
ನವದೆಹಲಿ: ಐರೋಪ್ಯ ರಾಷ್ಟ್ರವಾದ ಫ್ರಾನ್ಸ್‌ನಲ್ಲಿ ಎದ್ದಿರುವ 'ಜೆನ್-ಝೀ' ಯುವಜನರ ಬೃಹತ್ ದಂಗೆಗೂ ಹಾಗೂ ಭಾರತದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳಿಗೂ ನಿಕಟ ಸಂಪರ್ಕವಿದೆ ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಬೆಳಕಿಗೆ ಬಂದಿದೆ. ಅಮೆರಿಕದ ಪ್ರಖ್ಯಾತ ಮಾಧ್ಯಮ ಸಂಸ್ಥೆ 'ಫಾಕ್ಸ್ ನ್ಯೂಸ್ ಡಿಜಿಟಲ್' ಪ್ರಕಟಿಸಿರುವ ವಿಶೇಷ ತನಿಖಾ ವರದಿಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಅರಾಜಕತೆ ಸೃಷ್ಟಿಸಲು ಎಡಪಂಥೀಯ ಹಾಗೂ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಜಂಟಿಯಾಗಿ ಯೋಜನಾಬದ್ಧ ಸಂಚು ರೂಪಿಸಿವೆ.
ಫಾಕ್ಸ್ ನ್ಯೂಸ್ ಡಿಜಿಟಲ್‌ನ ಹಿರಿಯ ಸಂಪಾದಕಿ ಅಸ್ರಾ ನೊಮಾನಿ ಅವರು ಸಿದ್ಧಪಡಿಸಿರುವ 'ಗ್ಲೋಬಲ್ ಚಾವೋಸ್ ಇಂಕ್ ಗ್ರೋಸ್ ಟು 101 ಗ್ರೂಪ್ಸ್' ಎಂಬ ಶೀರ್ಷಿಕೆಯ ತನಿಖಾ ವರದಿಯಲ್ಲಿ ಈ ಜಾಗತಿಕ ಜಾಲದ ಬಗ್ಗೆ ವಿಸ್ತೃತ ಮಾಹಿತಿ ನೀಡಲಾಗಿದೆ. ಭಾರತ ಮತ್ತು ಫ್ರಾನ್ಸ್ ಸೇರಿದಂತೆ ಒಟ್ಟು 9 ರಾಷ್ಟ್ರಗಳಲ್ಲಿ ಗಲಭೆ ಹಾಗೂ ಅಶಾಂತಿ ಸೃಷ್ಟಿಸಲು ಸುಮಾರು 101 ಸಂಘಟನೆಗಳ ಒಕ್ಕೂಟವಾದ 'ರೆಡ್-ಗ್ರೀನ್ ಪ್ರೊಟೆಸ್ಟ್ ಇಕೋ ಸಿಸ್ಟಮ್' ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಈ ನೆಟ್‌ವರ್ಕ್ ಸ್ಥಳೀಯ ಪ್ರತಿಭಟನೆಗಳಿಗೆ ಸಂಪನ್ಮೂಲ, ಆರ್ಥಿಕ ನೆರವು ಹಾಗೂ ಪ್ರಚೋದನೆ ನೀಡುತ್ತಾ, ಪ್ರತಿಭಟನೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿಸುತ್ತಿದೆ.
ವರದಿಯ ಪ್ರಕಾರ, ಫ್ರಾನ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ 'ಇಂಡಿಯನ್ ಅಲೈಯನ್ಸ್ ಪ್ಯಾರಿಸ್' ಎಂಬ ಸಂಸ್ಥೆಯು ಭಾರತ ಮತ್ತು ಫ್ರಾನ್ಸ್‌ನಲ್ಲಿ ನಡೆಯುವ ಪ್ರತಿಭಟನೆಗಳ ಸಂದೇಶಗಳನ್ನು ಪರಸ್ಪರ ಜೋಡಿಸುವ ಪ್ರಮುಖ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಈ ಸಂಸ್ಥೆಯು ಮ್ಯಾನ್‌ಹಟನ್‌ನಲ್ಲಿರುವ 'ಪೀಪಲ್ಸ್ ಫೋರಂ' ಜತೆಗೆ ನಿಕಟ ಪಾಲುದಾರಿಕೆ ಹೊಂದಿದೆ.
ಅಲ್ಲದೆ, 'ಪ್ರೋಗ್ರೆಸ್ಸಿವ್ ಇಂಟರ್ನ್ಯಾಷನಲ್' ಎಂಬ ಬಂಡವಾಳಶಾಹಿ ವಿರೋಧಿ ಅಂತಾರಾಷ್ಟ್ರೀಯ ಸಂಸ್ಥೆಯು ಇತ್ತೀಚೆಗೆ ತನ್ನ ವೆಬ್‌ಸೈಟ್‌ನಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಫ್ರಾನ್ಸ್, ಸ್ಪೇನ್, ಭಾರತ ಹಾಗೂ ಅಲ್ಬೇನಿಯಾಗಳಲ್ಲಿ ನಡೆಯುತ್ತಿರುವ ಪ್ರಸ್ತುತ ಹೋರಾಟಗಳು ಒಂದೇ ಜಾಗತಿಕ ಚಳವಳಿಯ ಭಾಗವೆಂದು ಹೇಳಿಕೊಂಡಿದೆ. ಇಂತಹ ದಂಗೆಗಳ ಮೂಲಕ ಪ್ರಚಲಿತ ಸರ್ಕಾರಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ಪ್ರೋತ್ಸಾಹಿಸುವುದಾಗಿ ಈ ಸಂಸ್ಥೆ ಮುಕ್ತವಾಗಿ ಘೋಷಿಸಿಕೊಂಡಿದೆ.
ಈ ಜಾಗತಿಕ ಅರಾಜಕತೆಯ ಹಿಂದೆ ಅಮೆರಿಕದಲ್ಲಿ ಜನಿಸಿ, ಪ್ರಸ್ತುತ ಚೀನಾದ ಶಾಂಘೈನಲ್ಲಿ ನೆಲೆಸಿರುವ ಟೆಕ್ ಉದ್ಯಮಿ ನೆವಿಲ್ಲೆ ರಾಯ್ ಸಿಂಘಂ ಅವರ ಆರ್ಥಿಕ ಮತ್ತು ಸೈದ್ಧಾಂತಿಕ ಬೆಂಬಲವಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಬ್ರೇಕ್‌ಥ್ರೂ ನ್ಯೂಸ್, ಕೋಡ್‌ಪಿಂಕ್ ಮತ್ತು ಪಾರ್ಟಿ ಫಾರ್ ಸೋಶಿಯಲಿಸಂ ಆಂಡ್ ಲಿಬರೇಷನ್‌ನಂತಹ ಪ್ರಭಾವಿ ಕಮ್ಯುನಿಸ್ಟ್ ಗುಂಪುಗಳಿಗೆ ಸಿಂಘಂ ಅವರ ನೇರ ಅನುದಾನ ಸಿಗುತ್ತಿದೆ. ಸಿಂಘಂ ಅವರ ಪತ್ನಿ ಜೋಡಿ ಇವಾನ್ಸ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ, ಫ್ರಾನ್ಸ್, ಸ್ಪೇನ್ ಮತ್ತು ಭಾರತದ ಮಾದರಿಯಲ್ಲಿ ಎಲ್ಲೆಡೆ ಜನರು ಬೀದಿಗಿಳಿದು ಹೋರಾಡಬೇಕು ಎಂದು ಕರೆ ನೀಡಿದ್ದರು.
ಇದಲ್ಲದೆ, ಪ್ಯಾರಿಸ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಪತ್ರಕರ್ತ ಹಾಗೂ ಇಂಡಿಯನ್ ಅಲೈಯನ್ಸ್ ಪ್ಯಾರಿಸ್‌ನ ಕಾರ್ಯದರ್ಶಿ ಜಾಯ್ ಬ್ಯಾನರ್ಜಿ ಅವರ ಹೆಸರೂ ಈ ದಂಗೆಯ ಯೋಜನೆಯಲ್ಲಿ ಕೇಳಿಬಂದಿದೆ. ಇವರು ಫ್ರೆಂಚ್ ಕಮ್ಯುನಿಸ್ಟ್ ಪಾರ್ಟಿ ಹಾಗೂ ಪ್ರಮುಖ ಕಾರ್ಮಿಕ ಸಂಘಟನೆಗಳ ಜೊತೆ ಆಳವಾದ ಸಂಪರ್ಕ ಹೊಂದಿರುವುದು ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿದೆ.
ವಿವಿಧ ದೇಶಗಳ ಆಂತರಿಕ ವಿಷಯಗಳನ್ನು ದಾಳವಾಗಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಉಂಟುಮಾಡುವ ಈ 'ಟೂಲ್‌ಕಿಟ್' ಮಾದರಿಯ ಜಾಲವು ಇದೀಗ ಪ್ರಪಂಚದಾದ್ಯಂತ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ