ಹರ್ಯಾಣ ಸಿಎಂ ಖಟ್ಟರ್‌ ಕೃಷಿ ಕಾರ್ಯಕ್ರಮ ರೈತರಿಂದ ಧ್ವಂಸ, ಕಾರ್ಯಕ್ರಮ ರದ್ದು!

By Kannadaprabha NewsFirst Published Jan 11, 2021, 7:55 AM IST
Highlights

ಹರಾರ‍ಯಣ ಸಿಎಂ ಖಟ್ಟರ್‌ ಕೃಷಿ ಕಾರ್ಯಕ್ರಮ ರೈತರಿಂದ ಧ್ವಂಸ!| ಸಿಎಂ ಬರುವ ಮುನ್ನವೇ ರೈತರಿಂದ ದಾಂಧಲೆ| ಹೆಲಿಪ್ಯಾಡ್‌ ವಶ| ಸಿಎಂ ಕಾರ‍್ಯಕ್ರಮವೇ ರದ್ದು

ಚಂಡೀಗಢ(ಜ.11): ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ದೆಹಲಿಯಲ್ಲಿ ಹರಾರ‍ಯಣ, ಪಂಜಾಬ್‌ ರೈತರು ಒಂದೂವರೆ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವಾಗಲೇ, ಕಾಯ್ದೆಯಿಂದ ಆಗುವ ಲಾಭಗಳನ್ನು ವಿವರಿಸಲು ಹರಾರ‍ಯಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಅವರು ಆಯೋಜಿಸಿದ್ದ ಕಾರ್ಯಕ್ರಮ ರಾದ್ಧಾಂತದಲ್ಲಿ ಅಂತ್ಯವಾಗಿದೆ.

ಮುಖ್ಯಮಂತ್ರಿಗಳು ಆಗಮಿಸುವ ಮೊದಲೇ ಸ್ಥಳಕ್ಕೆ ಬಂದ ಕಾಯ್ದೆ ವಿರೋಧಿ ಹೋರಾಟಗಾರರು ಕಾರ್ಯಕ್ರಮ ಸ್ಥಳವನ್ನು ಸಂಪೂರ್ಣ ಧ್ವಂಸಗೊಳಿಸಿದ್ದಾರೆ. ಖಟ್ಟರ್‌ ಅವರ ಹೆಲಿಕಾಪ್ಟರ್‌ ಇಳಿಯಬೇಕಿದ್ದ ಸ್ಥಳವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಈ ಕಾರ್ಯಕ್ರಮ ರದ್ದುಗೊಳ್ಳುವಂತಾಗಿದೆ.

ಉದ್ರಿಕ್ತ ರೈತರನ್ನು ತಡೆಯಲು ಪೊಲೀಸರು ಜಲ ಫಿರಂಗಿ ಹಾಗೂ ಅಶ್ರುವಾಯು ಸಿಡಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಕಾರ್ಯಕ್ರಮಕ್ಕೆಂದು ಸಿದ್ಧಪಡಿಸಲಾಗಿದ್ದ ವೇದಿಕೆಗೆ ಹಾನಿ ಮಾಡಿದ ರೈತರು, ಕುರ್ಚಿ, ಟೇಬಲ್‌ ಹಾಗೂ ಹೂಕುಂದಗಳನ್ನು ಒಡೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಆಗಿದ್ದಿಷ್ಟು:

ಕೇಂದ್ರದ ಮೂರು ಕೃಷಿ ಕಾಯ್ದೆಗಳಿಂದ ಆಗುವ ಪ್ರಯೋಜನಗಳನ್ನು ವಿವರಿಸಲು ಮನೋಹರ ಲಾಲ್‌ ಖಟ್ಟರ್‌ ಅವರು ಕರ್ನಾಲ್‌ ಜಿಲ್ಲೆಯ ಕೈಮ್ಲಾ ಗ್ರಾಮದಲ್ಲಿ ‘ಕಿಸಾನ್‌ ಮಹಾಪಂಚಾಯತ್‌’ ಆಯೋಜಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ರೈತರು ಆಗಮಿಸಿದರು. ಗ್ರಾಮದತ್ತ ಬರುತ್ತಿದ್ದ ರೈತರನ್ನು ಜಲಫಿರಂಗಿ, ಅಶ್ರುವಾಯು ಸಿಡಿಸಿ ನಿರ್ಬಂಧಿಸುವ ಪೊಲೀಸರ ಪ್ರಯತ್ನ ವಿಫಲವಾಯಿತು. ಪೊಲೀಸರ ಕೋಟೆಯನ್ನು ಭೇದಿಸಿದ ರೈತರು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನುಗ್ಗಿದರು. ಮುಖ್ಯಮಂತ್ರಿಗಳ ಹೆಲಿಕಾಪ್ಟರ್‌ ಇಳಿಯಬೇಕಿದ್ದ ಹೆಲಿಪ್ಯಾಡ್‌ ಅನ್ನು ವಶಕ್ಕೆ ತೆಗೆದುಕೊಂಡರು. ಹೀಗಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಸಿಎಂ ಅವರು ಕಾರ್ಯಕ್ರಮಕ್ಕೆ ಬರಲೇ ಇಲ್ಲ.

ಈ ನಡುವೆ ರೈತರ ಮೇಲೆ ಜಲಫಿರಂಗಿ ಹಾಗೂ ಅಶ್ರುವಾಯು ಸಿಡಿಸಿದ್ದಕ್ಕೆ ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಖಟ್ಟರ್‌ ವಿರುದ್ಧ ಹರಿಹಾಯ್ದಿದ್ದಾರೆ.

click me!