
ಬೆಂಗಳೂರು(ಜ.11): ಕೋವಿಡ್-19 ಲಸಿಕೆ ಹಂಚಿಕೆಗೆ ಜ.16ರ ಮುಹೂರ್ತ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸೋಮವಾರ ಸಿದ್ಧತಾ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗಿಯಾಗಲಿದ್ದಾರೆ.
"
ಸೋಮವಾರ ಸಂಜೆ 4 ಗಂಟೆಗೆ ವಿಡಿಯೋ ಸಂವಾದದ ಮೂಲಕ ಈ ಸಭೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಕೋವಿಡ್ ಲಸಿಕೆ ವಿತರಣೆಯ ಬಗ್ಗೆ ಕೈಗೊಂಡಿರುವ ಕ್ರಮಗಳು, ಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿಗಳು ಪ್ರಧಾನಿ ಅವರಿಗೆ ವಿವರಿಸುವ ಸಾಧ್ಯತೆ ಇದೆ. ಹಾಗೆಯೇ ಮೋದಿ ಅವರು ಈ ಅಭಿಯಾನವನ್ನು ಯಶಸ್ವಿಗೊಳಿಸಲು ಅಗತ್ಯ ಸಲಹೆ ಸೂಚನೆಗಳನ್ನು ರಾಜ್ಯಗಳಿಗೆ ನೀಡುವ ನಿರೀಕ್ಷೆಯಿದೆ.
ಭಾರತದಲ್ಲಿ ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ನ ‘ಆಕ್ಸ್‌ಫರ್ಡ್ ಕೋವಿಶೀಲ್ಡ್’ ಲಸಿಕೆ ಹಾಗೂ ಹೈದರಾಬಾದ್ ಭಾರತ್ ಬಯೋಟೆಕ್‌ನ ‘ಕೋವ್ಯಾಕ್ಸಿನ್’ ಲಸಿಕೆಗಳು ತುರ್ತು ಬಳಕೆಗಾಗಿ ಅನುಮೋದನೆ ಪಡೆದಿವೆ. ಮೊದಲ ಹಂತದಲ್ಲಿ ಕೊರೋನಾ ವಿರುದ್ಧ ಹೋರಾಡಿರುವ 3 ಕೋಟಿ ವೈದ್ಯಕೀಯ ಸಿಬ್ಬಂದಿ, ಇತರ ಮುಂಚೂಣಿ ಸಿಬ್ಬಂದಿಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿದೆ.
ಕೊರೋನಾ ನಿಯಂತ್ರಣದ ಬಗ್ಗೆ ಈಗಾಗಲೇ ಹಲವು ಸುತ್ತಿನಲ್ಲಿ ಸಿಎಂಗಳ ಜೊತೆ ಮೋದಿ ಸಭೆ ನಡೆಸಿದ್ದರು. ಈ ಹಿಂದಿನದ್ದೆಲ್ಲಾ ಲಸಿಕೆಗೆ ಅನುಮತಿ ನೀಡುವ ಮುನ್ನಾ ನಡೆದ ಸಭೆಗಳು. ಆದರೆ ಈಗಿನದ್ದು 2 ಲಸಿಕೆಯ ತುರ್ತು ಬಳಕೆಗೆ ಅನುಮತಿ ಸಿಕ್ಕ ಬಳಿಕದ ಮೊದಲ ಸಭೆ. ಹೀಗಾಗಿಯೇ ಈ ಸಭೆ ಮಹತ್ವದ್ದಾಗಿದೆ.
ಕೋ ವಿನ್ ಆ್ಯಪ್ ಪರಾಮರ್ಶೆ:
ಈ ನಡುವೆ ಕೇಂದ್ರ ಆರೋಗ್ಯ ಸಚಿವಾಲಯವು ಭಾನುವಾರ ವಿವಿಧ ರಾಜ್ಯಗಳ ಆರೋಗ್ಯ ಅಧಿಕಾರಿಗಳ ಜತೆ ಚರ್ಚೆ ನಡೆಸಿತು. ಲಸಿಕೆ ಪಡೆಯುವವರು ಹೆಸರು ನೋಂದಾಯಿಸಿಕೊಳ್ಳಬೇಕಾದ ಕೋ-ವಿನ್ ಆ್ಯಪ್ ಕುರಿತು ಇತ್ತೀಚಿನ ಡ್ರೈ-ರನ್‌ನಲ್ಲಿ ವ್ಯಕ್ತವಾದ ಪ್ರತಿಕ್ರಿಯೆನ್ನು ಸಭೆಯಲ್ಲಿ ಆಲಿಸಲಾಯಿತು.
ಕೋ-ವಿನ್ ಆ್ಯಪ್/ವೆಬ್‌ಗೆ ಫಲಾನುಭವಿಯ ಆಧಾರ್ ಸಂಖ್ಯೆ ಸಂಯೋಜಿಸುವ ಬಗ್ಗೆ ಚರ್ಚಿಸಲಾಯಿತು. ಈ ಮೂಲಕ ಒಬ್ಬನೇ ವ್ಯಕ್ತಿ ಎರಡೆರಡು ಬಾರಿ ಲಸಿಕೆ ಪಡೆಯುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. ‘ಕೊರೋನಾ ಲಸಿಕೆ ಪಡೆಯಲು ಈ ವೆಬ್/ಆ್ಯಪ್ ವೇದಿಕೆ ಆಗಲಿದ್ದು, ನೋಂದಣಿ ಮಾಡಿಸಿಕೊಂಡವರಿಗೆ ಯಾವುದೇ ಸಮಯ ಹಾಗೂ ಸ್ಥಳದಲ್ಲಿ ಲಸಿಕೆ ಲಭ್ಯವಿರಲಿದೆ’ ಎಂದು ಆರೋಗ್ಯ ಸಚಿವಾಲಯ ಹೇಳಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ