
ನವದೆಹಲಿ(ಮಾ.03): ವಿವಾದಿತ ಗುರು ನಿತ್ಯಾನಂದ ಭಾರತದಿಂದ ಪರಾರಿಯಾದ ಬಳಿಕ ಕೈಲಾಸ ದೇಶ ಸೃಷ್ಟಿಸಿ ಭಾರಿ ಸದ್ದು ಮಾಡಿದ್ದರು. ಇದೀಗ ವಿಶ್ವಸಂಸ್ಥೆಯ ಮಹಾಅಧಿವೇಶನದಲ್ಲಿ ಕೈಲಾಸ ದೇಶದ ಪ್ರತಿನಿಧಿಗಳು ಪಾಲ್ಗೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಷ್ಟೇ ಅಲ್ಲ ನಿನ್ನೆ ಮೊನ್ನೆ ಸೃಷ್ಟಿಯಾದ ದೇಶವೊಂದು ವಿಶ್ವಸಂಸ್ಥೆಯಲ್ಲಿ ಘರ್ಜಿಸುತ್ತಿದೆ ಅನ್ನೋ ಮಾತುಗಳು ಕೇಳಿಬಂದಿತ್ತು.ನಿತ್ಯಾನಂದನ ಕೈಲಾಸ ದೇಶದ ಪ್ರಕಾರ, ಒಂದು ದೇಶದಲ್ಲಿರಬೇಕಾದ ಎಲ್ಲಾ ವ್ಯವಸ್ಥೆಗಳು ಕೈಲಾಸದಲ್ಲಿದೆ. ಇದು ಹಿಂದೂ ನಿರಾಶ್ರಿತರಿಗೆ ಸದಾ ಬಾಗಿಲು ತೆರೆದಿರುತ್ತದೆ ಎಂದಿದೆ. ಕೈಲಾಸ ದೇಶ ಸಾಮಾಜಿಕ ಜಾಲತಾಮದಲ್ಲಿ ಸಕ್ರಿಯವಾಗಿದೆ.ಇಷ್ಟೇ ಅಲ್ಲ ಗವರ್ನಮೆಂಟ್ ಆಫ್ ಕೈಲಾಸ ಅನ್ನೋ ವೆಬ್‌ಸೈಟ್‌ನಲ್ಲಿ ಸ್ಫೋಟಕ ಮಾಹಿತಿ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡಿದೆ. ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಕೈಲಾಸ ದೇಶದ ಪ್ರತಿನಿಧಿಗಳು ಪಾಲ್ಗೊಂಡ ಬಳಿಕ ಇದೀಕ ಕೈಲಾಸಕ್ಕೆ ಮಾನ್ಯತೆ ಸಿಕ್ಕಿದೆಯಾ? ಈ ದೇಶ ಎಲ್ಲಿದೆ? ಕೈಲಾಸದಲ್ಲಿರುವ ಸವಲತ್ತುಗಳೇನು ಅನ್ನೋ ಹಲವು ಪ್ರಶ್ನೆಗಳು ಹರಿದಾಡುತ್ತಿದೆ.
2019ರಲ್ಲಿ ಭಾರತದಿಂದ ಪರಾರಿಯಾದ ಬಳಿಕ ನಿತ್ಯಾನಂದ ಎಲ್ಲಿ ಅನ್ನೋದೇ ಕುತೂಹಲವಾಗಿತ್ತು. ಈ ವೇಳೆ ಬಿಬಿಸಿ ಮಾಧ್ಯಮ, ನಿತ್ಯಾನಂದ ಈಕ್ವೆಡಾರ್‌ನಲ್ಲಿ ದ್ವೀಪವೊಂದನ್ನು ಖರೀದಿಸಿ ಅಲ್ಲಿ ಸಾಮ್ರಾಜ್ಯ ನಿರ್ಮಿಸಿದ್ದಾನೆ ಅನ್ನೋ ಮಾಹಿತಿ ನೀಡಿತ್ತು. ಇದರ ಬೆನ್ನಲ್ಲೇ ನಿತ್ಯಾನಂದ ವೆಲ್‌ಕಮ್ ಟು ಕೈಸಾಲ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಿದ್ದರು. ಶ್ರೀ ಕೈಲಾಸ ದೇಶ. ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಅನ್ನೋ ದೇಶದಲ್ಲಿ ಹಿಂದೂಗಳ ಆಶ್ರಯ ತಾಣ ಎಂದು ಹೇಳಲಾಗಿತ್ತು.
ವಿಶ್ವಸಂಸ್ಥೆಯಲ್ಲಿ ನಿತ್ಯಾನಂದ ಸಂಚಲನ, UN ಸಭೆಯಲ್ಲಿ ಕೈಲಾಸ ದೇಶದ ಪ್ರತಿನಿಧಿ ಭಾಗಿ, ಭಾರತದ ವಿರುದ್ಧ ದೂರು!
ನಿತ್ಯಾನಂದನ ಕೈಲಾಸ ದೇಶ ಈಕ್ವೆಡಾರ್ ಬಳಿ ಇರುವ ದ್ವೀಪದಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಇದುವರೆಗೆ ಯಾವುದೇ ಫೋಟೋ ಅಥವಾ ವಿಡಿಯೋ ಲಭ್ಯವಾಗಿಲ್ಲ. ಬಿಬಿಸಿ ವರದಿ ಬಳಿಕ ಈಕ್ವೆಡಾರ್ ಸರ್ಕಾರ ನಮ್ಮ ದೇಶದಲ್ಲಿ ದ್ವೀಪದಲ್ಲಿ ನಿತ್ಯಾನಂದ ಇಲ್ಲ ಎಂದು ಸ್ಪಷ್ಟನೆ ನೀಡಿತ್ತು. ಆದರೆ ನಿತ್ಯಾನಂದ ದ್ವೀಪ ಖರೀದಿಸಿ ಕೈಲಾಸ ಹೆಸರಿಟ್ಟು ಆಳ್ವಿಕೆ ಶುರುಮಾಡಿದ್ದಾರೆ.
ಇತ್ತೀಚೆಗೆ ಕೈಲಾಸ ದೇಶದ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಕೈಲಾಸ ದೇಶದ ಇ ವೀಸಾ ಹಾಗೂ ಪೌರತ್ವ ಪಡೆಯಲು ಅರ್ಜಿ ಹಾಕಿ ಅನ್ನೋ ಪ್ರಕಟಣೆ ನೀಡಿದೆ. ಇಷ್ಟೇ ಅಲ್ಲ ಕೈಲಾಸ ದೇಶದಲ್ಲಿ ಆರ್ಥಿಕತೆ, ಇಲಾಖೆ, ಹಣಕಾಸು ವ್ಯವಸ್ಥೆ, ದೇಶದ ಲಾಂಛನ, ಪಾಸ್‌ಪೋರ್ಟ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಇವೆ ಎಂದು ಹೇಳಿಕೊಂಡಿದೆ. ಅಂತಾರಾಷ್ಟ್ರೀಯ ಹಿಂದೂಗಳಿಗೆ ಇದು ಆಶ್ರಯ ತಾಣ ಎಂದು ಹೇಳಿಕೊಂಡಿದೆ.
ಇದೀಗ ಪ್ರಶ್ನೆ, ನಿತ್ಯಾನಂದನ ಕೈಲಾಸ ದೇಶಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ಸಿಕ್ಕಿದೆಯಾ? ದಾಖಲೆಗಳ ಪ್ರಕಾರ ಇಲ್ಲ. ವಿಶ್ವಸಂಸ್ಥೆಯ 1933ರ ಕನ್‌ವೆನ್ಶನ್ ಪ್ರಕಾರ ಒಂದು ದೇಶ ಎಂದು ಗುರುತಿಸಿಕೊಳ್ಳಲು, ಖಾಯಂ ಜನಸಂಖ್ಯೆ, ಇತರ ರಾಷ್ಟ್ರದ ಜೊತೆ ವ್ಯವಹಾರ ಹಾಗೂ ಸಂಪರ್ಕ ಸೇರಿದಂತೆ ಹಲವು ಷರತ್ತುಗಳು ಪಾಲಿಸಿರಬೇಕು. ನಿತ್ಯಾನಂದನ ಕೈಲಾಸ ಈಗಾಗಲೇ ಜಾಗತಿಕ ವೇಜೃದಿಕೆಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದೆ. ವಿಶ್ವಸಂಸ್ಥೆ ಮಹಾ ಸಮ್ಮೇಳನದಲ್ಲಿ ಪಾಲ್ಗೊಂಡು ಹಲವು ವಿಚಾರಗಳನ್ನು ಮುಂದಿಟ್ಟಿದ್ದಾರೆ. ಆದರೆ ಈ ವಿಚಾರಗಳನ್ನು ವಿಶ್ವಸಂಸ್ಥೆ ಗಂಭೀರವಾಗಿ ಪರಿಗಣಿಸಿಲ್ಲ ಅನ್ನೋ ಮಾಹಿತಿಗಳು ಲಭ್ಯವಾಗಿದೆ.
ಸದ್ಯ ಕೈಲಾಸ ದೇಶ ಮೈಕ್ರೋನೇಶನ್ ಸ್ಥಾನ ಪಡೆದಿದೆ. ಸಣ್ಣ ರಾಷ್ಟ್ರ ಎಂದು ಗುರುತಿಸಿಕೊಂಡಿದೆ. 2019ರ ವರದಿಯಲ್ಲಿ ವಿಶ್ವದಲ್ಲಿ 80 ಮೈಕ್ರೋನೇಶನ್ ದೇಶಗಳಿವೆ ಎಂದಿದೆ. ಕೈಲಾಸ ದೇಶದ ರೀತಿ 1980ರಲ್ಲಿ ಭಾರತದ ಹಿಂದೂ ಧರ್ಮ ಗುರು ರಜನೀಶ್, ಉತ್ತರ ಅಮೆರಿಕದಲ್ಲಿ ರಜನೀಶಪುರಂ ಅನ್ನೋ ದೇಶ ಸೃಷ್ಟಿಸಿದ್ದರು.
ನಿತ್ಯಾನಂದನ 'ಕೈಲಾಸ'ದ ಪ್ರತಿನಿಧಿಯಾಗಿ ವಿಶ್ವಸಂಸ್ಥೆಯಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು?
ಕೈಲಾಸ ದೇಶದ ಅಧಿಕೃತ ವೆಬ್‌ಸೈಟ್‌ನಲ್ಲಿ ಮಹತ್ವದ ಮಾಹಿತಿಯೊಂದನ್ನು ಹೇಳಿದೆ.ಇದರಲ್ಲಿ ಕೈಲಾಸ ದೇಶದ ಜೊತೆ ಅಮೆರಿಕ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದೆ ಅನ್ನೋ ಮಾಹಿತಿ ಹಾಗೂ ಪೋಟೋ ಪೋಸ್ಟ್ ಮಾಡಿದೆ. ಅಮೆರಿಕದ ಅಧಿಕಾರಿಗಳ ಜೊತೆ ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿಗಳು ನಿಂತಿರುವ ಫೋಟೋ ಇದಾಗಿದೆ. ಇದರ ಜೊತೆ ಸಹಕಾರಿ ಒಪ್ಪಂದ ಸೇರಿದಂತೆ ಹಲವು ಒಪ್ಪಂದಗಳ ಕುರಿತು ಫೋಟೋ ಹಾಗೂ ಮಾಹಿತಿಯನ್ನೂ ನೀಡಿದೆ. ಆದರೆ ಈ ಕುರಿತು ಅಧಿಕೃತ ದಾಖಲೆಗಳು ಲಭ್ಯವಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ