ಮಸಿ ಎರಚುವ ಭಯ: ಫೇಸ್‌ ಶೀಲ್ಡ್ ಧರಿಸಿ ಸಮಾರಂಭದಲ್ಲಿ ಭಾಗಿಯಾದ ಮಹಾ ಸಚಿವ

By Kannadaprabha News  |  First Published Dec 19, 2022, 11:02 AM IST

ತಮ್ಮ ಮೇಲೆ ಯಾರಾದರೂ ಮತ್ತೊಮ್ಮೆ ಮುಖಕ್ಕೆ ಮಸಿ ಎರಚಬಹುದೆಂಬ ಭಯದಿಂದ ಮಹಾರಾಷ್ಟ್ರದ ಬೆಳಗಾವಿ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ್‌ ಪಾಟೀಲ್‌ ಮುಖಕ್ಕೆ ರಕ್ಷಣಾ ಕವಚ ಧರಿಸಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.


ಮುಂಬೈ: ತಮ್ಮ ಮೇಲೆ ಯಾರಾದರೂ ಮತ್ತೊಮ್ಮೆ ಮುಖಕ್ಕೆ ಮಸಿ ಎರಚಬಹುದೆಂಬ ಭಯದಿಂದ ಮಹಾರಾಷ್ಟ್ರದ ಬೆಳಗಾವಿ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ್‌ ಪಾಟೀಲ್‌ ಮುಖಕ್ಕೆ ರಕ್ಷಣಾ ಕವಚ ಧರಿಸಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಶನಿವಾರ ಪುಣೆಯ ಪಿಂಪ್ರಿ ಚಿಂಚ್ವಾಡದಲ್ಲಿ ಸಮಾರಂಭವೊಂದರಲ್ಲಿ ಪಾಲ್ಗೊಂಡಾಗ ಅವರು ಫೇಸ್‌ಶೀಲ್ಡ್‌ ಧರಿಸಿ ಗಮನ ಸೆಳೆದರು. ಇತ್ತೀಚೆಗೆ ಅವರು ಅಂಬೇಡ್ಕರ್‌, ಜ್ಯೋತಿಬಾ ಫುಲೆ ಹಾಗೂ ಭಾವೂರಾವ್‌ ಪಾಟೀಲರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದಲಿತ ಕಾರ್ಯಕರ್ತನೊಬ್ಬ ಪಿಂಪ್ರಿಯಲ್ಲೇ ಅವರ ಮುಖಕ್ಕೆ ಮಸಿ ಎರಚಿದ್ದ.

ಗಡಿ ಕ್ಯಾತೆ ಹಿಂದೆ ಕೆಲ ನಾಯಕರು

Tap to resize

Latest Videos

ಮತ್ತೊಂದೆಡೆ ಮಹಾರಾಷ್ಟ್ರದ ಹಲವು ಗ್ರಾಮಗಳು ಕರ್ನಾಟಕ (Karnataka), ಗುಜರಾತ್‌ (Gujarat), ತೆಲಂಗಾಣ (telangana) ಸೇರುತ್ತೇವೆ ಎಂದು ನೀಡುತ್ತಿರುವ ಹೇಳಿಕೆ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆ. ಈ ಷಡ್ಯಂತ್ರ ಮಾಡಿದ್ದರ ಹಿಂದೆ ಕೆಲವು ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಕೈವಾಡವಿದೆ ಎಂದು ಗುಪ್ತಚರ ವರದಿಗಳು ಹೇಳಿವೆ. ಯಾರು ಇದರ ಹಿಂದಿದ್ದಾರೆ ಎಂಬುದನ್ನು ಸೂಕ್ತ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಬಹಿರಂಗಪಡಿಸಲಾಗುವುದು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ (Devendra Fadnavis)ಹೇಳಿದ್ದಾರೆ. ಶಿಂಧೆ ಸರ್ಕಾರ ಬಂದ ನಂತರ ಈ ರೀತಿಯ ಬೇಡಿಕೆ ಬರುತ್ತಿದೆ. ಇದರ ಹಿಂದೆ ಪಕ್ಷಗಳ ನಾಯಕರ ಕುಮ್ಮಕ್ಕಿದ್ದು, ಅವರು ಗಡಿ ಗ್ರಾಮಗಳಿಗೆ ತೆರಳಿ ಅಲ್ಲಿ ಸಭೆ ನಡೆಸಿ ಕುಮ್ಮಕ್ಕು ನೀಡುತ್ತಿದ್ದಾರೆ. ಸಮಯ ಪಕ್ವವಾದಾಗ ಎಲ್ಲ ಮಾಹಿತಿಯನ್ನು ಸದನಕ್ಕೆ ನೀಡುವೆ ಎಂದರು.

ಮಹಾಮೇಳಾವ್‌
ಬೆಳಗಾವಿ ಅಧಿವೇಶನದ ಅವಧಿಯಲ್ಲಿ ಗಡಿಗದ್ದಲ ಎಬ್ಬಿಸುತ್ತಲೇ ಬಂದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(MES) ಈ ಬಾರಿಯೂ ವಿಧಾನಮಂಡಲ ಅಧಿವೇಶನದ ಸಮಯದಲ್ಲಿ ಮತ್ತೆ ಪುಂಡಾಟ ಮೆರೆಯಲು ಮುಂದಾಗಿದೆ. ಪ್ರತಿಬಾರಿಯಂತೆ ಈ ಬಾರಿಯೂ ಬೆಳಗಾವಿ ಅಧಿವೇಶನದ ಮೊದಲ ದಿನ ಮಹಾಮೇಳಾವ್‌ ಸಂಘಟಿಸಿದೆ. ಮಹಾಮೇಳಾವ್‌ ನಡೆಸಲು ಜಿಲ್ಲಾಡಳಿತ ಮತ್ತು ಪಾಲಿಕೆಯಿಂದ ಈವರೆಗೂ ಅನುಮತಿ ಸಿಕ್ಕಿಲ್ಲ. ಆದರೂ ಮೇಳಾವ್‌ಗೆ ಎಲ್ಲಾ ತಯಾರಿ ತಯಾರಿ ನಡೆಸಿದೆ. ಕಳೆದ ಬಾರಿಯಂತೆ ಈ ಬಾರಿಯೂ ನಗರದ ಟಿಳಕವಾಡಿಯ ವ್ಯಾಕ್ಸಿನ್‌ ಡಿಪೋ ಮೈದಾನದಲ್ಲಿ ಮಹಾಮೇಳಾವ್‌ ಸಂಘಟಿಸಲು ಅನುಮತಿ ಕೋರಿ ಈಗಾಗಲೇ ಎಂಇಎಸ್‌ ಮನವಿ ಮಾಡಿದೆ. ಆದರೆ, ಮಹಾಮೇಳಾವ್‌ ಹೆಸರಲ್ಲಿ ಕನ್ನಡ ನೆಲದಲ್ಲಿ ಕನ್ನಡಿಗರ ವಿರುದ್ಧವೇ ವಿಷಕಾರುವ ಎಂಇಎಸ್‌ನ ಬುದ್ಧಿ ಕುರಿತು ಅರಿವಿರುವ ಜಿಲ್ಲಾಡಳಿತ ಈವರೆಗೂ ಅನುಮತಿ ಕೊಟ್ಟಿಲ್ಲ. ಹೀಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ಕೊನೇ ಕ್ಷಣದಲ್ಲಿ ಅನುಮತಿ ಸಿಕ್ಕು, ನಾಮ್‌ ಕೇ ವಾಸ್ತೆ ಎನ್ನುವಂತೆ ವ್ಯಾಕ್ಸಿನ್‌ ಡಿಪೋ ಸಮೀಪದ ರಸ್ತೆಯಲ್ಲಷ್ಟೇ ಮಹಾ ಮೇಳಾವ್‌ ನಡೆಸಲು ಎಂಇಎಸ್‌ ಮುಖಂಡರು ಮುಂದಾಗಿದ್ದಾರೆ.

 ಸಂಸದ ಮಾನೆ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ

ಮಹಾಮೇಳಾವ್‌ಗೆ ಆಹ್ವಾನಿತರಾಗಿರುವ ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ, ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಅವರಿಗೆ ಬೆಳಗಾವಿ ಗಡಿ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಭಾನುವಾರ ಆದೇಶ ಹೊರಡಿಸಿದ್ದಾರೆ. ಸಂಸದ ಮಾನೆ ಮಹಾಮೇಳಾವ್‌ನಲ್ಲಿ ಪಾಲ್ಗೊಂಡು ಪ್ರಚೋದನಾಕಾರಿ ಭಾಷಣ ಮಾಡುವ ಸಾಧ್ಯತೆಗಳಿವೆ. ಇದರಿಂದಾಗಿ ಭಾಷಾ ವೈಷಮ್ಯ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಆರ್‌ಪಿಸಿ 1973 ಕಲಂ 144 (3) ಅನ್ವಯ ಬೆಳಗಾವಿ ಗಡಿ ಪ್ರವೇಶಿಸದಂತೆ ಮಾನೆ ಅವರಿಗೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.

ಇತ್ತ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿಷಯವನ್ನು ಮುಂದಿಟ್ಟುಕೊಂಡು ಪುಂಡಾಟಿಕೆ ಮೆರೆಯುತ್ತಿರುವ ಮಹಾರಾಷ್ಟ್ರ ಸರ್ಕಾರ ಮತ್ತು ಎಂಇಎಸ್‌ ವಿರುದ್ಧ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಭಾನುವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಬೆಳಗಾವಿಯ ಮಹಾಂತೇಶ ನಗರ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು, ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವಿಸ್‌ ಅವರ ಪ್ರತಿಕೃತಿ ದಹಿಸಿ, ಅವರ ಅಣುಕು ಶವಯಾತ್ರೆ ನಡೆಸಿದರು.

click me!