ಚೀನಾ ಯೋಧರ ಸಾವಿಗೆ ಸಿಕ್ತು ಮೊದಲ ಸಾಕ್ಷ್ಯ?

By Suvarna NewsFirst Published Aug 30, 2020, 12:24 PM IST
Highlights

ಗಲ್ವಾನ್‌: ಚೀನಾ ಯೋಧರ ಸಾವಿಗೆ ಸಿಕ್ತು ಮೊದಲ ಸಾಕ್ಷ್ಯ?| ಚೀನಿ ಯೋಧನ ಸಮಾಧಿ ಫೋಟೋ ವೈರಲ್‌

 

ನವದೆಹಲಿ(ಆ.30): ಗಲ್ವಾನ್‌ ಕಣಿವೆ ಸಂಘರ್ಷದಲ್ಲಿ ಹತ್ಯೆಗೀಡಾದ ಚೀನಾ ಯೋಧನೊಬ್ಬನ ಸಮಾಧಿಯ ಫೋಟೋವೊಂದು ಚೀನಾ ಸಾಮಾಜಿಕ ಜಾಲತಾಣ ‘ವಿಬೋ’ದಲ್ಲಿ ಪ್ರಕಟಗೊಂಡಿದ್ದು, ವೈರಲ್‌ ಆಗಿದೆ. ಈ ಮೂಲಕ ಜೂನ್‌ 15ರಂದು ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ನಡೆದ ಚೀನಾ-ಭಾರತ ನಡುವಣ ಹಿಂಸಾತ್ಮಕ ಸಂಘರ್ಷದಲ್ಲಿ ಚೀನಾ ಸೈನಿಕರೂ ಮೃತಪಟ್ಟಿದ್ದರು ಎಂಬುದಕ್ಕೆ ಮೊದಲ ಸಾಕ್ಷ್ಯ ದೊರೆತಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ದಕ್ಷಿಣ ಕ್ಸಿನ್‌ಜಿಯಾಂಗ್‌ ಸೇನಾ ವಲಯದಲ್ಲಿ ಆ.5ರಂದು ಮೃತ ಯೋಧನ ಸಮಾಧಿಯನ್ನು ಸ್ಥಾಪಿಸಲಾಗಿದೆ. ಫೋಟೋದಲ್ಲಿರುವ ಸಮಾಧಿಯ ಮೇಲೆ ‘ಚೆನ್‌ ಕ್ಸಿಯಾಂಗ್‌ರಾಂಗ್‌, 19316 ಪಡೆಯ ಸೈನಿಕ. 2020ರ ಜೂನ್‌ನಲ್ಲಿ ಭಾರತದ ಗಡಿಯಲ್ಲಿ ಉಂಟಾದ ಸಂಘರ್ಷದಲ್ಲಿ ಹುತಾತ್ಮನಾದ ಯೋಧ’ ಎಂಬ ವಿವರವಿದೆ. ಈ ಯೋಧ 2001ರ ಡಿಸೆಂಬರ್‌ನಲ್ಲಿ ಜನಿಸಿದ್ದ ಎಂಬ ಮಾಹಿತಿ ಇದೆ.

ಗಲ್ವಾನ್‌ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಕಾಳಗದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಆದರೆ ಚೀನಾ ಕಡೆಯಲ್ಲಿ ಉಂಟಾದ ಸಾವು-ನೋವಿನ ಬಗ್ಗೆ ಆ ದೇಶ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ.

click me!