ಭಾರತದಲ್ಲಿ 2 ತಿಂಗಳಿಗೆ ಆಗುವಷ್ಟು ತೈಲ ಸಂಗ್ರಹವಿದೆ : ಕೇಂದ್ರ ಸ್ಪಷ್ಟನೆ

Kannadaprabha News   | Kannada Prabha
Published : Mar 27, 2026, 04:03 AM IST
fuel

ಸಾರಾಂಶ

ದೇಶದಲ್ಲೆಲ್ಲೂ ಪೆಟ್ರೋಲ್‌, ಡೀಸೆಲ್‌ ಅಥವಾ ಎಲ್‌ಪಿಜಿ ಕೊರತೆ ಇಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನೇ ನಡೆಯತ್ತಿದ್ದರೂ ದೇಶದ ನಾಗರಿಕರಿಗೆ 2 ತಿಂಗಳಿಗೆ ಬೇಕಾಗುವಷ್ಟು ತೈಲ ಸಂಗ್ರಹವಿದೆ. ಅಲ್ಲದೆ, 1 ತಿಂಗಳಿಗೆ ಆಗುವಷ್ಟು ಅನಿಲ ದಾಸ್ತಾನು ಇದೆ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ.

ನವದೆಹಲಿ : ದೇಶದಲ್ಲೆಲ್ಲೂ ಪೆಟ್ರೋಲ್‌, ಡೀಸೆಲ್‌ ಅಥವಾ ಎಲ್‌ಪಿಜಿ ಕೊರತೆ ಇಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನೇ ನಡೆಯತ್ತಿದ್ದರೂ ದೇಶದ ನಾಗರಿಕರಿಗೆ 2 ತಿಂಗಳಿಗೆ ಬೇಕಾಗುವಷ್ಟು ತೈಲ ಸಂಗ್ರಹವಿದೆ. ಅಲ್ಲದೆ, 1 ತಿಂಗಳಿಗೆ ಆಗುವಷ್ಟು ಅನಿಲ ದಾಸ್ತಾನು ಇದೆ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ.

ಇರಾನ್‌-ಅಮೆರಿಕ ಕದನದ ಕಾರಣ ದೇಶದಲ್ಲಿ ಎಲ್‌ಪಿಜಿ ಪೂರೈಕೆ ವ್ಯತ್ಯಯವಾಗಿದೆ. ತೈಲಕ್ಕೂ ಕೊರತೆ ಆಗಬಹುದು ಎಂಬ ವದಂತಿ ಹರಡಿವೆ. ಈ ಬಗ್ಗೆ ಗುರುವಾರ ಅಂಕಿ ಅಂಶ ಸಮೇತ ಸ್ಪಷ್ಟನೆ ನೀಡಿರುವ ತೈಲ ಸಚಿವಾಲಯ, ‘ಭಾರತದ ಪೆಟ್ರೋಲ್‌ ಮತ್ತು ಎಲ್‌ಪಿಜಿ ಪೂರೈಕೆ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಜನರಲ್ಲಿ ಆತಂಕ ಮೂಡಿಸುವ ರೀತಿಯಲ್ಲಿ ಯಾರೂ ದಾರಿ ತಪ್ಪಿಸುವ ಪ್ರಯತ್ನ ನಡೆಸಬಾರದು’ ಎಂದು ಸೂಚಿಸಿದೆ.

60 ದಿನಕ್ಕಾಗುವಷ್ಟು ಸಂಗ್ರಹ:

ಮಧ್ಯಪ್ರಾಚ್ಯ ಸಂಘರ್ಷ 27ನೇ ದಿನಕ್ಕೆ ಕಾಲಿಟ್ಟಿದ್ದರೂ ನಮ್ಮಲ್ಲಿ ಒಟ್ಟಾರೆ 74 ದಿನಗಳಿಗಾಗುವಷ್ಟು ತೈಲ ಸಂಗ್ರಹ ಇದೆ. ಸದ್ಯ 60 ದಿನಗಳಿಗಾಗುವಷ್ಟು ನೈಜ ಸಂಗ್ರಹ ಇದೆ. ಮುಂದಿನ ಎರಡು ತಿಂಗಳ ಕಚ್ಚಾ ತೈಲ ಪೂರೈಕೆಯನ್ನೂ ಈಗಾಗಲೇ ಖಚಿತಪಡಿಸಿಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿದೆ.

ಭಾರತಕ್ಕೆ ಸಮಸ್ಯೆ ಇಲ್ಲ:

ವಿಶ್ವಾದ್ಯಂತ ತೈಲ ದರ ಏರಿಕೆಯ ಬಿಸಿ ತಟ್ಟಿದೆ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ಗಾಗಿ ರೇಷನಿಂಗ್‌ ವ್ಯವಸ್ಥೆ ಜಾರಿಗೆ ಬಂದಿದೆ. ಗ್ಯಾಸ್‌ ಮತ್ತು ಪೆಟ್ರೋಲ್‌ ಪಂಪ್‌ಗಳು ಬಂದ್‌ ಆಗಿವೆ. ಇನ್ನು ಕೆಲ ದೇಶಗಳು ರಾಷ್ಟ್ರೀಯ ಇಂಧನ ತುರ್ತುಪರಿಸ್ಥಿತಿ ಘೋಷಿಸಿವೆ. ಆದರೆ ಭಾರತದಲ್ಲಿ ಅಂಥ ಸ್ಥಿತಿ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವಿಡಿಯೋಗಳಿಂದಾಗಿ ಕೆಲ ಪೆಟ್ರೋಲ್‌ ಪಂಪ್‌ಗಳಲ್ಲಿ ಜನಜಂಗುಳಿ ಕಂಡು ಬಂದಿರಬಹುದು ಅಷ್ಟೆ.

ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ತೈಲ ಕಂಪನಿಗಳ ಡಿಪೋಗಳು ರಾತ್ರಿ ವೇಳೆಯೂ ಕಾರ್ಯಾಚರಣೆ ನಡೆಸುತ್ತಿವೆ. ಹಣದ ಸಮಸ್ಯೆಯಿಂದಾಗಿ ಎಲ್ಲೂ ಪೆಟ್ರೋಲ್‌, ಡೀಸೆಲ್‌ ಪೂರೈಕೆಗೆ ಸಮಸ್ಯೆಯಾಗದಂತೆ ಪೆಟ್ರೋಲ್‌ ಪಂಪ್‌ಗಳ ಮರುಪಾವತಿ ಅವಧಿಯನ್ನು ಮೂರುದಿನಕ್ಕೇರಿಸಲಾಗಿದೆ ಎಂದು ತಿಳಿಸಿದೆ.

ಎಲ್‌ಪಿಜಿ ಕೊರತೆಯೂ ಇಲ್ಲ:

‘ಸುಮಾರು 1 ತಿಂಗಳಿಗಾಗುವಷ್ಟು ಎಲ್‌ಪಿಜಿ ಸಂಗ್ರಹ ಮಾಡಲಾಗಿದೆ. ಇನ್ನಷ್ಟು ಖರೀದಿ ಪ್ರಕ್ರಿಯೆ ನಡೆದಿದೆ’ ಎಂದು ಎಲ್‌ಪಿಜಿ ಪರಿಸ್ಥಿತಿಯ ಬಗ್ಗೆ ಸಚಿವಾಲಯ ಸ್ಪಷ್ಟಪಡಿಸಿದೆ.ಇನ್ನು ದೇಶೀಯವಾಗಿ ಎಲ್‌ಪಿಜಿ ಉತ್ಪಾದನೆಯನ್ನು ಶೇ.40ಕ್ಕೇರಿಸಲಾಗಿದೆ. ನಿತ್ಯ 80 ಟಿಎಂಟಿ(ಸಾವಿರ ಮೆಟ್ರಿಕ್‌ ಟನ್‌)ಯಷ್ಟು ಎಲ್‌ಪಿಜಿಗೆ ಬೇಡಿಕೆ ಇದ್ದು, ದೇಶೀಯ ಉತ್ಪಾದನೆಯನ್ನು 50 ಟಿಎಂಟಿಗೆ ಹೆಚ್ಚಿಸಲಾಗಿದೆ. ಈ ನಡುವೆ, ಎಲ್‌ಪಿಜಿ ಆಮದು 30 ಟಿಎಂಟಿಗೆ ಇಳಿಕೆಯಾಗಿದೆ. ಅಂದರೆ ಭಾರತದಲ್ಲಿ ಎಲ್ಪಿಜಿ ಉತ್ಪಾದನೆ ಹೆಚ್ಚಾಗಿ, ಆಮದು ಕಡಿಮೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಏತನ್ಮಧ್ಯೆ, 800 ಟಿಎಂಟಿಯಷ್ಟು ಎಲ್‌ಪಿಜಿ ಆಮದನ್ನು ಈಗಾಗಲೇ ಖಚಿತಪಡಿಸಲಾಗಿದೆ. ಅಮೆರಿಕ, ರಷ್ಯಾ, ಆಸ್ಟ್ರೇಲಿಯಾ ಮತ್ತು ಇತರೆ ರಾಷ್ಟ್ರಗಳಿಂದ ಎಲ್‌ಪಿಜಿ ಹೊತ್ತ ಹಡಗುಗಳು ಭಾರತದತ್ತ ಹೊರಟಿವೆ ಎಂದು ತಿಳಿಸಿದೆ.

ತೈಲ ಕಂಪನಿಗಳು ನಿತ್ಯ 50 ಲಕ್ಷಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಪೂರೈಸುತ್ತಿವೆ. ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯನ್ನೂ ಶೇ.50ಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇವ ಗೋವಾದ ಪ್ರಜ್ವಲ್ ರೇವಣ್ಣ: 30ಕ್ಕೂ ಹೆಚ್ಚು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ
ಸಿಎಂ ಸಾರ್ವಜನಿಕ ಸಮಾವೇಶ ಮುಗಿಸಿ ವಾಪಸಾಗುತ್ತಿದ್ದ ಬಸ್‌ ಟ್ರಕ್‌ಗೆ ಢಿಕ್ಕಿ, 10 ಮಂದಿ ದಾರುಣ ಸಾವು!