ನವದೆಹಲಿ(ಮೇ.15): ಕೊರೋನಾ ವೈರಸ್ 2ನೇ ಅಲೆ ಸಂಪೂರ್ಣ ಭಾರತವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಹೆಚ್ಚುತ್ತಿದೆ. ನರಳಾಟ, ಆಕ್ರಂದ ಮುಗಿಲು ಮುಟ್ಟಿದೆ. ಬೆಡ್ ಇಲ್ಲ, ಆಕ್ಸಿಜನ್ ಇಲ್ಲ, ಲಸಿಕೆ ಇಲ್ಲ ಅನ್ನೋ ಆಕ್ರೋಶಗಳು ಹೆಚ್ಚಾಗುತ್ತಿದೆ. ಭಾರತದಲ್ಲಿ ಸದ್ಯ ತಲೆದೋರಿರುವ ಈ ಶೋಚನೀಯ ಪರಿಸ್ಥಿತಿಗೆ ಸರ್ಕಾರ ಹಾಗೂ ಜನ ಕಾರಣ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಯಾರ ನೆರವು ಸಿಗಲಿಲ್ಲ, ತಾಯಿ ಶವ ಹೆಗಲ ಮೇಲೆ ಹೊತ್ತು ಸಾಗಿದ ಮಗ!
ಕೊರೋನಾ ಅಬ್ಬರ ಹಾಗೂ ದೇಶದ ಪರಿಸ್ಥಿತಿ ಕುರಿತು ಪಾಸಿಟಿವಿಟಿ ಅನ್‌ಲಿಮಿಟೆಡ್ ಎಂಬ ಕಾರ್ಯಕ್ರಮದಲ್ಲಿ ಭಾಗವತ್ ಮಾತನಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೊರೋನಾ ಮೊದಲ ಅಲೆ ನಿಭಾಯಿಸಿದ ಬಳಿಕ ಸರ್ಕಾರ ನಿರ್ಲಕ್ಷ ತೋರಿತು. ಮಹಾಮಾರಿ ಕೊರೋನಾ ಗೆದ್ದು ಬಿಟ್ಟಿದ್ದೇವೆ ಎಂಬ ಮನಸ್ಥಿತಿ ಸರ್ಕಾರಕ್ಕಿತ್ತು. ಇತ್ತ ಜನರು ತಮ್ಮ ಸುರಕ್ಷತೆಯನ್ನೇ ಮರೆತರು. ಪರಿಣಾಮ 2ನೇ ಅಲೆಗೆ ತತ್ತರಿಸಿದ್ದೇವೆ ಎಂದು ಭಾಗವತ್ ಹೇಳಿದ್ದಾರೆ.
ತಜ್ಞ ವೈದ್ಯರು ಸ್ಪಷ್ಟ ಸೂಚನೆ ಹಾಗೂ ಎಚ್ಚರಿಕೆ ನೀಡಿದ್ದರು. ಆದರೆ ಸರ್ಕಾರ, ಆಡಳಿತ ವರ್ಗ, ಸಾರ್ವಜನಿಕರು ಅಸಡ್ಡೆ ತೋರಿದರು. ಸದ್ಯ ನಾವು ಕಾರಣ ಬೊಟ್ಟು ಮಾಡಿ ಒಬ್ಬರ ಮೇಲೆ ಒಬ್ಬರು ಆರೋಪ-ಪ್ರತ್ಯಾರೋಪ ಮಾಡುವ ಸಮಯವಲ್ಲ. ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಸಲಹೆ ನೀಡಿದರು.
ಜನರಿಗೆ ಆರೋಗ್ಯ ಸೇವೆ ಮರೀಚಿಕೆ: ಕೊರೋನಾ ಅಬ್ಬರ ಹೆಚ್ಚಳ.
ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕು. ನಾವು ಎಡವಿದ್ದೇವೆ ನಿಜ. ಆದರೆ ಅದನ್ನು ಪರಾಪರ್ಶಿಸಿ ಸಮಯ ವ್ಯರ್ಥಮಾಡುವ ಅಗತ್ಯವಿಲ್ಲ. 3ನೇ ಅಲೆ ತಡೆಯಲು ಏನು ಮಾಡಬೇಕು? ಈ ಕುರಿತು ಕಾರ್ಯಪ್ರವೃತ್ತರಾಗಬೇಕಿದೆ. ಇದಕ್ಕೆ ಎರಡನೆ ಮಹಾಯುದ್ಧದ ಬಳಿಕ ಇಂಗ್ಲೆಂಡ್ ಆಡಳಿತ ವರ್ಗದಲ್ಲಿದ್ದ ಮನಸ್ಥಿತಿಯನ್ನು ಉದಾಹಣೆಯಾಗಿ ನೀಡಿದ್ದಾರೆ. ಇಂಗ್ಲೆಂಡ್‌ನಲ್ಲಿ ನೋವಿನ, ಹತಾಶೆ, ಸೋಲಿನ ವಾತಾವರಣ ಕಂಡುಬರುತ್ತಿದ್ದರೂ, ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರ ಮೇಜಿನ ಮೇಲಿದ್ದ ಪತ್ರದಲ್ಲಿ ಯಾವುದೇ ನಿರಾಶಾವಾದವಿಲ್ಲ, ಸೋಲನ್ನು ಕೆದಕುವ ಆಸಕ್ತಿಯೂ ಇಲ್ಲ. ಮುಂದೆ ಸಾಗೋಣ ಎಂಬ ಸಾಲು, ಭಾರತಕ್ಕೂ ಸೂಕ್ತ ಎಂದು ಭಾಗವತ್ ಹೇಳಿದ್ದಾರೆ.