ಅಮಿತ್ ಶಾ ವಿರುದ್ಧ ನಿರ್ಬಂಧಕ್ಕೆ ಅಮೆರಿಕಾ ಆಯೋಗ ಶಿಫಾರಸು

By Kannadaprabha NewsFirst Published Dec 11, 2019, 8:50 AM IST
Highlights

ಅಮೆರಿಕ ಸರ್ಕಾರದ ಧಾರ್ಮಿಕ ಸ್ವಾತಂತ್ರ್ಯ ಆಯೋಗವು, ಈಗ ಪೌರತ್ವ ತಿದ್ದುಪಡಿ ಮಸೂದೆಮಂಡಿಸಿರುವ ಗೃಹ ಸಚಿವ ಅಮಿತ್ ಶಾ ಮೇಲೆ ಅಮೆರಿಕವು ನಿರ್ಬಂಧ ಹೇರಬೇಕು ಎಂದು ಶಿಫಾರಸು ಮಾಡಿದೆ. 

ನವದೆಹಲಿ [ಡಿ.11]: ಈ ಹಿಂದೆ ಗುಜರಾತ್ ಗಲಭೆಗಳು ಸಂಭವಿಸಿದಾಗ ಅಂದಿನ ಗುಜರಾತ್ ಮುಖ್ಯಮಂತ್ರಿ ಹಾಗೂ ಇಂದಿನ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ವೀಸಾ ರದ್ದುಪಡಿಸಬೇಕು ಎಂದು ಶಿಫಾರಸು ಮಾಡಿದ್ದ ಅಮೆರಿಕ ಸರ್ಕಾರದ ಧಾರ್ಮಿಕ ಸ್ವಾತಂತ್ರ್ಯ ಆಯೋಗವು, ಈಗ ಪೌರತ್ವ ತಿದ್ದುಪಡಿ ಮಸೂದೆಮಂಡಿಸಿರುವ ಗೃಹ ಸಚಿವ ಅಮಿತ್ ಶಾ ಮೇಲೆ ಅಮೆರಿಕವು ನಿರ್ಬಂಧ ಹೇರಬೇಕು
ಎಂದು ಶಿಫಾರಸು ಮಾಡಿದೆ. 

ಈ ಶಿಫಾರಸಿಗೆ ಆಕ್ರೋಶ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ಸಚಿವಾಲಯವು,  ಆಧಾರ ರಹಿತವಾಗಿ ಹಾಗೂ ಪೂರ್ವಾಗ್ರಹ ಪೀಡಿತವಾಗಿ ತಲೆಬುಡವಿಲ್ಲದ ಶಿಫಾರಸನ್ನು  ಅಮೆರಿಕದ ಆಯೋಗ ಮಾಡಿದೆ’ ಎಂದು ಕಿಡಿಕಾರಿದೆ. ಪೌರತ್ವ ಮಸೂದೆ ಲೋಕಸಭೆಯಲ್ಲಿ ಸೋಮವಾರ ಪಾಸಾಗಿತ್ತು.

ಶಿಫಾರಸು ಏನು?: ಪೌರತ್ವ ತಿದ್ದುಪಡಿ ಮಸೂದೆಯು ಮುಸ್ಲಿಮರನ್ನು ಹೊರತುಪಡಿಸಿ ಉಳಿದ ವಲಸಿಗರಿಗೆ ಪೌರತ್ವವನ್ನು ನೀಡುವ ಮೂಲಕ ಧರ್ಮಾಧಾರಿತ ವಾಗಿ ಪೌರತ್ವ ನೀಡುವುದನ್ನು ಕಾನೂನು ಬದ್ಧಗೊಳಿಸುವ ಅಂಶಗಳನ್ನು ಒಳಗೊಂಡಿದೆ. ಪೌರತ್ವ ಮಸೂದೆಯು ತಪ್ಪು ದಿಕ್ಕಿನಲ್ಲಿ ಅಪಾಯಕಾರಿ ತಿರುವಾಗಿದೆ. ಜೊತೆಗೆ ಮಸೂದೆಯು ಅಲ್ಲಿನ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಭಾರತವು ಜಾತ್ಯತೀತ ದೇಶ. ಆದರೆ ಅಲ್ಲಿ ಧರ್ಮದ ಆಧಾರದಲ್ಲಿ ಈಗ ನಾಗರಿಕತ್ವ ನೀಡಲು ಮುಂದಾಗಿರುವುದು ಸಮಾನತೆಯ ನಿಲುವಿಗೆ ವಿರುದ್ಧವಾದುದು. ಇದರಿಂದ ಆಯೋಗ ಚಿಂತೆಗೀಡಾಗಿದೆ. ಹೀಗಾಗಿ ಮಸೂದೆ ಮಂಡಿಸಿರುವ ಅಮಿತ್ ಶಾ ಹಾಗೂ ಇತರ ನಾಯಕತ್ವದ ಮೇಲೆ ಅಮೆರಿಕ ನಿರ್ಬಂಧ ಹೇರಬೇಕು’ ಎಂದು ‘ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ’ ತನ್ನ ಶಿಫಾರಸಿನಲ್ಲಿ ಒತ್ತಾಯಿಸಿದೆ.

ಶಾ ಎದುರಲ್ಲೇ CAB ಪ್ರತಿ ಹರಿದು ವಿವಾದ ಸೃಷ್ಟಿಸಿದ ಒವೈಸಿ!...

ಭಾರತದ ಆಕ್ಷೇಪ: ಅಮೆರಿಕ ಆಯೋಗದ ಶಿಫಾರಸಿಗೆ ಭಾರತದ ವಿದೇಶಾಂಗ ವಕ್ತಾರ ರವೀಶ್ ಕುಮಾರ್ ತಿರುಗೇಟು ನೀಡಿದ್ದಾರೆ. ‘ಆಯೋಗದ ಇತಿಹಾಸ ನೋಡಿದರೆ ಇದೇನೂ ಅಚ್ಚರಿಯ ಶಿಫಾರಸು ಅಲ್ಲ. ಆದರೆ ಪೂರ್ವಾಗ್ರಹಪೀಡಿತವಾಗಿ ಪೌರತ್ವ ಮಸೂದೆ ವಿಚಾರದಲ್ಲಿ ಅಮೆರಿಕ ಆಯೋಗ ನಡೆದುಕೊಂಡಿದೆ. ಇದರಿಂದಾಗಿ ಅದಕ್ಕೆ ಮಸೂದೆಯ ಬಗ್ಗೆ ಅಲ್ಪಜ್ಞಾನವಿದೆ ಎಂಬುದು ಸಾಬೀತಾಗುತ್ತಿದೆ. ಅಲ್ಲದೆ, ಅದರ ಶಿಫಾರಸಿಗೆ ಯಾವುದೇ ಆಧಾರಗಳಿಲ್ಲ’ ಎಂದಿದ್ದಾರೆ. 

‘ಭಾರತದ ಸುತ್ತ ಇರುವ ಕೆಲವು ದೇಶಗಳಲ್ಲಿ ಧಾರ್ಮಿಕ ಉಪದ್ರವಕ್ಕೆ ಒಳಗಾಗಿರುವ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಪೌರತ್ವ ನಿಡುವ ಉದ್ದೇಶವು ಮಸೂದೆಗೆ ಇದೆ. ಇದು ಮಾನವ ಹಕ್ಕುಗಳ ರಕ್ಷಣೆ ಕುರಿತಾದ ಮಸೂದೆ. ಆದರೆ ಇಂಥ ಮಸೂದೆಯನ್ನು ಸ್ವಾಗತಿಸಬೇಕೇ ಹೊರತು ಟೀಕಿಸಬಾರದು. ನಾವು ಧಾರ್ಮಿಕ ಸ್ವಾತಂತ್ರ್ಯಕ್ಕೆ ಬದ್ಧರಾಗಿದ್ದು, ಈ ವಿಧೇಯಕದಿಂದ ಭಾರತದ ಯಾವುದೇ ಧರ್ಮದ ಪೌರರ ಹಕ್ಕುಗಳಿಗೂ ಧಕ್ಕೆಯಾಗುವುದಿಲ್ಲ’ ಎಂದು ರವೀಶ್ ಸ್ಪಷ್ಟಪಡಿಸಿದ್ದಾರೆ.

click me!