
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಆಧುನಿಕ ಜಗತ್ತಿನಲ್ಲಿ ಇಂದು ಯುದ್ಧಗಳು ಕೇವಲ ಭೂಮಿ ಮತ್ತು ಸಮುದ್ರದಲ್ಲಿ ನಡೆಯುತ್ತಿಲ್ಲ. ಬದಲಿಗೆ, ಆಗಸವೂ ಹೊಸ ಯುದ್ಧರಂಗವಾಗಿ ಮಾರ್ಪಟ್ಟಿದೆ. ಡ್ರೋನ್ ದಾಳಿಗಳಿಂದ ಕ್ಷಿಪಣಿಗಳು ಮತ್ತು ಯುದ್ಧ ವಿಮಾನಗಳ ತನಕ, ಇತ್ತೀಚಿನ ಭಾರತ - ಪಾಕ್ ಕದನದಂತಹ ಚಕಮಕಿಗಳು ಆಗಸದ ಮೇಲಿನ ನಿಯಂತ್ರಣ ಎಷ್ಟರಮಟ್ಟಿಗೆ ಒಂದು ದೇಶದ ವಿಧಿಯನ್ನು ನಿರ್ಧರಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷಿ ಗೋಲ್ಡನ್ ಡೋಮ್ ಯೋಜನೆ ಮಹತ್ವ ಪಡೆದುಕೊಂಡಿದೆ. ಇದೊಂದು ಹೈಟೆಕ್ ಕ್ಷಿಪಣಿ ರಕ್ಷಾಕವಚವಾಗಿದ್ದು, ಅಮೆರಿಕಾದ ಆಗಸವನ್ನು ರಕ್ಷಿಸುವ ಗುರಿ ಹೊಂದಿದೆ. ಆದರೆ, ಈ ಮಹತ್ವಾಕಾಂಕ್ಷಿ ಯೋಜನೆ ನಿಜಕ್ಕೂ ಅಮೆರಿಕಾದ ರಕ್ಷಣಾ ವ್ಯವಸ್ಥೆಯನ್ನೇ ಬದಲಿಸಬಲ್ಲದೇ, ಅಥವಾ ಕೇವಲ ಮರೀಚಿಕೆಯಂತಹ ಯೋಜನೆಯೇ?
ಟ್ರಂಪ್ ಅವರ ಗೋಲ್ಡನ್ ಡೋಮ್ ಎನ್ನುವುದು ವಾಷಿಂಗ್ಟನ್ನಿನ ಆಗಸದ ಮೇಲೆ ಮೂಡುವ ಹೊಳೆಯುವ ಗುಳ್ಳೆಯಂತಹದ್ದಲ್ಲ! ಇದೊಂದು ಬಾಹ್ಯಾಕಾಶ ಆಧಾರಿತ ರಕ್ಷಣಾ ವ್ಯವಸ್ಥೆಯಾಗಿದ್ದು, 1983ರಲ್ಲಿ ರೊನಾಲ್ಡ್ ರೇಗನ್ ಅವರ ಸ್ಟ್ರಾಟೆಜಿಕ್ ಡಿಫೆನ್ಸ್ ಇನಿಷಿಯೇಟಿವ್ (ಸ್ಟಾರ್ ವಾರ್ಸ್ ಎಂದು ಜನಪ್ರಿಯವಾದ ಯೋಜನೆ) ನಿಂದ ಸ್ಫೂರ್ತಿ ಪಡೆದಿದೆ. ರೇಗನ್ ಯೋಜನೆ ಲೇಸರ್ ಬೆಳಕನ್ನು ಬಳಸಿ ಕ್ಷಿಪಣಿಗಳನ್ನು ಹೊಡೆದುರುಳಿಸುವ ಗುರಿ ಹೊಂದಿದ್ದು, ಬಿಲಿಯನ್‌ಗಟ್ಟಲೆ ವೆಚ್ಚದಾಯಕ ಯೋಜನೆಯಾಗಿತ್ತು. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರಲಿಲ್ಲ. ಈಗ ಟ್ರಂಪ್ ಆ ಯೋಜನೆಗೆ ಮರುಜೀವ ನೀಡಿ, ಅದನ್ನು ಪರಿಪೂರ್ಣಗೊಳಿಸುವ ಗುರಿ ಹೊಂದಿದ್ದು, ಪ್ರಪಂಚದ ಯಾವುದೇ ಮೂಲೆಯಿಂದಾಗಲಿ, ಅಥವಾ ಬಾಹ್ಯಾಕಾಶದಿಂದಾಗಲಿ ಉಡಾವಣೆಗೊಳಿಸುವ ಕ್ಷಿಪಣಿಗಳಿಂದ ಅಮೆರಿಕಾವನ್ನು ರಕ್ಷಿಸುವ ಗುರಾಣಿಯನ್ನಾಗಿಸುವ ಉದ್ದೇಶ ಹೊಂದಿದ್ದಾರೆ. ಈ ರಕ್ಷಾಕವಚ 100% ಯಶಸ್ಸಿನ ದರ ಹೊಂದಿ, ಜಗತ್ತಿನಲ್ಲಿ ನಿರ್ಮಾಣಗೊಂಡ ಅತ್ಯುತ್ತಮ ರಕ್ಷಣಾ ವ್ಯವಸ್ಥೆಯಾಗಿರಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ಭಯೋತ್ಪಾದನಾ ವಿರೋಧಿ ದಿನ ಮೇ21, 2025: ರಾಜೀವ್ ಗಾಂಧಿ ಹತ್ಯೆಯಿಂದ ಆಪರೇಷನ್ ಸಿಂದೂರದ ತನಕ
ಹಾಗಾದರೆ ಇದು ಹೇಗೆ ಕಾರ್ಯಾಚರಿಸುತ್ತದೆ? ಭೂಮಿಯ ಸುತ್ತಲೂ ಮೂರು ಭಾಗಗಳ ರಕ್ಷಣಾ ಉಂಗುರವನ್ನು ಕಲ್ಪಿಸಿಕೊಳ್ಳಿ. ಮೊದಲನೆಯದಾಗಿ, ಪ್ರಪಂಚದ ಯಾವುದೇ ಮೂಲೆಯಿಂದಾದರೂ ಕ್ಷಿಪಣಿ ಉಡಾವಣೆಗೊಂಡರೆ, ಸೆನ್ಸರ್‌ಗಳನ್ನು ಹೊಂದಿರುವ ಉಪಗ್ರಹಗಳು ನೈಜ ಸಮಯದಲ್ಲಿ ಅದನ್ನು ಗುರುತಿಸಲಿವೆ. ಎರಡನೆಯ ಹಂತದಲ್ಲಿ, ಭೂಮಿಯಲ್ಲಿರುವ ಅಥವಾ ಕಕ್ಷೆಯಲ್ಲಿರುವ ಕ್ಷಿಪಣಿಗಳು ಮಾರ್ಗಮಧ್ಯದಲ್ಲೇ ದಾಳಿ ನಡೆಸುವ ಕ್ಷಿಪಣಿಯನ್ನು ಹೊಡೆದುರುಳಿಸಲಿವೆ. ಮೂರನೆಯ ಹಂತದಲ್ಲಿ, ಅಮೆರಿಕಾ ಅಥವಾ ಅದರ ಮಿತ್ರ ರಾಷ್ಟ್ರಗಳಲ್ಲಿರುವ ಎಐ ಆಧಾರಿತ ಕಮಾಂಡ್ ಕೇಂದ್ರಗಳು ಅಪಾಯಗಳನ್ನು ವಿಶ್ಲೇಷಿಸಿ, ಸೆಕೆಂಡುಗಳಲ್ಲಿ ಸೂಕ್ತ ಪ್ರತ್ಯಾಕ್ರಮಣ ನಡೆಸಲಿವೆ. ಗೋಲ್ಡನ್ ಡೋಮ್ ಅನ್ನು ಅಮೆರಿಕಾದಲ್ಲಿ ಈಗಾಗಲೇ ಇರುವ ಕ್ಷಿಪಣಿ ವ್ಯವಸ್ಥೆಗಳ ಮೇಲೆ ಅಭಿವೃದ್ಧಿ ಪಡಿಸಲಾಗುತ್ತದೆ. ಆ ಮೂಲಕ ಅಪಾಯಗಳು ಅಮೆರಿಕಾದ ನೆಲವನ್ನು ತಲುಪುವ ಮುನ್ನವೇ ಅವುಗಳನ್ನು ಗುರುತಿಸಿ, ಸೂಕ್ತ ಕ್ರಮವನ್ನು ನಿರ್ಧರಿಸಿ, ಅವುಗಳನ್ನು ನಾಶಪಡಿಸುವ ಜಾಗತಿಕ ರಕ್ಷಣಾ ವ್ಯವಸ್ಥೆಯನ್ನು ಅಮೆರಿಕಾ ಹೊಂದುವಂತಾಗುತ್ತದೆ.
ಯೋಜನಾ ವೆಚ್ಚ
ಗೋಲ್ಡನ್ ಡೋಮ್ ಬೆಲೆ ಎಷ್ಟು? ಈ ಯೋಜನೆಯ ಅಂದಾಜು ವೆಚ್ಚ 175 ಬಿಲಿಯನ್ ಡಾಲರ್ ಆಗಿರಲಿದ್ದು, ಆರಂಭಿಕ ಹಂತದಲ್ಲಿ 25 ಬಿಲಿಯನ್ ಡಾಲರ್ ಒದಗಿಸಲಾಗುತ್ತದೆ. ಆದರೆ ಇದಕ್ಕಾಗಿ ಅಮೆರಿಕನ್ ಕಾಂಗ್ರೆಸ್ಸಿನ ಅನುಮೋದನೆ ಇನ್ನೂ ಲಭಿಸಬೇಕಿದೆ. ಟ್ರಂಪ್ ಅಮೆರಿಕಾದ ಭದ್ರತಾ ಚಿತ್ರಣವನ್ನೇ ಬದಲಿಸಬಹುದಾದ ಈ ಮಹತ್ತರ ಯೋಜನೆಗೆ ಇದು ಮುಂಗಡ ಪಾವತಿ ಇದ್ದಂತೆ ಎಂದು ಬಣ್ಣಿಸಿದ್ದಾರೆ. ಟ್ರಂಪ್ ಈ ಯೋಜನೆಯನ್ನು ಸಣ್ಣ ದೇಶವಾದ ಇಸ್ರೇಲಿನ 20,000 ಚದರ ಕಿಲೋಮೀಟರ್ ಪ್ರದೇಶವನ್ನು ರಕ್ಷಿಸುವ ಐರನ್ ಡೋಮ್ ವ್ಯವಸ್ಥೆಗೆ ಹೋಲಿಸಿದ್ದಾರೆ. ಆದರೆ, ಇಸ್ರೇಲಿಗೆ ಹೋಲಿಸಿದರೆ ಅಮೆರಿಕಾ ಅತ್ಯಂತ ಬೃಹತ್ತಾಗಿದ್ದು, 9.8 ಮಿಲಿಯನ್ ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಇದು ಇಸ್ರೇಲ್‌ಗೆ ಹೋಲಿಸಿದರೆ 490 ಪಟ್ಟು ದೊಡ್ಡದಾಗಿದೆ. ಇಷ್ಟೊಂದು ಬೃಹತ್ ಪ್ರದೇಶವನ್ನು ತನ್ನ ವ್ಯಾಪ್ತಿಯಲ್ಲಿ ಹೊಂದುವಂತಹ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುವುದು ನಿಜಕ್ಕೂ ಬಹುದೊಡ್ಡ ಸವಾಲಾಗಿದೆ.
ತಜ್ಞರಲ್ಲಿದೆ ಅನುಮಾನ
ರಕ್ಷಣಾ ತಜ್ಞರು ಗೋಲ್ಡನ್ ಡೋಮ್ ಯೋಜನಾ ವೆಚ್ಚ ಸದ್ಯದ ಊಹೆಯ 175 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಸ್ರೇಲ್‌ನ ಐರನ್ ಡೋಮ್ ವ್ಯವಸ್ಥೆ ತಾಮಿರ್ ಕ್ಷಿಪಣಿಯನ್ನು ಬಳಸುತ್ತಿದ್ದು, ಒಳಬರುವ ಪ್ರತಿಯೊಂದು ಸಾಧಾರಣ ರಾಕೆಟ್ ಅನ್ನು ಹೊಡೆದುರುಳಿಸಲೂ ತಲಾ 50,000 ಡಾಲರ್ ವೆಚ್ಚ ತಗಲುತ್ತದೆ. ರಕ್ಷಣಾ ವೆಚ್ಚ ಪ್ರತಿವರ್ಷವೂ ಹೆಚ್ಚಾಗಲಿದ್ದು, ಅಮೆರಿಕಾ ಈ ಗೋಲ್ಡನ್ ಡೋಮ್ ಅಭಿವೃದ್ಧಿ ಪಡಿಸಿದರೆ, ಅದು ಅಮೆರಿಕಾದ ಪಾಲಿಗೆ ಆರ್ಥಿಕ ಕಪ್ಪುಕುಳಿಯಂತಾದೀತು. ಅದರೊಡನೆ, ಬಾಹ್ಯಾಕಾಶದಲ್ಲಿ ಆಯುಧ ಸ್ಪರ್ಧೆ ಉಂಟಾಗುವ ಅಪಾಯವೂ ಎದುರಾಗಲಿದೆ. ಬಾಹ್ಯಾಕಾಶವನ್ನು ಮಿಲಿಟರೀಕರಣಗೊಳಿಸುವುದು ಜಾಗತಿಕ ಭದ್ರತೆಗೆ ಹಾನಿಯಾದೀತು ಎಂದು ಚೀನಾ ಮತ್ತು ರಷ್ಯಾಗಳು ಈಗಾಗಲೇ ಎಚ್ಚರಿಕೆ ನೀಡಿದ್ದು, ಅಮೆರಿಕಾ ಬಾಹ್ಯಾಕಾಶದಲ್ಲಿ ಹೊಸ ಚಕಮಕಿಗೆ ಹಾದಿ ಮಾಡಿಕೊಡುತ್ತಿದೆ ಎಂದು ಆರೋಪಿಸಿವೆ.
ಹಾಗೆಂದು ಪೆಂಟಗನ್ ಈ ವಿಚಾರದ ಕುರಿತಂತೆ ಬಹಳ ಜಾಗರೂಕತೆಯಿಂದ ಹೆಜ್ಜೆ ಹಾಕುತ್ತಿದೆ. ಗೋಲ್ಡನ್ ಡೋಮ್ ಯೋಜನೆ ಇನ್ನೂ ಪರಿಕಲ್ಪನೆಯ ಹಂತದಲ್ಲಿದೆ ಎಂದು ವಿವರಿಸಿದೆ. ಆರಂಭಿಕ 25 ಬಿಲಿಯನ್ ಡಾಲರ್ ಹೂಡಿಕೆಯನ್ನು ಹೊರತುಪಡಿಸಿದರೆ, ಈ ಯೋಜನೆಗಾಗಿ ಹೇಳಿಕೊಳ್ಳುವಂತಹ ಹಣ ಒದಗಿಸಲಾಗಿಲ್ಲ. ಆದರೆ, ಈ ವಿಚಾರದ ಕುರಿತು ಒಂದು ಗುಂಪು ಈಗಾಗಲೇ ಅತ್ಯಂತ ಉತ್ಸುಕವಾಗಿದೆ. ಅದೆಂದರೆ; ಅಮೆರಿಕಾದ ರಕ್ಷಣಾ ಸಂಸ್ಥೆಗಳಾದ ಲಾಕ್‌ಹೀಡ್ ಮಾರ್ಟಿನ್, ರೇಥಿಯಾನ್, ಪಾಲಾಂತಿರ್, ಮತ್ತು ಅಂದುರಿಲ್. ಈ ರಕ್ಷಣಾ ಸಂಸ್ಥೆಗಳು ಬಿಲಿಯನ್ ಡಾಲರ್ ಮೌಲ್ಯದ ಅವಕಾಶಗಳನ್ನು ಎದುರು ನೋಡುತ್ತಿವೆ. ಲಾಕ್‌ಹೀಡ್ ಸಂಸ್ಥೆ ಅಪಾಯಗಳನ್ನು ಹೊಡೆದುರುಳಿಸಲು ಎಫ್-35 ಯುದ್ಧ ವಿಮಾನಗಳನ್ನು ಪ್ರಸ್ತಾಪಿಸುತ್ತಿದ್ದರೆ, ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಉಡಾವಣಾ ಸೇವೆ ಒದಗಿಸಲು ಮುಂದೆ ಬಂದಿದೆ. ಈ ಸಂಸ್ಥೆಗಳಿಗೆ ಗೋಲ್ಡನ್ ಡೋಮ್ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕಾಣಿಸುತ್ತಿದೆ.
ಇದನ್ನೂ ಓದಿ: ಬಲೂಚಿಸ್ತಾನದ ಸ್ವಾತಂತ್ರ್ಯದ ಕನಸು ಮತ್ತು ಭಾರತದ ಜಾಗರೂಕ ನಡೆ
ಟ್ರಂಪ್ ಪಾಲಿಗೆ ಇದು ಕೇವಲ ಒಂದು ರಕ್ಷಣಾ ವ್ಯವಸ್ಥೆಯಲ್ಲ. ಬದಲಿಗೆ, ಇದು ಶಕ್ತಿ - ಸಾಮರ್ಥ್ಯದ ಸಂಕೇತವಾಗಿದೆ. 'ಗೋಲ್ಡನ್ ಡೋಮ್' ಎಂಬ ಹೆಸರೇ ಟ್ರಂಪ್ ಬ್ರ್ಯಾಂಡಿಂಗ್ ರೀತಿಯದಾಗಿದ್ದು, ಇದೊಂದು ದಿಟ್ಟ, ವೆಚ್ಚದಾಯಕ ಮತ್ತ ಮಣಿಸಲು ಸಾಧ್ಯವಿಲ್ಲದ ವ್ಯವಸ್ಥೆಯಾಗಲಿದೆ. ಇಷ್ಟಾದರೂ ಒಂದು ಪ್ರಶ್ನೆ ಹಾಗೇ ಉಳಿಯುತ್ತದೆ. ಗೋಲ್ಡನ್ ಡೋಮ್ ಅನ್ನು ನಿರ್ಮಿಸಲು ಸಾಧ್ಯವೇ? ಅದು ಕಾರ್ಯಾಚರಿಸಬಹುದೇ? ಆದರೆ ಅದರ ವೆಚ್ಚವೆಷ್ಟು?
ಈಗಾಗಲೇ ಎಸ್-400 ರೀತಿಯ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ಭಾರತಕ್ಕೆ ಶಕ್ತಿಶಾಲಿ ಆಗಸ ರಕ್ಷಾಕವಚದ ಮೌಲ್ಯ ತಿಳಿದಿದೆ. ಆದರೆ, ಅದರೊಡನೆ ಯೋಜನೆಗೆ ತಗಲುವ ಅಪಾರ ವೆಚ್ಚ ಮತ್ತು ಭಾರೀ ಪ್ರಮಾಣದ ಕುರಿತೂ ಭಾರತಕ್ಕೆ ಅರಿವಿದೆ. ಗೋಲ್ಡನ್ ಡೋಮ್ ಜಗತ್ತಿನಾದ್ಯಂತ ಇದೇ ರೀತಿಯ ಮಹತ್ವಾಕಾಂಕ್ಷಿ ಯೋಜನೆಗಳ ಚಾಲನೆಗೆ ಸ್ಫೂರ್ತಿ ನೀಡಬಹುದು. ಆದರೆ, ಇದರಿಂದ ಬಾಹ್ಯಾಕಾಶದಲ್ಲಿ ಉದ್ವಿಗ್ನತೆ ಉಂಟಾಗುವ ಅಪಾಯಗಳೂ ಇವೆ. ಸದ್ಯದ ಮಟ್ಟಿಗೆ, ಡೊನಾಲ್ಡ್ ಟ್ರಂಪ್ ಕನಸು ಒಂದು ಅಭೇದ್ಯ ವ್ಯವಸ್ಥೆಯ ನಿರ್ಮಾಣವಾಗಿದ್ದು, ಇದು ಜಗತ್ತನ್ನೇ ಬೆರಗುಗೊಳಿಸುವ, ಹಾಗೂ ಬೆದರಿಸುವಂತಹ ಯೋಜನೆಯಾಗಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ