ಜಡ್ಜ್‌ ನೇಮಕಾತಿ, ವರ್ಗಾವಣೆಯಲ್ಲಿ ಒಂದೇ ಸಮುದಾಯಕ್ಕೆ ಅತಿಯಾದ ಪ್ರಾಮುಖ್ಯತೆ: ರಾಷ್ಟ್ರಪತಿಗೆ ಪತ್ರ ಬರೆದು ದೂರಿದ ಮಾಜಿ CJI BR Gavai

Published : Nov 27, 2026, 06:43 PM IST
Former CJI BR Gavai

ಸಾರಾಂಶ

ಉನ್ನತ ನ್ಯಾಯಾಂಗ ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಒಬಿಸಿ, ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತರಿಗೆ ಸೂಕ್ತ ಪ್ರಾತಿನಿಧ್ಯ ನೀಡದಿರುವ ಕುರಿತು ಮಾಜಿ ಸಿಜೆಐ ಬಿ.ಆರ್. ಗವಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವದೆಹಲಿ (ನ.27): ಉನ್ನತ ನ್ಯಾಯಾಂಗದಲ್ಲಿನ ಇತ್ತೀಚಿನ ನೇಮಕಾತಿಗಳು ಮತ್ತು ವರ್ಗಾವಣೆಗಳ ಕುರಿತು ತೀವ್ರ ಅಸಮಾಧಾನ ಮತ್ತು ಭಿನ್ನಮತ ವ್ಯಕ್ತಪಡಿಸಿರುವ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ (BR Gavai), ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಒಬಿಸಿ (OBC), ಎಸ್‌ಸಿ (SC), ಎಸ್‌ಟಿ (ST) ಮತ್ತು ಅಲ್ಪಸಂಖ್ಯಾತರ ಕಡಿಮೆ ಪ್ರಾತಿನಿಧ್ಯದ ಸಮಸ್ಯೆಯನ್ನು ನಿಭಾಯಿಸಲು ಮಧ್ಯಪ್ರವೇಶಿಸುವಂತೆ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಮನವಿ ಮಾಡಿದ್ದಾರೆ. ಕೊಲಿಜಿಯಂ ಶಿಫಾರಸುಗಳ ಪ್ರಾಧಾನ್ಯತೆಯು ಕೊಲಿಜಿಯಂ ಅನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸುವುದಿಲ್ಲ ಅಥವಾ ರಾಷ್ಟ್ರಪತಿಯವರ ಸಾಂವಿಧಾನಿಕ ಕರ್ತವ್ಯಗಳಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಡುವುದಿಲ್ಲ ಎಂದು ಗವಾಯಿ ಹೇಳಿದ್ದಾರೆ.

ಕೆ.ಜಿ. ಬಾಲಕೃಷ್ಣನ್ ಅವರ ನಂತರ ಭಾರತೀಯ ನ್ಯಾಯಾಂಗದ ಮುಖ್ಯಸ್ಥರಾದ ಎರಡನೇ ದಲಿತ ಹಾಗೂ ಮೊದಲ ಬೌದ್ಧ ಧರ್ಮೀಯರಾದ ನ್ಯಾಯಮೂರ್ತಿ ಗವಾಯಿ ಅವರು, ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯನ್ನು ಬಲವಾಗಿ ಸಮರ್ಥಿಸಿಕೊಂಡು ಬಂದವರು. ಆದರೆ ಇದೀಗ ಉನ್ನತ ನ್ಯಾಯಾಂಗದ ನೇಮಕಾತಿಗಳು ಮತ್ತು ವರ್ಗಾವಣೆಗಳಲ್ಲಿ ಜಾತಿ ಆಧಾರಿತ ಆದ್ಯತೆಗಳು, ಒಳಗೊಳ್ಳುವಿಕೆಯ ಕೊರತೆ ಹಾಗೂ ಅರ್ಹತೆಯ ಕಡೆಗಣನೆಯ ಪ್ರವೃತ್ತಿ ಬೆಳೆಯುತ್ತಿದೆ ಎಂದು ಅವರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. 2025ರ ನವೆಂಬರ್ 23ರಂದು ನ್ಯಾಯಮೂರ್ತಿ ಗವಾಯಿ ಅವರು ನಿವೃತ್ತರಾದ ಬಳಿಕ, ಹಾಲಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ (Surya Kant) ಅವರು ಆ ಸ್ಥಾನವನ್ನು ವಹಿಸಿಕೊಂಡಿದ್ದಾರೆ.

ನಾನು ಕೊಲಿಜಿಯಂನ ಭಾಗವಾಗಿದ್ದಾಗ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ತತ್ವಗಳನ್ನು ಸದಾ ಪಾಲಿಸಿದ್ದೇನೆ. ಸಮಾಜದ ಮುಂದುವರಿದ ವರ್ಗದವರು ಸೇರಿದಂತೆ ಪರಿಶಿಷ್ಟ ಜಾತಿಗಳು, ಬುಡಕಟ್ಟುಗಳು, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯವನ್ನು ಖಚಿತಪಡಿಸಲಾಗಿತ್ತು' ಎಂದು ಅವರು ಹೇಳಿದ್ದಾರೆ.

ತಮ್ಮ ಉತ್ತರಾಧಿಕಾರಿಯ ಹೆಸರನ್ನು ಉಲ್ಲೇಖಿಸದ ಮಾಜಿ ಸಿಜೆಐ, ಆದರೆ, ಇತ್ತೀಚಿನ ದಿನಗಳಲ್ಲಿ ಅರ್ಹತೆ ಮತ್ತು ಒಳಗೊಳ್ಳುವಿಕೆಯ ತತ್ವಗಳಿಗೆ ಸಂಪೂರ್ಣ ನಿರ್ಲಕ್ಷ್ಯ ತೋರಿಸುವ ಕಳವಳಕಾರಿ ಬೆಳವಣಿಗೆಗಳು ನಡೆದಿವೆ. ವೈವಿಧ್ಯತೆ, ಒಳಗೊಳ್ಳುವಿಕೆ ಮತ್ತು ಅರ್ಹತೆಯ ನೀತಿಗೆ ಸಂಪೂರ್ಣವಾಗಿ ವಿರುದ್ಧವಾಗಿ ಹಾಗೂ ಇತರ ಅಪ್ರಸ್ತುತ ಅಂಶಗಳನ್ನು ಪರಿಗಣಿಸಿ ನೇಮಕಾತಿಗಳು ಮತ್ತು ವರ್ಗಾವಣೆಗಳನ್ನು ಮಾಡಲಾಗುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿರುವುದರಿಂದ ನನ್ನ ಭಿನ್ನಮತ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದಿದ್ದಾರೆ.

'ಒಂದು ನಿರ್ದಿಷ್ಟ ಸಮುದಾಯಕ್ಕೆ ಆದ್ಯತೆ': ರಾಷ್ಟ್ರಪತಿಗೆ ಮೂರು ಪುಟಗಳ ಪತ್ರ

ಪರಿಶಿಷ್ಟ ಪಂಗಡದಿಂದ ಬಂದಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದಿರುವ ಮೂರು ಪುಟಗಳ ಪತ್ರದಲ್ಲಿ, "ಸಮಾಜದ ಒಂದು ನಿರ್ದಿಷ್ಟ ವರ್ಗದ" ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ನ್ಯಾಯಮೂರ್ತಿ ಗವಾಯಿ ಆರೋಪಿಸಿದ್ದಾರೆ. ಆ ಸಮುದಾಯದ ಹೆಸರನ್ನು ಉಲ್ಲೇಖಿಸದೆಯೇ, ಪರಿಶಿಷ್ಟ ಜಾತಿಗಳು, ಬುಡಕಟ್ಟುಗಳು, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರದ ಮುಂದುವರಿದ ವರ್ಗಗಳ ವ್ಯಕ್ತಿಗಳೂ ಸೇರಿದಂತೆ ಇತರ ಎಲ್ಲರನ್ನೂ ಹೊರತುಪಡಿಸಿ, ಸಮಾಜದ ಒಂದು ನಿರ್ದಿಷ್ಟ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಶಿಫಾರಸು/ಭಡ್ತಿ ನೀಡುವಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಉನ್ನತ ನ್ಯಾಯಾಂಗದಲ್ಲಿ ಸಮಾನ ಪ್ರಾತಿನಿಧ್ಯದ ಸಾಂವಿಧಾನಿಕ ಕರ್ತವ್ಯವನ್ನು ಎಲ್ಲರಿಗೂ ನೆನಪಿಸುವ ಸಲುವಾಗಿ ರಾಷ್ಟ್ರಪತಿಯವರು "ಈ ವಿಷಯದ ಗಂಭೀರತೆಯನ್ನು ಗುರುತಿಸಿ ಮಧ್ಯಪ್ರವೇಶಿಸಬೇಕು" ಎಂದು ನ್ಯಾಯಮೂರ್ತಿ ಗವಾಯಿ ಒತ್ತಾಯಿಸಿದ್ದಾರೆ.

ನ್ಯಾಯಮೂರ್ತಿ ಗವಾಯಿ ನಿವೃತ್ತಿ ಬಳಿಕದ ನೇಮಕಾತಿಗಳು

ನ್ಯಾಯಮೂರ್ತಿ ಗವಾಯಿ ಅವರ ನಿವೃತ್ತಿಯ ನಂತರ, ಹಾಲಿ ಸಿಜೆಐ ಸೂರ್ಯ ಕಾಂತ್ ನೇತೃತ್ವದ ಕೊಲಿಜಿಯಂ ಮೂಲಕ ಶೀಲ್ ನಾಗು, ಚಂದ್ರಶೇಖರ್, ಸಂಜೀವ್ ಸಚ್‌ದೇವ, ಅರುಣ್ ಪಲ್ಲಿ, ವಿ. ಮೋಹನಾ, ಸುನೀತಾ ಅಗರ್ವಾಲ್, ಡಿ.ಕೆ. ಉಪಾಧ್ಯಾಯ ಮತ್ತು ಅಪ್ರೇಶ್ ಕುಮಾರ್ ಸಿಂಗ್ ಸೇರಿದಂತೆ ಹೊಸ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ.

2018ರಿಂದ 715 ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕ: ಸರ್ಕಾರದ ಅಂಕಿಅಂಶಗಳ ಉಲ್ಲೇಖ

ಸರ್ಕಾರದ ಡೇಟಾ ಉಲ್ಲೇಖಿಸಿರುವ ಮಾಜಿ ಸಿಜೆಐ, ಪ್ರಾತಿನಿಧ್ಯದ ಅಸಮತೋಲನವನ್ನು ಅಂಕಿಅಂಶಗಳ ಮೂಲಕ ತೆರೆದಿಟ್ಟಿದ್ದಾರೆ. 2018ರಿಂದ ನೇಮಕಗೊಂಡ 715 ಹೈಕೋರ್ಟ್ ನ್ಯಾಯಮೂರ್ತಿಗಳ ಪೈಕಿ, ಕೇವಲ 22 ಮಂದಿ ಪರಿಶಿಷ್ಟ ಜಾತಿಗಳಿಗೆ (SC), 16 ಮಂದಿ ಪರಿಶಿಷ್ಟ ಪಂಗಡಗಳಿಗೆ (ST), 89 ಮಂದಿ ಇತರ ಹಿಂದುಳಿದ ವರ್ಗಗಳಿಗೆ (OBC) ಮತ್ತು 37 ಮಂದಿ ಅಲ್ಪಸಂಖ್ಯಾತರಿಗೆ ಸೇರಿದವರಾಗಿದ್ದಾರೆ. ಸಾಂವಿಧಾನಿಕ ನ್ಯಾಯಾಲಯಗಳ ಪ್ರತಿ ನಾಲ್ವರು ನ್ಯಾಯಮೂರ್ತಿಗಳಲ್ಲಿ ಸರಿಸುಮಾರು ಮೂವರು ಸಾಮಾನ್ಯ ವರ್ಗಕ್ಕೆ (General category) ಸೇರಿದವರಾಗಿದ್ದಾರೆ ಎಂದು ಮಾಜಿ ಸಿಜೆಐ ಪತ್ರದಲ್ಲಿ ತಿಳಿಸಿದ್ದಾರೆ.

ಜನವರಿ 2021 ಮತ್ತು ಜನವರಿ 2026ರ ನಡುವಿನ ನೇಮಕಾತಿಗಳಿಗೆ ಸಂಬಂಧಿಸಿದಂತೆ, ಮುಂದುವರಿದ ಸಮುದಾಯಗಳ ವರದಿಯಾದ ಪಾಲು ಶೇ. 80ರ ಸಮೀಪದಲ್ಲಿದೆ" ಎಂದು ಹೇಳಿದ ಅವರು, ಒಟ್ಟು ಜನಸಂಖ್ಯೆಯಲ್ಲಿ ಬಹುಶಃ ಶೇ. 40ರಿಂದ 50ರಷ್ಟಿರುವ ಒಬಿಸಿ ವರ್ಗದವರಿಗೆ ಉನ್ನತ ನ್ಯಾಯಾಂಗದಲ್ಲಿ ಶೇ. 14ಕ್ಕಿಂತ ಕಡಿಮೆ ಪಾಲು ದೊರೆತಿದೆ ಎಂದು ಸೇರಿಸಿದ್ದಾರೆ.

ಶೇ. 5ಕ್ಕಿಂತ ಕಡಿಮೆ ಜನಸಂಖ್ಯೆಯ ಸಮುದಾಯಕ್ಕೆ ಶೇ. 40ಕ್ಕೂ ಹೆಚ್ಚು ಪ್ರಾತಿನಿಧ್ಯ

ಸುಪ್ರೀಂ ಕೋರ್ಟ್ ನೇಮಕಾತಿಗಳಲ್ಲಿ ಜಾತಿಯನ್ನು ದಾಖಲಿಸಲಾಗುವುದಿಲ್ಲ ಎಂದು ತಿಳಿಸಿದ ಅವರು, ಈ "ಮೌನವೇ" ಸಮಸ್ಯೆಯ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ.

ಜಾರ್ಜ್ ಗ್ಯಾಡ್‌ಬಾಯ್ಸ್ ಅಧ್ಯಯನ ಉಲ್ಲೇಖಿಸಿದ ಅವರು "ದೇಶದ ಜನಸಂಖ್ಯೆಯಲ್ಲಿ ಶೇ. 5ಕ್ಕಿಂತ ಕಡಿಮೆ ಇರುವ ಸಮುದಾಯವೊಂದು ಸುಪ್ರೀಂ ಕೋರ್ಟ್‌ನಲ್ಲಿ ಶೇ. 40ಕ್ಕೂ ಹೆಚ್ಚು ಪ್ರಾತಿನಿಧ್ಯ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಇದು ಹಲವು ಪಟ್ಟು ಹೆಚ್ಚಾಗಿದೆ. ಇದು ಹೊಸದೇನಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಮತ್ತು ಅದೇ ಕಾರಣಕ್ಕಾಗಿ ಇದು ದಿನೇದಿನೇ ಕ್ಷಮಿಸಲಾಗದ ತಪ್ಪಾಗುತ್ತಿದೆ" ಎಂದು ಗವಾಯಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರಿಗೂ ಪ್ರತಿಗಳನ್ನು ಕಳುಹಿಸಲಾಗಿರುವ ಈ ಪತ್ರದಲ್ಲಿ, ಕೊಲಿಜಿಯಂನ ಸದಸ್ಯರಾಗಿಯೂ ಹಾಗೂ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ "ಕಳಕಳಿಯ ನಾಗರಿಕನಾಗಿ" ತಾವು ಬರೆಯುತ್ತಿದ್ದು, "ಅದರ ಕಾರ್ಯವೈಖರಿಯು ಈಗ ಪ್ರಶ್ನಾರ್ಹವಾಗಿದೆ" ಎಂದು ತಿಳಿಸಿದ್ದಾರೆ. ಒಂದೇ ಸಮುದಾಯವನ್ನು ಓಲೈಸಲು ಮತ್ತು ಪುರಸ್ಕರಿಸಲು ಶಿಫಾರಸುಗಳನ್ನು ಹೆಚ್ಚಾಗಿ ಮಾಡಲಾಗುತ್ತಿದೆ ಎಂಬ ಭಾವನೆಯನ್ನು ಬೆಂಬಲಿಸುವ "ಬಲವಾದ ಸಂದರ್ಭಗಳು" ಇತ್ತೀಚಿನ ಘಟನೆಗಳಿಂದ ಸೃಷ್ಟಿಯಾಗಿವೆ ಎಂದೂ ಅವರು ಹೇಳಿದ್ದಾರೆ.

1950 ಮತ್ತು 1989ರ ನಡುವೆ ಸುಪ್ರೀಂ ಕೋರ್ಟ್‌ನ ಮೊದಲ ನಾಲ್ಕು ದಶಕಗಳ ಕುರಿತು ರಾಜಕೀಯ ವಿಜ್ಞಾನಿ ಜಾರ್ಜ್ ಗ್ಯಾಡ್‌ಬಾಯ್ಸ್ (George Gadbois) ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿ, ಆಗ ಜನಸಂಖ್ಯೆಯಲ್ಲಿ ಸುಮಾರು ಹತ್ತೊಂಬತ್ತನೇ ಒಂದು ಭಾಗದಷ್ಟಿದ್ದ (ಒಂದು ನಿರ್ದಿಷ್ಟ — ಬ್ರಾಹ್ಮಣ ಸಮುದಾಯಕ್ಕೆ ನೀಡಲಾಗಿದ್ದ ಅಸಮಾನ ಪ್ರಾತಿನಿಧ್ಯವನ್ನು ಉಲ್ಲೇಖಿಸುವ ಅಧ್ಯಯನ) ಸಮುದಾಯವು ಮೂರನೇ ಒಂದು ಭಾಗಕ್ಕಿಂತ ಹೆಚ್ಚು ನ್ಯಾಯಾಧೀಶ ಹುದ್ದೆಗಳನ್ನು ಹೊಂದಿತ್ತು ಎಂದು ಗಮನಸೆಳೆದಿದ್ದಾರೆ.

ಹೈಕೋರ್ಟ್ ವರ್ಗಾವಣೆಗಳು, ಮುಖ್ಯ ನ್ಯಾಯಮೂರ್ತಿ ನೇಮಕಾತಿ ಮತ್ತು ಕಾರ್ಯಾಂಗದ ಪಾತ್ರ

ಯಾರ ಹೆಸರನ್ನೂ ಉಲ್ಲೇಖಿಸದೆಯೇ ಹೈಕೋರ್ಟ್ ವರ್ಗಾವಣೆಗಳು ಮತ್ತು ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಗಳನ್ನೂ ನ್ಯಾಯಮೂರ್ತಿ ಗವಾಯಿ ಪ್ರಶ್ನಿಸಿದ್ದಾರೆ. ಒಂದು ಹೈಕೋರ್ಟ್‌ನಿಂದ ಮತ್ತೊಂದು ಸಣ್ಣ ಹೈಕೋರ್ಟ್‌ಗೆ ಮತ್ತು ತದನಂತರ ಆ ಹೈಕೋರ್ಟ್‌ನಿಂದ ಅತ್ಯಂತ ಸಣ್ಣ ಹೈಕೋರ್ಟ್‌ಗಳಲ್ಲಿ ಒಂದಕ್ಕೆ ವರ್ಗಾವಣೆಗೊಂಡಿದ್ದ ಮುಖ್ಯ ನ್ಯಾಯಮೂರ್ತಿಯೊಬ್ಬರಿಗೆ, ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಾಗಿರುವ ಕಾರಣಕ್ಕಾಗಿ ಈಗ ಪ್ರಮುಖ ಹೈಕೋರ್ಟ್‌ಗೆ ವರ್ಗಾವಣೆ ನೀಡುವ ಮೂಲಕ ಬಹುಮಾನ ನೀಡಲಾಗಿದೆ" ಎಂದು ಅವರು ಆರೋಪಿಸಿದ್ದಾರೆ.

ಇದರ ಪರಿಣಾಮವಾಗಿ, ಅವರಿಗೆ ದಾರಿ ಮಾಡಿಕೊಡಲು ಅರ್ಹ ಹಾಗೂ ಶ್ರಮಶೀಲ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯೊಬ್ಬರನ್ನು ಸಣ್ಣ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ ಎಂದು ಗವಾಯಿ ಹೇಳಿದ್ದಾರೆ. ಇದು ಅಂತಹ ಅರ್ಹ ಮುಖ್ಯ ನ್ಯಾಯಮೂರ್ತಿಯ ಮನೋಸ್ಥೈರ್ಯವನ್ನು ಕುಗ್ಗಿಸುವುದಷ್ಟೇ ಅಲ್ಲದೆ, ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದವರು ಸೇರಿದಂತೆ ಎಲ್ಲಾ ಶ್ರಮಶೀಲ ನ್ಯಾಯಾಧೀಶರ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಾಂಗದ ಪಾತ್ರ ಮತ್ತು ಕೊಲಿಜಿಯಂ ನಿಲುವು

ನೇಮಕಾತಿಗಳು ಮತ್ತು ವರ್ಗಾವಣೆಗಳಲ್ಲಿ ಕಾರ್ಯಾಂಗವೂ "ಸಮಾನ ಪಾಲುದಾರ" (Equal stakeholder) ಆಗಿದೆ ಎಂದು ಹೇಳಿದ ಅವರು, ಹಿಂದುಳಿದ ವರ್ಗಗಳ ಹೆಸರುಗಳನ್ನು ಸೇರಿಸುವಂತೆ ಸಂಸತ್ತು ಮತ್ತು ಕಾರ್ಯಾಂಗವು ಕೊಲಿಜಿಯಂ ಅನ್ನು ಹಲವು ಬಾರಿ ಕೇಳಿಕೊಂಡಿವೆ ಎಂದಿದ್ದಾರೆ. 2026ರ ಮಾರ್ಚ್‌ನಲ್ಲಿ ನ್ಯಾಯಮೂರ್ತಿ ಗವಾಯಿ ಅವರು ಕೊಲಿಜಿಯಂ ವ್ಯವಸ್ಥೆಯನ್ನು ಸದ್ಯದ ಮಟ್ಟಿಗೆ ಅತ್ಯಂತ ಕಾರ್ಯಸಾಧ್ಯವಾದ ಮಾದರಿ ಎಂದು ಕರೆದಿದ್ದರಾದರೂ, ಶಿಫಾರಸುಗಳಿಗೆ ಅನುಮೋದನೆ ನೀಡುವಲ್ಲಿ ಕಾರ್ಯಾಂಗದ ವಿಳಂಬವನ್ನು ಟೀಕಿಸಿ, ಕೊಲಿಜಿಯಂ ಹೆಸರನ್ನು ಪುನರುಚ್ಚರಿಸಿದ (Reiterate) ಬಳಿಕ ಕಾರ್ಯಾಂಗವು ಪಾಲಿಸಲೇಬೇಕು ಎಂದು ಹೇಳಿದ್ದರು. ವಾಸ್ತವವಾಗಿ, ಇಂತಹ ವಿಷಯಗಳಲ್ಲಿ ರಾಷ್ಟ್ರಪತಿಯವರು ಮಂತ್ರಿ ಮಂಡಲದ ಸಲಹೆಯಂತೆ ಕಾರ್ಯನಿರ್ವಹಿಸುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಳಪತಿಯ ಚಳಿ ಬಿಡಿಸಿ ಕಾರ್ತಿಕ ದೀಪ ಬೆಳಗಲು ಸುಪ್ರೀಂ ಕೋರ್ಟ್‌ ನೀಡಿದ ಆದೇಶದ 8 ಪ್ರಮುಖ ಅಂಶಗಳು
ಈ Ramayana ಸಿನಿಮಾ ಇಷ್ಟವಾಗದಿದ್ರೆ, ನಿಮ್ಮದೇ ಒಂದು ಮಾಡಿ: ಚಿತ್ರದ ವಿರುದ್ಧ ಕೇಸ್​ ಹಾಕಿದೋರಿಗೆ 'ಸುಪ್ರೀಂ' ತಪರಾಕಿ!