ಇತಿಹಾಸದಲ್ಲೇ ಮೊದಲ ಬಾರಿ ವಿಭಿನ್ನ ಅಧಿವೇಶನ: ಕಲಾಪದ ವಿಧಾನ ಬದಲು!

By Suvarna News  |  First Published Sep 12, 2020, 1:06 PM IST

ಇತಿಹಾಸದಲ್ಲೇ ಮೊದಲ ಬಾರಿ ನಾಡಿದ್ದಿಂದ ವಿಭಿನ್ನ ಅಧಿವೇಶನ| ಕೊರೋನಾ ಎಫೆಕ್ಟ್: ಲೋಕಸಭೆ, ರಾಜ್ಯಸಭೆ ಕಲಾಪದ ವಿಧಾನವೇ ಬದಲು| ಎರಡೂ ಸದನ ಸೇರಿಸಿ, ಒಮ್ಮೆ ಲೋಕಸಭೆ ಕಲಾಪ, ಇನ್ನೊಮ್ಮೆ ರಾಜ್ಯಸಭೆ| ಸಾಮಾಜಿಕ ಅಂತರ, ಕೊರೋನಾ ಟೆಸ್ಟ್‌, ಆಸನಗಳ ಮಧ್ಯೆ ಫೈಬರ್‌ ಶೀಟ್‌| ಸಂಸದರು ಪುಸ್ತಕದಲ್ಲಿ ಹಾಜರಿ ಹಾಕುವುದನ್ನು ತಪ್ಪಿಸಲು ಮೊಬೈಲ್‌ ಆ್ಯಪ್‌


ನವದೆಹಲಿ(ಸೆ.12): ಕೊರೋನಾ ವೈರಸ್‌ನಿಂದಾಗಿ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ವಿಭಿನ್ನ ಸ್ವರೂಪದಲ್ಲಿ ಸಂಸತ್ತಿನ ಅಧಿವೇಶನ ನಡೆಯಲು ಕ್ಷಣಗಣನೆ ಆರಂಭವಾಗಿದ್ದು, ಸೋಮವಾರದಿಂದ 18 ದಿನಗಳ ಕಲಾಪ ಆರಂಭಗೊಳ್ಳಲಿದೆ.

ವೈರಸ್‌ ಹರಡದಂತೆ ನೋಡಿಕೊಳ್ಳಲು ಸಂಸದರ ಆಸನದ ವ್ಯವಸ್ಥೆಯಿಂದ ಆರಂಭಿಸಿ ಕಲಾಪದ ವಿಧಾನದವರೆಗೆ ಎಲ್ಲವನ್ನೂ ಆಮೂಲಾಗ್ರ ಬದಲಾವಣೆ ಮಾಡಲಾಗಿದೆ. ಸಂಸದರು ದೂರ ದೂರ ಕುಳಿತುಕೊಳ್ಳಲು ಅನುಕೂಲವಾಗುವಂತೆ ಲೋಕಸಭೆ ಹಾಗೂ ರಾಜ್ಯಸಭೆಯ ಸಭಾಂಗಣವನ್ನು ಎರಡೂ ಸದನಗಳ ಕಲಾಪಕ್ಕೆ ಬಳಸಿಕೊಳ್ಳಲಾಗುತ್ತದೆ. ಮೊದಲ ದಿನವಾದ ಸೆ.14ರಂದು ಬೆಳಿಗ್ಗೆ 9ರಿಂದ 1ರವರೆಗೆ ಲೋಕಸಭೆಯ ಕಲಾಪ ನಡೆದರೆ, ಮಧ್ಯಾಹ್ನ 3ರಿಂದ 7ರವರೆಗೆ ರಾಜ್ಯಸಭೆ ಕಲಾಪ ನಡೆಯಲಿದೆ. ಮರುದಿನ ಬೆಳಿಗ್ಗೆ 9ರಿಂದ 1 ರಾಜ್ಯಸಭೆ ಕಲಾಪ ಮತ್ತು 3ರಿಂದ 7 ಲೋಕಸಭೆ ಕಲಾಪ ನಡೆಯಲಿದೆ. ಪ್ರಶ್ನೋತ್ತರ ಅವಧಿಯನ್ನು 30 ನಿಮಿಷಕ್ಕೆ ಇಳಿಸಲಾಗಿದೆ.

Tap to resize

Latest Videos

‘ಕಲಾಪದಲ್ಲಿ ಪಾಲ್ಗೊಳ್ಳುವ ಎಲ್ಲ ಸಂಸದರೂ ಸೇರಿದಂತೆ ಸಂಸತ್ತಿನ ಎಲ್ಲ ನೌಕರರಿಗೆ ಕೊರೋನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸಂಸದರು ಕುಳಿತುಕೊಳ್ಳಲು ದೂರ-ದೂರ ಆಸನದ ವ್ಯವಸ್ಥೆ ಮಾಡಲಾಗಿದೆ. ಎರಡು ಆಸನಗಳ ನಡುವೆ ಫೈಬರ್‌ ಶೀಟ್‌ ಅಳವಡಿಸಲಾಗುವುದು. ಲೋಕಸಭೆಯ ಸಭಾಂಗಣದಲ್ಲಿ 257 ಮತ್ತು ವೀಕ್ಷಕರ ಗ್ಯಾಲರಿಯಲ್ಲಿ 172 ಸಂಸದರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ರಾಜ್ಯಸಭೆಯ ಸಭಾಂಗಣದಲ್ಲಿ 60 ಸಂಸದರಿಗೆ ಮತ್ತು ವೀಕ್ಷಕರ ಗ್ಯಾಲರಿಯಲ್ಲಿ 51 ಸಂಸದರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಉಭಯ ಸದನಗಳ ಕಲಾಪಗಳು ಒಂದಾದ ಮೇಲೆ ಒಂದರಂತೆ ಎರಡೂ ಸಭಾಂಗಣಗಳನ್ನು ಬಳಸಿಕೊಂಡು ನಡೆಯಲಿವೆ. ಎರಡೂ ಸದನಗಳಲ್ಲಿ ಇನ್ನೊಂದು ಸಭಾಂಗಣದ ಕಲಾಪ ವೀಕ್ಷಿಸಲು ಬೃಹತ್‌ ಪರದೆ ಅಳವಡಿಸಲಾಗಿದೆ. ಧ್ವನಿ ಎರಡೂ ಸದನದಲ್ಲಿ ಕೇಳಿಸುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ತಿಳಿಸಿದ್ದಾರೆ.

ಸಂಸದರು ಹಾಜರಿ ನಮೂದಿಸಲು ಪುಸ್ತಕದ ಬದಲು ಮೊಬೈಲ್‌ ಆ್ಯಪ್‌ ಸಿದ್ಧಪಡಿಸಲಾಗಿದೆ. ಸಾಧ್ಯವಾದಷ್ಟುಕಾಗದದ ಬಳಕೆ ಕಡಿಮೆ ಮಾಡಿ ಡಿಜಿಟಲ್‌ ರೂಪದಲ್ಲಿ ವ್ಯವಹರಿಸಲು ಒತ್ತು ನೀಡಲಾಗಿದೆ. ವೀಕ್ಷಕರ ಗ್ಯಾಲರಿಯಲ್ಲಿ ಕುಳಿತ ಸಂಸದರು ತಮ್ಮ ಸರದಿ ಬಂದಾಗ ಪೋಡಿಯಂಗೆ ಹೋಗಿ ಮಾತನಾಡಬೇಕು ಎಂದೂ ಅವರು ಹೇಳಿದ್ದಾರೆ.

ಸಮಯ ಉಳಿಸಲು ಈ ಹಿಂದೆ ಪ್ರಶ್ನೋತ್ತರ ಅವಧಿಯನ್ನು ಸರ್ಕಾರ ರದ್ದುಗೊಳಿಸಿತ್ತು. ಅದಕ್ಕೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾದಾಗ ಅದನ್ನು ಅರ್ಧ ಗಂಟೆಗೆ ಇಳಿಸಿ, ಲಿಖಿತ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಲಾಗಿದೆ.

click me!