲು ನೆರವಾಗಲಿದೆ. ವಾರ್ಷಿಕ 500 ದಶಲಕ್ಷ ಟನ್ ಕಲ್ಲಿದ್ದಲು ಹೆಚ್ಚುವರಿ ಉತ್ಪಾದನೆ ಆಗಲಿದೆ.

ಅಲ್ಲದೆ, ಕೇಂದ್ರ ಸರ್ಕಾರ ಕೇಂದ್ರ ಸ್ವಾಮ್ಯದ ಕಂಪನಿಗಳು ಅಥವಾ ನಿಗಮಗಳಿಗೆ 50 ವರ್ಷಗಳ ತನಕ ಗಣಿ ಗುತ್ತಿಗೆ ನೀಡಲು ಅವಕಾಶ ಕಲ್ಪಿಸಿದೆ.

ಇದರಿಂದ ನಿರಂತರ ಕಲ್ಲಿದ್ದಲು ಉತ್ಪಾದನೆ ಮತ್ತು ಆದಾಯ ಹೆಚ್ಚಳ ಸಾಧ್ಯವಾಗಲಿದೆ.

click me!