ಪಟಾಕಿ ಅಂಗಡಿಯಲ್ಲಿ ಸ್ಫೋಟ: ಐವರು ಸಾವು, 10 ಮಂದಿಗೆ ಗಾಯ!

By Suvarna NewsFirst Published Oct 27, 2021, 9:50 AM IST
Highlights

* ದೀಪಾವಳಿಗೂ ಮುನ್ನ ನಡೆದ ದುರಂತ

* ತಮಿಳುನಾಡಿನಲ್ಲಿ ಪಟಾಕಿ ಅಂಗಡಿಗೆ ಬೆಂಕಿ

* ದುರ್ಘಟನರೆಯಲ್ಲಿ ಕನಿಷ್ಠ ಐವರು ಸಾವು

ಚೆನ್ನೈ(ಅ.27): ದೀಪಾವಳಿ(Diwali) ಹಬ್ಬಕ್ಕೆ ತಮಿಳುನಾಡಿನಾದ್ಯಂತ(Tamil Nadu) ಹೊಸ ಹೊಸ ಪಟಾಕಿ(Firecracker) ಅಂಗಡಿಗಳು ತಲೆ ಎತ್ತಿವೆ. ಹಲವೆಡೆ ಅನುಮತಿ ಪಡೆಯದೇ ಪಟಾಕಿ ಅಂಗಡಿಗಳನ್ನು ಸ್ಥಾಪಿಸಿರುವ ಬಗ್ಗೆ ವರದಿಯಾಗಿದೆ. ಹೀಗಿರುವಾಗ ತಮಿಳುನಾಡಿನ ಕಲ್ಲಕುರಿಚಿ(Kallakurichi) ಜಿಲ್ಲೆಯ ಶಂಕರಪುರಂನಲ್ಲಿ(Sankarapuram) ಪಟಾಕಿ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದೆ. ಪರಿಣಾಮವಾಗಿ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಈ ದುರಂತದಲ್ಲಿ ಐವರು ಸಾವನ್ನಪ್ಪಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಏರುವ ಸಾಧ್ಯತೆಗಳಿವೆ.  

'ದೀಪಾವಳಿಗೆ ಮುಂಚಿತವಾಗಿ ಶಂಕರಪುರಂನಲ್ಲಿ ಆರಂಭಿಸಿದ್ದ ಪಟಾಕಿ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಐವರು ಸಾವಿಗೀಡಾಗಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ದೊಡ್ಡ ಅಂಗಡಿಯಲ್ಲಿ ಪಟಾಕಿ ಸ್ಫೋಟಗೊಂಡು ತಗುಲಿದ ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ವ್ಯಾಪಿಸಿದೆ. ಪಟಾಕಿ ಅಂಗಡಿ ಬಳಿಯಿದ್ದ ಬೇಕರಿಯೊಂದಕ್ಕೂ ಬೆಂಕಿ ವ್ಯಾಪಿಸಿ ಭಯಂಕರ ಶಬ್ಧದೊಂದಿಗೆ ಸಿಲಿಂಡರ್ ಸ್ಫೋಟಗೊಂಡಿದೆ. ಸುಮಾರು ನೂರು ಮೀಟರ್ ಎತ್ತರಕ್ಕೆ ಸಿಲಿಂಡರ್ ಎಹಾರಿದೆ ಎನ್ನಲಾಗಿದೆ. ಅಪಘಾತದ ಸ್ಥಳದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಜಮಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ. 

ಸ್ಫೋಟದಲ್ಲಿ ಗಾಯಗೊಂಡಿರುವವರನ್ನು ಕಲ್ಲಕುರಿಚಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. 

ಇನ್ನು ಪಟಾಕಿ ಅಂಗಡಿಯಲ್ಲಿ ಸ್ಫೋಟ ಸಂಭವಿಸಿ ಹಬ್ಬಿಕೊಂಡ ಬೆಂಕಿಯ ದೃಶ್ಯಗಳು ವೆಬ್ ಸೈಟ್ ಗಳಲ್ಲಿ ವೇಗವಾಗಿ ಶೇರ್ ಆಗುತ್ತಿವೆ. ಇದೇ ವೇಳೆ ಕಲ್ಲಕುರಿಚಿ ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿ ಪಟಾಕಿ ಅಂಗಡಿಗಳು ಕಂಡುಬಂದರೆ ಕೂಡಲೇ ಸೀಲ್ ಹಾಕಲಾಗುವುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

click me!