ಜ್ವರ ಇದ್ದರೂ ಕೊರೋನಾ ಟೆಸ್ಟ್‌ಗೆ ಒಳಗಾಗಲು ನಕಾರ| ಕೊರೋನಾದಿಂದ ಹೋರಾಟ ದುರ್ಬಲ ಭೀತಿ
ನವದೆಹಲಿ(ಡಿ.13): ರೈತರು ಧರಣಿ ನಡೆಸುತ್ತಿರುವ ದೆಹಲಿಯ ಗಡಿ ಭಾಗಗಳು ಕೋವಿಡ್ ಹರಡುವ ಕೇಂದ್ರಗಳಾಗುವ ಸಾಧ್ಯತೆಗಳಿವೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ ಬೆನ್ನಲ್ಲೇ, ಪ್ರತಿಭಟನಾನಿರತ ರೈತರು ಕೊರೋನಾ ಟೆಸ್ಟ್‌ಗೆ ಒಳಗಾಗಲು ಹಿಂಜರಿಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೋನಿಪತ್ ಜಿಲ್ಲಾ ವೈದ್ಯಕೀಯ ತಂಡ ಸಿಂಘೂ ಗಡಿಯಲ್ಲಿ ಹೋರಾಟ ನಿರತ ಅನ್ನದಾತರ ಸೇವೆಯಲ್ಲಿ ನಿರತವಾಗಿದ್ದು, ರೈತರು ಕಫ, ಜ್ವರ, ಶೀತ, ಕೆಮ್ಮು ಮುಂತಾದವುಗಳಿಗೆ ಔಷಧ ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೋವಿಡ್ ಪರೀಕ್ಷೆಗೆ ಹಿಂಜರಿಯುತ್ತಿದ್ದಾರೆ. ಒಂದು ವೇಳೆ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ, ಐಸೊಲೇಶನ್‌ಗೆ ಒಳಗಾಗಬೇಕು. ಹೀಗಾದಲ್ಲಿ ಹೋರಾಟ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ರೈತರು ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೊನ್ನೆಯಷ್ಟೆಸಿಂಘೂ ಗಡಿಯಲ್ಲಿ ಕರ್ತವ್ಯನಿರತ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಕೊರೋನಾಗೆ ತುತ್ತಾಗಿದ್ದರು.
ಅಲ್ಲದೇ ಯಾವುದೇ ವೈರಸ್ ಕೂಡ ನಮ್ಮನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂದು ರೈತರು ಗುಡುಗಿದ್ದಾರೆ.