
ಕಾರ್ಪೊರೇಟ್ ವಲಯದಲ್ಲಿ ಮಹಿಳೆಯರು ಇಂದು ಕೇವಲ ನಾಯಕತ್ವದ ಸ್ಥಾನಗಳನ್ನು ಅಲಂಕರಿಸುವುದು ಮಾತ್ರವಲ್ಲದೆ, ವಾರ್ಷಿಕ ಸಂಭಾವನೆಯಲ್ಲೂ ಹೊಸ ದಾಖಲೆಗಳನ್ನು ಬರೆಯುತ್ತಿದ್ದಾರೆ. 2025-26ನೇ ಆರ್ಥಿಕ ವರ್ಷದ (FY26) ಕಂಪನಿಗಳ ಅಧಿಕೃತ ವರದಿ ಮತ್ತು 'ವಿಸ್ಜ್ಲಿನ್' ಕಾರ್ಯನಿರ್ವಾಹಕ ವೇತನ ಶ್ರೇಯಾಂಕಗಳ ಪ್ರಕಾರ, ಕನ್ನಡದ ಕುವರಿ, ತಮಿಳುನಾಡು ಸೊಸೆ ವಾರ್ಷಿಕ ಬರೋಬ್ಬರಿ ₹87.50 ಕೋಟಿ ವೇತನ ಪಡೆಯುವ ಮೂಲಕ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಕಾರ್ಯನಿರ್ವಾಹಕರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ವಿಶೇಷವೆಂದರೆ, ಇವರು ಮೂಲತಃ ಕರ್ನಾಟಕದ ಕೊಡಗಿನವರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಅವರೇ ಸನ್ ಟಿವಿ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಕಾವೇರಿ ಕಲಾನಿಧಿ (ಕಾವೇರಿ ಮಾರನ್).
ಕಾವೇರಿ ಕಲಾನಿಧಿ ಅವರು ಮೂಲತಃ ಕರ್ನಾಟಕದ ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಸಮೀಪದ ಕೈಕೇರಿ ಗ್ರಾಮದವರು. ದಿವಂಗತ ಜಮ್ಮಡ ಎ. ಬೆಳ್ಳಿಯಪ್ಪ ಮತ್ತು ನೀನಾ ದಂಪತಿಯ ಪುತ್ರಿಯಾದ ಇವರು, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ತಮ್ಮ ಉನ್ನತ ವ್ಯಾಸಂಗ ಪೂರ್ಣಗೊಳಿಸಿದರು. 1991ರಲ್ಲಿ ಸನ್ ಗ್ರೂಪ್ ಸಂಸ್ಥಾಪಕ ಕಲಾನಿಧಿ ಮಾರನ್ ಅವರೊಂದಿಗೆ ಇವರ ಪ್ರೇಮ ವಿವಾಹ ನೆರವೇರಿತು. ಕಲಾನಿಧಿ ಅವರ ಕುಟುಂಬದಲ್ಲಿ ನಡೆದ ಮೊದಲ ಪ್ರೇಮ ವಿವಾಹ ಇದಾಗಿತ್ತು ಎಂಬುದು ವಿಶೇಷ.
ಅಮೆರಿಕದ ಸ್ಕ್ರಾಂಟನ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದು ಭಾರತಕ್ಕೆ ಮರಳಿದ್ದ ಕಲಾನಿಧಿ ಮಾರನ್, ದಕ್ಷಿಣ ಭಾರತದಲ್ಲಿ ಟಿವಿ ಚಾನೆಲ್‌ಗಳ ಕ್ರಾಂತಿ ಮಾಡುವ ಕನಸು ಕಂಡಿದ್ದರು. 1993ರಲ್ಲಿ ಕೇವಲ ಒಂದು ತಮಿಳು ಚಾನೆಲ್ ಆಗಿ 'ಸನ್ ಟಿವಿ' ಆರಂಭವಾದ ದಿನದಿಂದಲೂ ಕಾವೇರಿ ಅವರು ಪತಿಯ ಹೆಗಲಿಗೆ ಹೆಗಲು ಕೊಟ್ಟು ದುಡಿದರು. ಇಂದು ಈ ಸಂಸ್ಥೆಯು ತಮಿಳು, ಕನ್ನಡ (ಉದಯ ಟಿವಿ), ತೆಲುಗು, ಮಲಯಾಳಂ, ಬಂಗಾಳಿ, ಮರಾಠಿ ಹಾಗೂ 2024ರಲ್ಲಿ ಆರಂಭವಾದ 'ಸನ್ ನಿಯೋ' ಹಿಂದಿ ಚಾನೆಲ್ ಸೇರಿದಂತೆ 30ಕ್ಕೂ ಹೆಚ್ಚು ವಾಹಿನಿಗಳ ಬೃಹತ್ ಜಾಲವಾಗಿ ಬೆಳೆದಿದೆ.
ಕಲಾನಿಧಿ ಮಾರನ್ ಅವರು ಕಂಪನಿಯ ವ್ಯಾಪಾರ ವಿಸ್ತರಣೆಯತ್ತ ಗಮನಹರಿಸಿದರೆ, ಕಾವೇರಿ ಅವರು ಇಡೀ ನೆಟ್‌ವರ್ಕ್‌ನ ಕಂಟೆಂಟ್ (ಕಾರ್ಯಕ್ರಮಗಳ ಗುಣಮಟ್ಟ), ಪ್ರೋಗ್ರಾಮಿಂಗ್ ತಂತ್ರಗಾರಿಕೆ ಮತ್ತು ಸಾಗರೋತ್ತರ ವಿಸ್ತರಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ತಮಿಳುನಾಡಿನಲ್ಲಿ ಸನ್ ಟಿವಿ ಸುಮಾರು ಶೇ. 40ರಷ್ಟು ವೀಕ್ಷಕರ ಪಾಲನ್ನು ಉಳಿಸಿಕೊಳ್ಳುವಲ್ಲಿ ಹಾಗೂ 'ಸನ್ ಎನ್‌ಎಕ್ಸ್‌ಟಿ' ಡಿಜಿಟಲ್ ವೇದಿಕೆ ಮತ್ತು 'ಸನ್ ಪಿಕ್ಚರ್ಸ್' ಚಲನಚಿತ್ರ ನಿರ್ಮಾಣ ಸಂಸ್ಥೆಯ ಯಶಸ್ಸಿನಲ್ಲಿ ಕಾವೇರಿ ಅವರ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. 2005ರಿಂದ ಸನ್ ಟಿವಿ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ಇವರನ್ನು ಅಕ್ಟೋಬರ್ 2026ರಲ್ಲಿ ಮತ್ತೆ ಐದು ವರ್ಷಗಳ ಅವಧಿಗೆ ಮರುನೇಮಕ ಮಾಡಲಾಗಿದೆ. ತಮ್ಮ ಪತಿ ಕಲಾನಿಧಿ ಮಾರನ್ ಅವರಂತೆಯೇ ಇವರೂ ಸಹ ₹87.50 ಕೋಟಿ ವಾರ್ಷಿಕ ಪ್ಯಾಕೇಜ್ (ಮೂಲ ವೇತನ ಹಾಗೂ ಬೋನಸ್ ಸೇರಿ) ಪಡೆಯುತ್ತಿದ್ದಾರೆ.
ದೊಡ್ಡ ಉದ್ಯಮ ಸಾಮ್ರಾಜ್ಯದ ಒಡೆಯರಾಗಿದ್ದರೂ ಕಲಾನಿಧಿ ಮತ್ತು ಕಾವೇರಿ ದಂಪತಿ ಪ್ರಚಾರದಿಂದ ದೂರವಿದ್ದು ಸರಳ ಜೀವನ ನಡೆಸುತ್ತಾರೆ. ಈ ದಂಪತಿಯ ಏಕೈಕ ಪುತ್ರಿ ಕಾವ್ಯಾ ಕಲಾನಿಧಿ ಮಾರನ್ ಕೂಡ ಸನ್ ಟಿವಿ ನೆಟ್‌ವರ್ಕ್‌ನ ನಿರ್ದೇಶಕಿಯಾಗಿದ್ದು, ಐಪಿಎಲ್‌ನ 'ಸನ್‌ರೈಸರ್ಸ್ ಹೈದರಾಬಾದ್', ದಕ್ಷಿಣ ಆಫ್ರಿಕಾದ 'ಸನ್‌ರೈಸರ್ಸ್ ಈಸ್ಟರ್ನ್ ಕೇಪ್' ಹಾಗೂ ಇಂಗ್ಲೆಂಡ್‌ನ 'ಸನ್‌ರೈಸರ್ಸ್ ಲೀಡ್ಸ್' ಕ್ರಿಕೆಟ್ ತಂಡಗಳ ಮುಖ್ಯಸ್ಥೆಯಾಗಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಇದೀಗ ಕಾವ್ಯಾ ಮಾರನ್ ಅವರು ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರೊಂದಿಗೆ ನವೆಂಬರ್ 11 ರಂದು ಗ್ರೀಸ್‌ನಲ್ಲಿ ನಡೆದ ಅದ್ಧೂರಿ ವಿವಾಹ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇಂದು (ನವೆಂಬರ್ 21, 2026) ಚೆನ್ನೈನಲ್ಲಿ ಇವರ ಅದ್ಧೂರಿ ವಿವಾಹ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಶುಭ ಸಮಾರಂಭಕ್ಕೆ ತಮಿಳುನಾಡು ಮತ್ತು ತೆಲಂಗಾಣ ಮುಖ್ಯಮಂತ್ರಿಗಳು ಸೇರಿದಂತೆ ದೇಶದ ಗಣ್ಯಾತಿಗಣ್ಯರನ್ನು ಮಾರನ್ ದಂಪತಿ ಆಹ್ವಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ