
ರಾಜ್ಯ ರಾಜಕಾರಣದಲ್ಲಿ 9 ಬಾರಿ ಶಾಸಕ, ಉಪ ಮುಖ್ಯಮಂತ್ರಿ ಹಾಗೂ 2 ಬಾರಿ ಮುಖ್ಯಮಂತ್ರಿಯಾದರೂ ಒಂದು ಸ್ವಂತ ಮನೆಯೂ ಇಲ್ಲದೇ ಸ್ನೇಹಿತರು ಕೊಟ್ಟಿದ್ದ ಮನೆಯಲ್ಲೇ ವಾಸವಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಂತ ಸೂರಿನ ಕನಸು ಮೈಸೂರಿನಲ್ಲಿ ವಿನಾಯಕ ಚತುರ್ಥಿ ದಿನ ಗೃಹ ಪ್ರವೇಶದ ಮೂಲಕ ನೆರವೇರುವ ಮೂಲಕ ಈಡೇರಿದೆ. ಆದರೆ, ಸಿದ್ದರಾಮಯ್ಯ ಅವರ ಮನೆ ನಿರ್ಮಾಣ ಸಂಪೂರ್ಣ ರೂವಾರಿ ಪಾರ್ವತಿ ಸಿದ್ದರಾಮಯ್ಯ ಅವರೇ ಆಗಿದ್ದಾರೆ. ಹೀಗಾಗಿ, ಈ ಮನೆ ನಮ್ಮ ಅಮ್ಮನ ಕನಸು ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ತಾಯಿ ಪಾರ್ವತಿ ಅವರ ಆಸೆಯಂತೆ ಈ ಮನೆಯನ್ನು ಕಟ್ಟಿಸಲಾಗಿದೆ ಎಂದು ಭಾವನಾತ್ಮಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
'ಈ ಮನೆಯನ್ನು ನಮ್ಮ ತಾಯಿಯ ಆಸೆಯಂತೆ ಮೈಸೂರಿನಲ್ಲಿ ಕಟ್ಟಿಸಿದ್ದೇವೆ. ನನ್ನ ತಾಯಿಗೆ ಹೇಗಾದರೂ ಮಾಡಿ ಮೈಸೂರಿನಲ್ಲಿ ಸೆಟಲ್ ಆಗಬೇಕು, ಇಲ್ಲೇ ನೆಲೆಸಬೇಕು ಎಂಬುದು ದೊಡ್ಡ ಆಸೆಯಾಗಿತ್ತು. ಹೀಗಾಗಿಯೇ ಅವರ ಇಚ್ಛೆಯಂತೆಯೇ ನಾವು ಈ ಮನೆ ಕಟ್ಟಿಸಿದ್ದೇವೆ. ಅಷ್ಟೇ ಅಲ್ಲ, ಈ ಮನೆಯ ಸಂಪೂರ್ಣ ಪ್ಲ್ಯಾನ್ (ವಿನ್ಯಾಸ) ಕೂಡ ನಮ್ಮ ತಾಯಿಯದ್ದೇ' ಎಂದು ಸ್ಮರಿಸಿಕೊಂಡರು.
ಕುಟುಂಬದ ಹಿಂದಿನ ದಿನಗಳನ್ನು ನೆನಪಿಸಿಕೊಂಡ ಯತೀಂದ್ರ, 'ನಾವು ಹಿಂದೆ ಎರಡು ಮನೆಗಳನ್ನು ಕಟ್ಟಿಸಿದ್ದೆವು. ಆದರೆ, ಅಂದಿನ ಪರಿಸ್ಥಿತಿಯಿಂದಾಗಿ ಆ ಮನೆಯಲ್ಲಿ ನಾವು ಒಂದು ದಿನವೂ ಇರಲು ಸಾಧ್ಯವಾಗಿರಲಿಲ್ಲ. ಅನಿವಾರ್ಯ ಕಾರಣಗಳಿಂದ ಆ ಎರಡು ಮನೆಯನ್ನು ಮಾರಾಟ ಮಾಡುವ ಪರಿಸ್ಥಿತಿ ಬಂದಿತ್ತು, ಹಾಗಾಗಿ ಮಾರಿದೆವು. ನಮ್ಮ ತಾಯಿ 40 ವರ್ಷದಿಂದ ಕಂಡಿದ್ದ ಕನಸು ಈಗ ನನಸಾಗಿದೆ. ಈಗ ಅಮ್ಮನ ಆಸೆಯಂತೆ ಹೊಸ ಮನೆ ಕಟ್ಟಿಸಿದ್ದೇವೆ' ಎಂದರು.
ಮುಂದಿನ ದಿನಗಳಲ್ಲಿ ತಂದೆ-ತಾಯಿ ಹಾಗೂ ತಾವೆಲ್ಲರೂ ಇದೇ ಮನೆಯಲ್ಲಿ ಉಳಿಯುವುದಾಗಿ ಯತೀಂದ್ರ ತಿಳಿಸಿದರು. 'ಇನ್ಮುಂದೆ ನನ್ನ ತಂದೆ (ಸಿದ್ದರಾಮಯ್ಯ) ವಾರಕ್ಕೊಮ್ಮೆಯಾದರೂ ಮೈಸೂರಿಗೆ ಬರಲು ಹೇಳಿದ್ದೇವೆ. ಅದರಂತೆ ಇನ್ನುಮುಂದೆ ನಮ್ಮ ತಂದೆ ಪ್ರತಿವಾರ ಮೈಸೂರಿಗೆ ಬಂದು ಹೋಗುತ್ತಾರೆ" ಎಂದು ಮಾಹಿತಿ ನೀಡಿದರು.
ಸಿದ್ದರಾಮಯ್ಯ ಅವರ ಕುಟುಂಬದ ಹೊಸ ಮನೆಯ ಗೃಹಪ್ರವೇಶವು ರಾಜಕೀಯ ವಲಯ ಹಾಗೂ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದು, ತಮ್ಮ ತಾಯಿ ಪಾರ್ವತಿ ಅವರ ಆಸೆಯಂತೆ ಕಟ್ಟಿದ ಈ ಮನೆಯು ಸದ್ಯ ಮೈಸೂರಿನಲ್ಲಿ ಎಲ್ಲರ ಗಮನ ಸೆಳೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ