G20 Summit ಯುದ್ಧದ ಸಮಯವಲ್ಲ,ಮೋದಿ ಮಾತು ಪುನರುಚ್ಚರಿಸಿದ ವಿಶ್ವ ನಾಯಕರು!

By Suvarna News  |  First Published Nov 15, 2022, 4:31 PM IST

ಇಂಡೋನೇಷಿಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಸಭೆಯಲ್ಲಿ ಭಾರತದ ನಿಲುವುಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಉಕ್ರೇನ್ ಮೇಲಿನ ರಷ್ಯಾ ದಾಳಿ ವೇಳೆ ಭಾರತ ತಳೆದಿದ್ದ ನಿಲುವನ್ನು ಇದೀಗ ಜಿ20 ಸಭೆಯಲ್ಲಿ ವಿಶ್ವನಾಯಕರು ಪುನರುಚ್ಚರಿಸಿದ್ದಾರೆ. 


ಬಾಲಿ(ನ.15):  ಇಡೀ ವಿಶ್ವದ ಗಮನಸೆಳೆದಿರುವ ಜಿ20 ಶೃಂಗಸಭೆ ಇಂಡೋನೇಷಿಯಾದ ಬಾಲಿಯಲ್ಲಿ ನಡೆಯುತ್ತಿದೆ.  ಜಾಗತಿಕ ಅಭಿವೃದ್ಧಿ, ಆಹಾರ ಮತ್ತು ಇಂಧನ ಭದ್ರತೆ, ಆರೋಗ್ಯ ಹಾಗೂ ಡಿಜಿಟಲ್‌ ರೂಪಾಂತರಕ್ಕೆ ಕುರಿತು ಈ ಶೃಂಗಸಭೆಯಲ್ಲಿ ಚರ್ಚೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದು ವಿಶ್ವ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ದೇಶ ಹಾಗೂ ಭದ್ರತೆಗಳ ಕುರಿತ ಚರ್ಚೆಯಲ್ಲಿ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡ ವಿಶ್ವನಾಯಕರು ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಖಂಡಿಸಿದ್ದಾರೆ. ಇಷ್ಟೇ ಅಲ್ಲ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷರಿಗೆ ಮಹತ್ವದ ಕಿವಿ ಮಾತು ಹೇಳಿದ್ದರು. ಇದು ಯುದ್ಧದ ಸಮಯವಲ್ಲ ಎಂದಿದ್ದರು. ಇದೀಗ ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮಾತನ್ನೇ ಎಲ್ಲಾ ನಾಯಕರು ಪುನರುಚ್ಚರಿಸಿದ್ದಾರೆ. 

ನ್ಯೂಕ್ಲಿಯರ್ ಬಾಂಬ್ ಬಳಕೆ ಎಚ್ಚರಿಕೆ ಸೇರಿದಂತೆ ಆಕ್ರಮಣಕಾರಿ ನೀತಿಯನ್ನು ಜಿ20 ಸಭೆಯಲ್ಲಿ(G20 Summit Bali) ಖಂಡಿಸಲಾಗಿದೆ. ಈ ಕುರಿತು ಕರಡು ಒಡಂಬಡಿಕೆ ರಚಿಸಲಾಗಿದೆ. ಉಕ್ರೇನ್(Russia Ukraine War) ಮೇಲಿನ ದಾಳಿಯಿಂದ ಈಗಾಗಲೇ ಹಲವು ಅನಾಹುತ, ಪ್ರಾಣ ಹಾನಿ ಸಂಭವಿಸಿದೆ. ಈ ಯುದ್ಧ ಆರ್ಥಿಕ ಹಿಂಜರಿತಕ್ಕೂ ದಾರಿ ಮಾಡಿಕೊಟ್ಟಿದೆ. ಇದು ಯುದ್ಧ ಮಾಡುವ ಕಾಲವಲ್ಲ. ಎಲ್ಲಾ ರಾಷ್ಟ್ರಗಳು ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಬೇಕು ಎಂದು ಕರಡು ಒಡಂಬಡಿಕೆಯಲ್ಲಿ ವಿಶ್ವ ನಾಯಕರು ಸೂಚಿಸಿದ್ದಾರೆ.

Tap to resize

Latest Videos

 

G20 Summit: ಜಗತ್ತಿನ ಅಭಿವೃದ್ಧಿಗೆ ಭಾರತವೇ ಮುಖ್ಯ ಎಂದ ಪ್ರಧಾನಿ ಮೋದಿ!

ಜಿ20 ಶೃಂಗಸಭೆಯ ಮೊದಲ ದಿನ ರಷ್ಯಾ ಹಾಗೂ ಉಕ್ರೇನ್ ಯುದ್ಧದ ಕುರಿತು ಗಂಭೀರ ಚರ್ಚೆಗಳು ಹಾಗೂ ಮಹತ್ವದ ನಿಲುವುಗಳನ್ನು ತೆಗೆದುಕೊಳ್ಳಲಾಗಿದೆ. ಭಾರತ, ಚೀನಾ, ಅಮೆರಿಕ, ಬ್ರಿಟನ್ ಸೇರಿದಂತೆ ಪ್ರಮುಖ ರಾಷ್ಟ್ರಗಳು ಈ ಚರ್ಚೆಯಲ್ಲಿ ಪಾಲ್ಗೊಂಡಿತ್ತು. ಆದರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಶೃಂಗಸಭೆಗೆ ಗೈರಾಗಿದ್ದಾರೆ. ಆದರೆ ಉಕ್ರೇನ್ ಜಿ20 ಶೃಂಗಸಭೆಯ ಸದಸ್ಯ ರಾಷ್ಟ್ರವಲ್ಲ. ಆದರೆ ವಿಶೇಷ ಆಹ್ವಾನದ ಮೇರೆಗೆ ಆನ್‌ಲೈನ್ ಮೂಲಕ ವೊಲೊದಿಮಿರ್ ಝೆಲೆನ್‌ಸ್ಕಿ ಪಾಲ್ಗೊಂಡಿದ್ದಾರೆ. 

ಇದು 17ನೇ ಜಿ20 ಶೃಂಗ:
ಜಿ20 ಸಮೂಹದಲ್ಲಿ ಜಗತ್ತಿನ ಪ್ರಮುಖ 20 ರಾಷ್ಟ್ರಗಳಿದ್ದು, ಈ ರಾಷ್ಟ್ರಗಳು ಜಗತ್ತಿನ ಒಟ್ಟು ಉತ್ಪನ್ನದಲ್ಲಿ ಶೇ.85ರಷ್ಟುಪಾಲು ಹೊಂದಿವೆ. ಜಗತ್ತಿನ ಮೂರನೇ ಎರಡರಷ್ಟುಜನಸಂಖ್ಯೆ ಈ ದೇಶಗಳಲ್ಲಿದ್ದು, ಜಾಗತಿಕ ವ್ಯಾಪಾರದ ಶೇ.75ರಷ್ಟುಈ ದೇಶಗಳಲ್ಲೇ ನಡೆಯುತ್ತದೆ. ಹೀಗಾಗಿ ಜಿ20 ಶೃಂಗಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮಹತ್ವವಿದೆ. ಇಂಡೋನೇಷ್ಯಾದಲ್ಲಿ ನಡೆಯುತ್ತಿರುವುದು 17ನೇ ಜಿ20 ಶೃಂಗವಾಗಿದೆ.

ಇಂಡೋನೇಷಿಯಾದ ಬಾಲಿಯಲ್ಲಿ 2 ದಿನಗಳ ಕಾಲ ಜಿ20 ಶೃಂಗಸಭೆ ನಡೆಯಲಿದೆ. ನವೆಂಬರ್ 16ಕ್ಕೆ ಈ ಸಭೆ ಅಂತ್ಯಗೊಳ್ಳಲಿದೆ. ಈ ಶೃಂಗ ಸಭೆಯೊಂದಿಗೆ ಇಂಡೋನೇಷ್ಯಾದ ಜಿ20 ಅಧ್ಯಕ್ಷೀಯ ಅವಧಿ ಮುಕ್ತಾಯವಾಗಲಿದ್ದು, ನ.16ರಂದು ಮುಂದಿನ ಒಂದು ವರ್ಷದ ಜಿ20 ಅಧ್ಯಕ್ಷೀಯ ಹುದ್ದೆ ಭಾರತಕ್ಕೆ ಹಸ್ತಾಂತರವಾಗಲಿದೆ. ಡಿ.1ರಿಂದ ಭಾರತವು ಜಿ20 ರಾಷ್ಟ್ರಗಳ ಸಮೂಹದ ಚೇರ್ಮನ್‌ ಆಗಲಿದೆ.
 

click me!