ಈ ಬಾರಿ ವೈದ್ಯರ ರಕ್ಷಣೆ ಸುಗ್ರೀವಾಜ್ಞೆ ಸೇರಿ 23 ಮಸೂದೆ ಮಂಡನೆ!

By Suvarna NewsFirst Published Sep 12, 2020, 1:43 PM IST
Highlights

ಈ ಬಾರಿ ವೈದ್ಯರ ರಕ್ಷಣೆ ಸುಗ್ರೀವಾಜ್ಞೆ ಸೇರಿ 23 ಮಸೂದೆ ಮಂಡನೆ| ನಾಡಿದ್ದಿನಿಂದ 18 ದಿನ ಸಂಸತ್ತಿನ ಮಳೆಗಾಲದ ಅಧಿವೇಶನ

ನವದೆಹಲಿ(ಸೆ.12): 11 ಸುಗ್ರೀವಾಜ್ಞೆಗಳೂ ಸೇರಿದಂತೆ ಒಟ್ಟು 23 ಮಸೂದೆಗಳನ್ನು ಈ ಬಾರಿಯ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸೋಮವಾರದಿಂದ 18 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಅದರಲ್ಲಿ ಮಂಡನೆಯಾಗಲಿರುವ ಮುಖ್ಯವಾದ ಸುಗ್ರೀವಾಜ್ಞೆಗಳ ಪೈಕಿ ಕೊರೋನಾ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುವುದನ್ನು ಜಾಮೀನುರಹಿತ ಅಪರಾಧವಾಗಿಸಿ 7 ವರ್ಷ ಜೈಲುಶಿಕ್ಷೆ ಮತ್ತು 5 ಲಕ್ಷ ರು. ದಂಡ ವಿಧಿಸುವ ಸುಗ್ರೀವಾಜ್ಞೆಯೂ ಸೇರಿದೆ. ಈ ಮಸೂದೆಯಿಂದ ಆಶಾ ಕಾರ್ಯಕರ್ತೆಯರು, ವೈದ್ಯರು, ನರ್ಸ್‌ಗಳೂ ಸೇರಿದಂತೆ ಎಲ್ಲಾ ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆ ಸಿಗಲಿದೆ.

ಇನ್ನು, ಕೊರೋನಾ ಹೋರಾಟಕ್ಕೆ ಹಣ ಸಂಗ್ರಹಿಸಲು ಸಂಸದರ ವೇತನ ಕಡಿತೊಗಳಿಸುವ ಸುಗ್ರೀವಾಜ್ಞೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ (ಎಪಿಎಂಸಿ)ಗಳ ಹೊರಗೂ ರೈತರಿಗೆ ತಮ್ಮ ಕೃಷ್ಯುತ್ಪನ್ನಗಳನ್ನು ಮಾರಾಟ ಮಾಡಲು ಅಧಿಕಾರ ನೀಡುವ ಸುಗ್ರೀವಾಜ್ಞೆಗಳು ಸಂಸತ್ತಿನಲ್ಲಿ ಮಂಡನೆಯಾಗಲಿರುವ ಇನ್ನೆರಡು ಪ್ರಮುಖ ಸುಗ್ರೀವಾಜ್ಞೆಗಳಾಗಿವೆ.

ಇವುಗಳಲ್ಲದೆ, ಜಮ್ಮು ಕಾಶ್ಮೀರಕ್ಕೆ ಉರ್ದು ಮತ್ತು ಇಂಗ್ಲಿಷ್‌ ಅಲ್ಲದೆ ಕಾಶ್ಮೀರಿ, ಡೋಗ್ರಿ ಮತ್ತು ಹಿಂದಿಯನ್ನೂ ಅಧಿಕೃತ ಭಾಷೆಯನ್ನಾಗಿಸುವ ಮಸೂದೆ, ಪೂರಕ ಅಂದಾಜುಗಳ ಮಸೂದೆ, ಬಹುರಾಜ್ಯಗಳ ಸಹಕಾರ ಸಂಘಗಳ ಮಸೂದೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಹೆಚ್ಚು ಕಾರ್ಯವ್ಯಾಪ್ತಿ ನೀಡುವ ಮಸೂದೆ, ಮಾನವ ಮಲ ಹೊರುವ ಪದ್ಧತಿ ನಿಷೇಧಗೊಳಿಸುವ ಕಾಯ್ದೆಗೆ ತಿದ್ದುಪಡಿ ಮುಂತಾದ 12 ಹೊಸ ಮಸೂದೆಗಳೂ ಮಂಡನೆಯಾಗಲಿವೆ.

ಸುಗ್ರೀವಾಜ್ಞೆ ಜಾರಿಗೊಳಿಸಿದ ಮೇಲೆ ಅದನ್ನು 6 ತಿಂಗಳೊಳಗೆ ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆಯಬೇಕು. ಇಲ್ಲದಿದ್ದರೆ ಅದು ಅಸ್ತಿತ್ವ ಕಳೆದುಕೊಳ್ಳುತ್ತದೆ. ಆಗ ಮತ್ತೆ ಅದೇ ವಿಷಯದ ಮೇಲೆ ಸುಗ್ರೀವಾಜ್ಞೆ ಹೊರಡಿಸಬೇಕಾಗುತ್ತದೆ.

click me!