ದೇಶದಲ್ಲಿ ಒಂದೇ ದಿನ ಲಕ್ಷ ಕೊರೋನಾ ಕೇಸ್, 478 ಸಾವು!

By Kannadaprabha News  |  First Published Apr 6, 2021, 7:12 AM IST

ದೇಶದಲ್ಲಿ ಕೊರೋನಾ ಸಾರ್ವಕಾಲಿಕ ಏಕದಿನ ದಾಖಲೆ| ಒಂದೇ ದಿನ ಲಕ್ಷ ಕೇಸ್‌!| ಮೊದಲ ಅಲೆ ವೇಳೆ 20000ದಿಂದ 1 ಲಕ್ಷಕ್ಕೆ ಏರಲು 76 ದಿನ| ಈಗ ಬರೀ 25 ದಿನ| 1.25 ದಾಟಿದ ಒಟ್ಟು ಸೋಂಕಿತರ ಸಂಖ್ಯೆ| 478 ಸಾವು: ಮಹಾರಾಷ್ಟ್ರದಲ್ಲೇ 222!


ನವದೆಹಲಿ(ಏ.06): ದಿನೇ ದಿನೇ ವ್ಯಾಪಕವಾಗುತ್ತಿರುವ ಕೊರೋನಾ ಸೋಂಕು ಇದೀಗ ಮತ್ತಷ್ಟುಆತಂಕಕಾರಿಯಾಗಿ ಹೊರಹೊಮ್ಮಿದ್ದು, ಸೋಮವಾರ ಬೆಳಗ್ಗೆ 8ಕ್ಕೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 1.03 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1.25 ಕೋಟಿಗೆ ತಲುಪಿದೆ. ದೇಶದಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ಮತ್ತು ಯಾವುದೇ ಹಂತದಲ್ಲಿ ಒಂದೇ ದಿನದಲ್ಲಿ ಕಾಣಿಸಿಕೊಂಡ ಗರಿಷ್ಠ ಸೋಂಕಿನ ಪ್ರಮಾಣ ಇದಾಗಿದೆ. ಈ ಹಿಂದೆ 2020ರ ಸೆ.17ರಂದು 97894 ಪ್ರಕರಣ ದಾಖಲಾಗಿದ್ದೇ ಇದುವರೆಗೆ ದೈನಂದಿನ ಗರಿಷ್ಠವಾಗಿತ್ತು.

ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ 478 ಜನರು ವೈರಸ್‌ಗೆ ಬಲಿಯಾಗಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲಿ 222 ಮಂದಿ, ಪಂಜಾಬ್‌ನಲ್ಲಿ 51, ಛತ್ತೀಸ್‌ಗಢದಲ್ಲಿ 36, ಉತ್ತರ ಪ್ರದೇಶದಲ್ಲಿ 31, ಕರ್ನಾಟಕದಲ್ಲಿ 15 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಈವರೆಗೆ ಮೃತಪಟ್ಟವರ ಸಂಖ್ಯೆ 1.65 ಲಕ್ಷಕ್ಕೆ ತಲುಪಿದೆ. ಕಳೆದ 3 ವಾರಗಳಿಂದ ಕೊರೋನಾ ಸೋಂಕು ಸ್ಫೋಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 7.41ಲಕ್ಷಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ. 92.80ಕ್ಕೆ ಕುಸಿದಿದೆ.

Tap to resize

Latest Videos

25 ದಿನದಲ್ಲಿ 1 ಲಕ್ಷಕ್ಕೆ ಏರಿಕೆ:

ಕಳೆದ ವರ್ಷ ಕೊರೋನಾ ಆರಂಭವಾದ ಅವಧಿಯಲ್ಲಿ ಏಕದಿನದ ಕೊರೋನಾ ಪ್ರಕರಣಗಳ ಸಂಖ್ಯೆ 20 ಸಾವಿರದಿಂದ ಲಕ್ಷ ಸಮೀಪಕ್ಕೆ ಬರಲು 76 ದಿನಗಳು ಹಿಡಿದಿತ್ತು. ಆದರೆ ಕೊರೋನಾ 2ನೇ ಅಲೆ ಆರಂಭವಾದ ಕೇವಲ 25 ದಿನ (ಮಾ.10ರಿಂದ ಏ.4) ಗಳಲ್ಲಿ ನಿತ್ಯ ದೃಢವಾಗುವ ಕೋವಿಡ್‌ ಕೇಸುಗಳ ಸಂಖ್ಯೆ ಲಕ್ಷ ಗಡಿ ದಾಟಿದೆ.

8 ರಾಜ್ಯಗಳಲ್ಲಿ 81% ಸೋಂಕು:

ಸೋಮವಾರ ಹೊಸದಾಗಿ ದೃಢಪಟ್ಟಕೊರೋನಾ ಪ್ರಕರಣಗಳ ಪೈಕಿ ಶೇ.81.90ರಷ್ಟುಕೇಸುಗಳು ಮಹಾರಾಷ್ಟ್ರ, ಛತ್ತೀಸ್‌ಗಢ, ಕರ್ನಾಟಕ, ಉತ್ತರಪ್ರದೇಶ, ದೆಹಲಿ, ತಮಿಳುನಾಡು, ಮಧ್ಯಪ್ರದೇಶ ಮತ್ತು ಪಂಜಾಬ್‌ ಈ 8 ರಾಜ್ಯಗಳಲ್ಲಿ ಪತ್ತೆಯಾಗಿವೆ. ಮಹಾರಾಷ್ಟ್ರವೊಂದರಲ್ಲಿಯೇ 57,074 ಪ್ರಕರಣ ಪತ್ತೆಯಾಗಿವೆ. ನಂತರದ ಸ್ಥಾನದಲ್ಲಿ ಛತ್ತೀಸ್‌ಗಢ ಮತ್ತು ಕರ್ನಾಟಕ ಇವೆ. ಇನ್ನು ದೇಶದ ಒಟ್ಟು ಸಕ್ರಿಯ ಕೇಸುಗಳ ಪೈಕಿ ಶೇ.75.88ರಷ್ಟುಕೇಸುಗಳು ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್‌ಗಢ, ಕೇರಳ ಮತ್ತು ಪಂಜಾಬ್‌ ಈ 5 ರಾಜ್ಯಗಳಲ್ಲಿಯೇ ಇವೆ.

click me!