
ರಿಯೋ ಡಿ ಜನೈರೋ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ನೀತಿ ನಿರ್ಧಾರ ಕೈಗೊಳ್ಳುವ ಜಾಗತಿಕ ಸಂಸ್ಥೆಗಳಲ್ಲಿ ಗ್ಲೋಬಲ್ ಸೌತ್ ಎಂದು ಕರೆಯಲಾಗುವ ದೇಶಗಳಿಗೆ ಸ್ಥಾನ ಕಲ್ಪಿಸುವ ಕುರಿತು ಬಲವಾದ ವಾದ ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ನಾವಿಲ್ಲದ ಜಾಗತಿಕ ಸಂಘಟನೆಗಳು ನೆಟ್ವರ್ಕ್ ಇಲ್ಲದ ಸಿಮ್ ಇರುವ ಮೊಬೈಲ್‌ನಂತೆ ಎಂದು ವ್ಯಂಗ್ಯವಾಡಿದ್ದಾರೆ.
ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ಭಾನುವಾರ ಆರಂಭವಾದ ಬ್ರಿಕ್ಸ್ ದೇಶಗಳ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಗ್ಲೋಬಲ್ ಸೌತ್ ದೇಶಗಳು ಸದಾ ದ್ವಿಮುಖ ನೀತಿಯ ಬಲಿಪಶಗಳಾಗಿವೆ ಮತ್ತು ಜಾಗತಿಕ ಆರ್ಥಿಕತೆಗೆ ಪ್ರಮುಖ ಪಾಲು ನೀಡುವ ದೇಶಗಳನ್ನು ನೀತಿ ನಿರ್ಧಾರ ಕೈಗೊಳ್ಳುವ ಪ್ರಮುಖ ಸಂಸ್ಥೆಗಳಿಂದ ಹೊರಗಿಡಲಾಗಿದೆ. ಹೀಗಾಗಿ ಭದ್ರತಾ ಮಂಡಳಿ ಸೇರಿದಂತೆ ಮಹತ್ವದ ಸಂಘಟನೆಗಳಲ್ಲಿ ತ್ವರಿತವಾಗಿ ಬದಲಾವಣೆ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ್ದಾರೆ.
ಮನಕುಲದ ಮೂರನೇ ಎರಡು ಭಾಗಕಕ್ಕೆ 20ನೇ ಶತಮಾನದಲ್ಲಿ ರಚಿಸಲಾದ ಜಾಗತಿಕ ಸಂಸ್ಥೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಗ್ಲೋಬಲ್ ಸೌತ್ ಇಲ್ಲದ ಇಂಥ ಸಂಸ್ಥೆಗಳು ಸಿಮ್ ಕಾರ್ಡ್ ಇರುವ ಆದರೆ ನೆಟ್‌ವರ್ಕ್ ಇಲ್ಲದ ಮೊಬೈಲ್‌ನಂತೆ ಎಂದು ವ್ಯಂಗ್ಯವಾಡಿದ್ದಾರೆ.
ಗ್ಲೋಬಲ್ ಸೌತ್:
ಕೈಗಾರಿಕಾಕರಣಗೊಂಡ ದೇಶಗಳ ದಕ್ಷಿಣಕ್ಕೆ ಬರುವ, ಕೈಗಾರಿಕಾವಾಗಿ ಮತ್ತು ಆರ್ಥಿಕವಾಗಿ ಕಡಿಮೆ ಶಕ್ತಿ ಹೊಂದಿರುವ ದೇಶಗಳನ್ನು ಗ್ಲೋಬಲ್ ಸೌತ್ ಎನ್ನಲಾಗುತ್ತದೆ.
ಟ್ರಿನಿಡಾಡ್ ಮತ್ತು ಟೊಬಾಗೊ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ
5 ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ರಿನಿಡಾಡ್ ಮತ್ತು ಟೊಬಾಗೊ ದೇಶ ಶುಕ್ರವಾರ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿಗೆ ದೊರೆತ 25ನೇ ಅಂತಾರಾಷ್ಟ್ರೀಯ ಗೌರವ.
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಅವರು ಮೋದಿಗೆ ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ದಿ ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬಾಗೊ’ ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿ ಪಡೆದು ಬಳಿಕ ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದು, ‘140 ಕೋಟಿ ಭಾರತೀಯರ ಪರವಾಗಿ ನಾನು ಅದನ್ನು ಸ್ವೀಕರಿಸುತ್ತೇನೆ’ ಎಂದಿದ್ದಾರೆ. ಗುರುವಾರವಷ್ಟೇ ಘಾನಾ ಸರ್ಕಾರ ಮೋದಿಗೆ ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿ ‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ನೀಡಿ ಗೌರವಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ