
ನವದೆಹಲಿ: ದಸರಾ ಖುಷಿಯಲ್ಲಿದ್ದ ರೈತರಿಗೆ ಕೇಂದ್ರ ಶುಭ ಸುದ್ದಿಯೊಂದನ್ನು ನೀಡಿದ್ದು, 2026-27ನೇ ಸಾಲಿನ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಗೋಧಿಯ ಕನಿಷ್ಠ ಬೆಂಬಲ ಬೆಲೆ 160 ರು. ಹೆಚ್ಚಿಸಿ 2585 ರು.ಗೆ ಏರಿಕೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯನ್ನು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ 6 ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ.
ಸೂರ್ಯಕಾಂತಿ ಬೆಲೆಯನ್ನು ಕ್ವಿಂಟಲ್‌ಗೆ 600 ರು., ಮಸೂರದ ಬೆಲೆ 300 ರು., ಸಾಸಿವೆ ಬೆಲೆ 250 ರು. ಬಾರ್ಲಿ ಬೆಲೆ 170 ರು., ಮತ್ತು ಕಡಲೆ ಬೆಲೆಯನ್ನು 225 ರು.ನಷ್ಟು ಹೆಚ್ಚಿಸಲಾಗಿದೆ.
ದೇಶಾದ್ಯಂತ ವಂದೇ ಮಾತರಂ 150ನೇ ವರ್ಷಾಚರಣೆ ನಿರ್ಧಾರ
ನವದೆಹಲಿ: ಸರ್ ಬಂಕಿಮಚಂದ್ರ ಚಟರ್ಜಿ ರಚಿತ ರಾಷ್ಟ್ರೀಯ ಗೀತೆಯಾದ ವಂದೇ ಮಾತರಂನ 150ನೇ ವರ್ಚಾಚರಣೆಯನ್ನು ದೇಶಾದ್ಯಂತ ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.ಈ ಗೀತೆಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರ್ವಹಿಸಿದ ಪಾತ್ರವನ್ನು ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಇದರ ಭಾಗವಾಗಿ ವಿದ್ಯಾರ್ಥಿಗಳು ಮತ್ತು ಯುವಸಮೂಹದ ಪಾಲ್ಗೊಳ್ಳುವಿಕೆಯ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
1870ರಲ್ಲಿ ಚಟರ್ಜಿ ರಚಿಸಿದ್ದ ಈ ಗೀತೆಯನ್ನು 1882ರಲ್ಲಿ ಮೊದಲ ಬಾರಿ ಪ್ರಕಟಿಸಲಾಗಿತ್ತು. 1896ರಲ್ಲಿ ರವೀಂದ್ರನಾಥ ಠ್ಯಾಗೋರ್ ಈ ಗೀತೆ ಹಾಡಿದ ಬಳಿಕ ಇದು ಭಾರೀ ಪ್ರಸಿದ್ಧಿಯಾಯಿತು. 1905ರ ಹೊತ್ತಿಗೆ ಇದು ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಬಹುಜನಪ್ರಿಯವಾಗಿತ್ತು. 1937ರಲ್ಲಿ ಇದರ ಮೊದಲ ಎರಡು ಪ್ಯಾರಾಗಳನ್ನು ದೇಶದ ರಾಷ್ಟ್ರೀಯ ಗೀತೆ ಎಂದು ಅಂಗೀಕರಿಸಲಾಯಿತು. ಅಂತಿಮವಾಗಿ 1950ರ ಅ.22ರಂದು ಈ ಗೀತೆಯನ್ನು ಪೂರ್ಣ ಪ್ರಮಾಣದಲ್ಲಿ ದೇಶದ ರಾಷ್ಟ್ರೀಯ ಗೀತೆ ಎಂದು ಘೋಷಿಸಿ ಅಂಗೀಕರಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ