
ಬೆಂಗಳೂರಿನಿಂದ ಹೊರಡಬೇಕಿದ್ದ ಇಂಡಿಗೋದ ನೂರಾರು ವಿಮಾನಗಳು ರದ್ದಾಗಿದ್ದರಿಂದ ಕಳೆದ ಎರಡು ದಿನಗಳಿಂದ ಪ್ರಯಾಣಿಕರ ಪರಿಸ್ಥಿತಿ ಹೇಳತೀರದಾಗಿದೆ. ಲಗೇಜ್ ಬ್ಯಾಗ್ಗಳು ಚೆಕ್ ಇನ್ ಆದವರ ಸ್ಥಿತಿ ಅಂತೂ ಹೇಳುವುದೇ ಬೇಡ. ಅಗತ್ಯ ಸಾಮಗ್ರಿಗಳನ್ನೆಲ್ಲಾ ಆ ಬ್ಯಾಗೇಜ್ನಲ್ಲಿ ಕಳುಹಿಸಿರುವ ಪ್ರಯಾಣಿಕರ ಸ್ಥಿತಿ ಅಕ್ಷರಶಃ ನರಕವಾಗಿದೆ. ಮೂರ್ನಾಲ್ಕು ಗಂಟೆಗಳಿಗೊಮ್ಮೆ ಮಾತ್ರೆ ತೆಗೆದುಕೊಳ್ಳಬೇಕಿದ್ದ ರೋಗಿಗಳು ಕಣ್ಣೀರಿಟ್ಟರೂ ಅಲ್ಲಿ ಅವರ ಸಹಾಯ ಮಾಡುವಂಥ ಪರಿಸ್ಥಿತಿಯೂ ಇಲ್ಲ. ಏಕಾಏಕಿ ಪ್ರಯಾಣಿಕರ ನೂಕು ನುಗ್ಗಲು ಆಗಿರುವ ಕಾರಣ, ಅಲ್ಲಿಯ ಸಿಬ್ಬಂದಿ ಕೂಡ ಯಾರ ಅಹವಾಲು ಸ್ವೀಕರಿಸುವುದು ಎಂದು ತಿಳಿಯದೇ ಪೇಚಿಗೆ ಸಿಲುಕಿದ್ದಾರೆ.
ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿನ ದೃಶ್ಯವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಅಪ್ಪನೊಬ್ಬ ತನ್ನ ಮಗಳಿಗೆ ರಕ್ತ ಸೋರುತ್ತಿದ್ದು, ಸ್ಯಾನಿಟರಿ ನ್ಯಾಪ್‌ಕಿನ್ ಕೊಡಿ ಎಂದು ಅಂಗಲಾಚುತ್ತಿರುವ ಹೃದಯ ವಿದ್ರಾವಕ ದೃಶ್ಯವನ್ನು ನೋಡಬಹುದಾಗಿದೆ. ಬಹುಶಃ ಇವರು ತಂದಿದ್ದ ನ್ಯಾಪ್ಕಿನ್ಗಳು ಬ್ಯಾಗೇಜ್ನಲ್ಲಿ ಹೋಗಿವೆಯೋ ಗೊತ್ತಿಲ್ಲ, ಒಟ್ಟಿನಲ್ಲಿ ಇವರ ಬಳಿ ನ್ಯಾಪ್‌ಕಿನ್ ಇರಲಿಲ್ಲ, ಮಗಳಿಗೆ ಮುಟ್ಟು ಉಂಟಾಗಿ ರಕ್ತಸ್ರಾವ ಆಗುತ್ತಿದ್ದು, ಏನು ಮಾಡಬೇಕು ಎಂದು ತಿಳಿಯದೇ ಈ ಅಪ್ಪ ಕಣ್ಣೀರು ಹಾಕುತ್ತಿರುವುದನ್ನು ನೋಡಬಹುದಾಗಿದೆ. ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿದ ಜನರ ನಡುವೆ ನುಗ್ಗಿ ಬಂದಿರುವ ಈ ಅಪ್ಪ, ಅಲ್ಲಿ ಇದ್ದವರ ಬಳಿ ನ್ಯಾಪಕಿನ್ಗೆ ಅಂಗಲಾಚುತ್ತಿದ್ದಾರೆ. ಅಲ್ಲಿಯ ಮಹಿಳಾ ಸಿಬ್ಬಂದಿ ಅಂಥ ವ್ಯವಸ್ಥೆ ಇಲ್ಲಿ ಇಲ್ಲ ಎಂದು ಹೇಳುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಇನ್ನು ಕೆಲವರು ಔಷಧ ಇಲ್ಲದೇ ಪರದಾಡುತ್ತಿದ್ದರೆ, ಮತ್ತೋರ್ವ ಮಹಿಳೆ ಗಂಡನ ಅಸ್ತಿ ವಿಸರ್ಜನೆ ಮಾಡಲಾಗದೇ ಸಂಕಟ ಪಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ನೀರಿನ ಫಿಲ್ಟರ್ಗಳಲ್ಲಿ ನೀರು ಖಾಲಿಯಾಗಿ ಗುಟುಕು ನೀರು ಸಿಗದೇ ಹಲವರು ಪರದಾಡುತ್ತಿದ್ದರೆ, ಅಲ್ಲಿ ಹಲವು ಗಂಟೆಗಳವರೆಗೆ ಹಸಿವಿನಿಂದ ಕೆಲವರು ನರಳುತ್ತಿದ್ದನ್ನು ನೋಡಬಹುದಾಗಿದೆ. ವಿಮಾನ ನಿಲ್ದಾಣದ ಅಂಗಡಿಗಳಲ್ಲಿ ಇದ್ದ ಆಹಾರವೆಲ್ಲಾ ಖಾಲಿಯಾಗಿರುವುದಾಗಿ ಪ್ರಯಾಣಿಕರು ಹೇಳುತ್ತಿದ್ದರು. ಒಟ್ಟಿನಲ್ಲಿ, ವಿಮಾನಗಳ ರದ್ದತಿಯಿಂದ ಪ್ರಯಾಣಿಕರ ಗೋಳಾಟ ಮುಂದುವರೆದೇ ಇದೆ.
ಅದೇ ಇನ್ನೊಂದೆಡೆ, ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿ ಸಾವಿರಾರು ಪ್ರಯಾಣಿಕರು ಪರದಾಡುತ್ತಿರುವ ನಡುವೆಯೇ, ರದ್ದಾದ ವಿಮಾನಗಳ ಟಿಕೆಟ್ ಮೊತ್ತವನ್ನು ಭಾನುವಾರ ಸಂಜೆಯೊಳಗೆ ಗ್ರಾಹಕರಿಗೆ ಮರುಪಾವತಿ ಮಾಡಬೇಕು ಮತ್ತು ಮುಂದಿನ 2 ದಿನಗಳಲ್ಲಿ ಅವರವರ ಬ್ಯಾಗ್‌ಗಳನ್ನು ಸುರಕ್ಷಿತವಾಗಿ ತಲುಪಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ ಇಂಡಿಗೋ ಏರ್‌ಲೈನ್ಸ್‌ಗೆ ನಿರ್ದೇಶಿಸಿದೆ. ಪೈಲಟ್‌ಗಳ ಕೊರತೆಯಿಂದ ಶನಿವಾರವೂ 400ಕ್ಕೂ ಅಧಿಕ ವಿಮಾನಗಳ ಸಂಚಾರ ರದ್ದಾಯಿತು. ಈ ಹಿನ್ನೆಲೆ ಸೂಚನೆ ನೀಡಿರುವ ಸಚಿವಾಲಯ, ‘ರದ್ದಾದ ಅಥವಾ ವಿಳಂಬವಾದ ವಿಮಾನಗಳ ಟಿಕೆಟ್ ಮೊತ್ತ ಮರುಪಾವತಿ ಪ್ರಕ್ರಿಯೆಯನ್ನು ಭಾನುವಾರ ರಾತ್ರಿ 8 ಗಂಟೆಯೊಳಗೆ ಪೂರ್ಣಗೊಳಿಸಬೇಕು. ಮರು ಟಿಕೆಟ್ ಬುಕಿಂಗ್ ಮಾಡುವಾಗ ಯಾವುದೇ ಶುಲ್ಕ ವಿಧಿಸಬಾರದು. ಮುಂದಿನ 48 ಗಂಟೆಗಳಲ್ಲಿ ಪ್ರಯಾಣಿಕರ ಬ್ಯಾಗ್‌ಗಳನ್ನು ಅವರಿಗೆ ತಲುಪಿಸಬೇಕು. ಪ್ರಯಾಣಿಕರ ಸಹಾಯಕ್ಕಾಗಿಯೇ ತಂಡವೊಂದನ್ನು ರಚಿಸಬೇಕು. ಅವರು ಪ್ರಯಾಣಿಕರಿಗೆ ಮರುಪಾವತಿ, ಪರ್ಯಾಯ ಪ್ರಯಾಣ ವ್ಯವಸ್ಥೆ ಇತ್ಯಾದಿ ಅಗತ್ಯ ನೆರವು ಕಲ್ಪಿಸಬೇಕು’ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ