ಕಾಂಗ್ರೆಸ್‌ಗೆ ಮುಸ್ಲಿಮರನ್ನು ಅಧ್ಯಕ್ಷರನ್ನಾಗಿ ಮಾಡುವ ಧೈರ್ಯವಿದೆಯೇ? ಮೋದಿ ಸವಾಲು

Published : Apr 15, 2025, 09:24 AM ISTUpdated : Apr 15, 2025, 09:29 AM IST
ಕಾಂಗ್ರೆಸ್‌ಗೆ ಮುಸ್ಲಿಮರನ್ನು ಅಧ್ಯಕ್ಷರನ್ನಾಗಿ ಮಾಡುವ ಧೈರ್ಯವಿದೆಯೇ? ಮೋದಿ ಸವಾಲು

ಸಾರಾಂಶ

ಪ್ರಧಾನಿ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದು, ಓಲೈಕೆ ರಾಜಕಾರಣಕ್ಕೆ ಮುಸ್ಲಿಮರು ಬಲಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ಗೆ ನಿಜವಾಗಿಯೂ ಮುಸ್ಲಿಮರ ಬಗ್ಗೆ ಕಾಳಜಿಯಿದ್ದರೆ, ಅದೇ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡಲಿ ಎಂದು ಸವಾಲು ಹಾಕಿದ್ದಾರೆ. 

ಹಿಸಾರ್‌ (ಹರ್ಯಾಣ): ‘ಕಾಂಗ್ರೆಸ್‌ನ ಓಲೈಕೆ ರಾಜಕಾರಣಕ್ಕೆ ಬಲಿಯಾದವರು ಮುಸ್ಲಿಂ ಸಮುದಾಯದವರು. ಕಾಂಗ್ರೆಸ್‌ ಪಕ್ಷಕ್ಕೆ ನಿಜವಾಗಿಯೂ ಮುಸ್ಲಿಮರ ಕುರಿತು ಸಹಾನುಭೂತಿ ಇದ್ದರೆ ಅದೇ ಸಮುದಾಯದವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಿ. ಅಂತೆಯೇ, ಶೇ.50ರಷ್ಟು ಟಿಕೆಟ್‌ ಕೊಡಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಕ್ಕೆ ಸವಾಲೆಸೆದಿದ್ದಾರೆ.

ಇಲ್ಲಿನ ಮಹಾರಾಜ ಅಗ್ರಸೇನ ವಿಮಾನ ನಿಲ್ದಾಣದಿಂದ ಅಯೋಧ್ಯೆಗೆ ಮೊದಲ ವಾಣಿಜ್ಯ ವಿಮಾನ ಹಾರಾಟಕ್ಕೆ ಚಾಲನೆ ನೀಡಿ, ಹೊಸ ಟರ್ಮಿನಲ್‌ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮೋದಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ಮಾಡಿರುವ ಅವರು, ‘ಕಾಂಗ್ರೆಸ್‌ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದವರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿಸಿದೆ. ಅಂತೆಯೇ, ಅಂಬೇಡ್ಕರ್‌ ಅವರ ಸಂವಿಧಾನವನ್ನು ಕಾಂಗ್ರೆಸ್‌ ನಾಶಪಡಿಸಿದ್ದು, ಅದನ್ನು ಅಧಿಕಾರಕ್ಕೇರುವ ಸಾಧನವಾಗಿ ಬಳಸುತ್ತಿದೆ. ಓಲೈಕೆ ರಾಜಕಾರಣದ ಭಾಗವಾಗಿ 2013ರಲ್ಲಿ ವಕ್ಫ್‌ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು’ ಎಂದು ಆರೋಪಿಸಿದ್ದಾರೆ.

ಎಸ್ಸಿ, ಎಸ್ಟಿ, ಒಬಿಸಿ ಕಡೆಗಣನೆ 
‘ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಸಮಾನತೆ ತರಲು ಬಯಸಿದರೆ, ಕಾಂಗ್ರೆಸ್‌ ಪಕ್ಷ ಮತ ಬ್ಯಾಂಕ್‌ ರಾಜಕಾರಣವನ್ನು ಹರಡಲು ಯತ್ನಿಸಿತು. ಬಡವರು ತಮ್ಮ ಕನಸುಗಳನ್ನು ಈಡೇರಿಸಿಕೊಂಡು ಘನತೆಯಿಂದ ಬದುಕಬೇಕು ಎಂಬುದು ಅವರ ಕನಸಾದರೆ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದವರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ಮಾಡಿತ್ತು’ ಎಂದು ಪ್ರಧಾನಿ ಮೋದಿ ಕಿಡಿಕಾರಿದರು. ಜೊತೆಗೆ ಆ ಪಕ್ಷ ಸಂವಿಧಾನವನ್ನು ಅಧಿಕಾರಕ್ಕೇರುವ ಸಾಧನವಾಗಿ ಬದಲಿಸಿಕೊಂಡಿತು ಎಂದು ದೂರಿದರು.

ಅಂಬೇಡ್ಕರ್‌ಗೆ ಅವಮಾನ
ವಿಪಕ್ಷವು ಅಂಬೇಡ್ಕರ್‌ ಅವರನ್ನು ಮೊದಲಿನಿಂದಲೂ ಅವಮಾನಿಸುತ್ತಲೇ ಇದೆ ಎಂದ ಮೋದಿ, ‘ಅವರು ಬದುಕಿದ್ದಾಗ 2 ಬಾರಿ ಚುನಾವಣೆಯಲ್ಲಿ ಸೋಲುವಂತೆ ಕಾಂಗ್ರೆಸ್‌ ಮಾಡಿ ಹೊರಗೋಡಿಸಲು ಪ್ರಯತ್ನಿಸಿತು. ಮರಣಾನಂತರ ಅವರ ನೆನಪುಗಳನ್ನು ಅಳಿಸಿ, ಅವರ ಆಲೋಚನೆಗಳನ್ನು ಮುಗಿಸಲು ನೋಡಿತು’ ಎಂದರು. ಅಂತೆಯೇ, ಕಾಂಗ್ರೆಸ್‌ ಅಂಬೇಡ್ಕರ್‌ಗೆ ಭಾರತ ರತ್ನವನ್ನೂ ನೀಡಲಿಲ್ಲ ಎಂದು ಟೀಕಿಸಿದರು.

ಇದೇ ವೇಳೆ ಬಿಜೆಪಿ ಅಂಬೇಡ್ಕರ್‌ ಅವರ ಕನಸುಗಳನ್ನು ಸಾಕಾರಗೊಳಿಸುತ್ತಿದೆ ಎಂದ ಪ್ರಧಾನಿ, ‘ಸಾಮಾಜಿಕ ನ್ಯಾಯ ಮತ್ತು ಬಡವರ ಕಲ್ಯಾಣ ಅಂಬೇಡ್ಕರ್‌ ಮತ್ತು ದೇಶಕ್ಕಾಗಿ ಪ್ರಾಣ ತೆತ್ತವರ ಕನಸಾಗಿತ್ತು. ನಾವು ಅದನ್ನು ನನಸುಗೊಳಿಸುತ್ತಿದ್ದೇವೆ. ನಮ್ಮ ಸರ್ಕಾರದ ಎಲ್ಲಾ ನಿರ್ಧಾರ ಮತ್ತು ನೀತಿಗಳು ಅಂಬೇಡ್ಕರ್‌ ಅವರಿಗೆ ಬದ್ಧವಾಗಿವೆ’ ಎಂದು ಹೇಳಿದರು.

ಇದನ್ನೂ ಓದಿ: ಹಿಂದೂಗಳ ಜಾತಿ ಲೆಕ್ಕ ಹಾಕಿ ಒಡೆಯುವ ಕೆಲಸ ಮಾಡಿತಾ ಕಾಂಗ್ರೆಸ್ ಸರ್ಕಾರದ ಸಮೀಕ್ಷೆ?

ಅಭಿಮಾನಿಗೆ ಶೂ ಕೊಟ್ಟ ಪ್ರಧಾನಿ ನರೇಂದ್ರ ಮೋದಿ !
ನರೇಂದ್ರ ಮೋದಿ ಪ್ರಧಾನಿ ಆಗುವವರೆಗೂ ತಾನು ಚಪ್ಪಲಿ ಧರಿಸಲ್ಲ ಎಂದು ಪ್ರತಿಜ್ಞೆ ಮಾಡಿ ಅದರಂತೆ 14 ವರ್ಷಗಳಿಂದ ಬರಿಗಾಗಲಲ್ಲೇ ನಡೆದಾಡುತ್ತಿದ್ದ ಅಭಿಮಾನಿಯೊಬ್ಬರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಲ್ಲಿ ಭೇಟಿ ಮಾಡಿದರು. ಜೊತೆಗೆ ಆತನ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದ್ದೂ ಅಲ್ಲದೆ ಆತನಿಗೆ ಒಂದು ಜೊತೆ ಶೂ ಉಡುಗೊರೆ ನೀಡುವ ಮೂಲಕ ಮುಂದೆ ಇಂಥ ಪ್ರತಿಜ್ಞೆ ಮಾಡದಂತೆ ಕಿವಿ ಮಾತು ಹೇಳಿದ್ದಾರೆ.

ರಾಮಪಾಲ್ ಕಶ್ಯಪ್ 14 ವರ್ಷಗಳ ಹಿಂದೆ ಬಿಜೆಪಿಯ ಪ್ರಬಲ ವ್ಯಕ್ತಿ (ಮೋದಿ) ಪ್ರಧಾನಿಯಾದ ನಂತರವೇ ಪಾದರಕ್ಷೆ ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಅವರನ್ನು ಭೇಟಿಯಾದ ಪ್ರಧಾನಿ ಮೋದಿ ಹೊಸ ಶೂಗಳನ್ನು ಉಡುಗೊರೆ ನೀಡಿದ್ದಾರೆ.

ಅವರ ಭೇಟಿಯ ವಿಡಿಯೋವನ್ನು ಮೋದಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದು,  ‘ನಾನು ಪ್ರಧಾನಿಯಾದ ನಂತರವೇ ಪಾದರಕ್ಷೆ ಧರಿಸುತ್ತೇನೆ ಎಂದು 14 ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ್ದ ರಾಮಪಾಲ್ ಕಶ್ಯಪ್ ಜಿ ಅವರನ್ನು ಭೇಟಿಯಾದೆ. ಅವರಿಗೆ ನಾನು ವಿನಮ್ರನಾಗಿದ್ದು, ಅವರ ಪ್ರೀತಿಯನ್ನು ಸ್ವೀಕರಿಸುತ್ತೇನೆ. ಆದರೆ ಅಂತಹ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವ ಪ್ರತಿಯೊಬ್ಬರಲ್ಲಿ ನನ್ನ ವಿನಂತಿಯಿದೆ. ನಾನು ನಿಮ್ಮ ಪ್ರೀತಿಯನ್ನು ಗೌರವಿಸುತ್ತೇನೆ. ಆದರೆ ಇಂತಹ ಪ್ರತಿಜ್ಞೆಗಿಂತ ದಯವಿಟ್ಟು ಸಾಮಾಜಿಕ ಮತ್ತು ರಾಷ್ಟ್ರ ನಿರ್ಮಾಣ ಗಮನಹರಿಸಿ’ ಎಂದು ವಿನಂತಿಸಿದ್ದಾರೆ.

ಇದನ್ನೂ ಓದಿ: PNB ಗೆ ₹13000 ಸಾವಿರ ಕೋಟಿ ವಂಚಿಸಿದ್ದ ಚೋಕ್ಸಿ ಕೊನೆಗೂ ಬಂಧನ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?