
ನವದೆಹಲಿ(ಡಿ.31): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನು ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಕಿಚ್ಚು ದಿನೇ ದಿನೇ ಹೆಚ್ಚುತ್ತಿದೆ. ಒಂದೆಡೆ ಈ ರೈತರ ಪರವಾದ ಧ್ವನಿ ಕೇಳುತ್ತಿದ್ದರೆ, ಇನ್ನು ಕೆಲವರು ಇವರು ನಿಜವಾದ ರೈತರಲ್ಲ, ಖಲಿಸ್ತಾನಿಗಳು, ನಕ್ಸಲರು ಎಂದು ಹಣಿಯುತ್ತಿದ್ದಾರೆ. ಹೀಗಿರುವಾಗಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂತಹ ಹೇಳಿಕೆಗಳನ್ನು ಖಂಡಿಸಿದ್ದು, ರೈತರು ಎಂದರೆ ಅನ್ನ ನೀಡುವವರು. ಅವರಿಗೆ ಎಲ್ಲರಿಗಿಂತ ಹೆಚ್ಚು ಗೌರವ ಸಲ್ಲಬೇಕು. ಹೀಗಿರುವಾಗ ರೈತರನ್ನು ನಕ್ಸಲ್ ಹಾಗೂ ಖಲಿಸ್ತಾನಿಗಳೆಂದು ಕರೆಯುವುದು ವಿಷಾದನೀಯ ಎಂದಿದ್ದಾರೆ.
ಕೃಷಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ರೈತ ಪ್ರತಿಭಟನೆ ಸಂದರ್ಭದಲ್ಲಿ ಸುದ್ದಿಸಂಸ್ಥೆ ಎಎನ್‌ಐ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಕೆಲ ಶಕ್ತಿಗಳು ರೈತರ ನಡುವೆ ತಪ್ಪು ಮಾಹಿತಿ ಹಬ್ಬಿಸಿದ್ದಾರೆ. ನಾವು ಅನೇಕ ರೈತರೊಂದಿಗೆ ಮಾತನಾಡಿದ್ದೇವೆ. ಹೀಗಾಗಿ ರೈತರ ಬಳಿ ವಿಭಾಗವಾರು ಚರ್ಚೆ ನಡೆಸಿ ಹೌದು ಅಥವಾ ಇಲ್ಲ ಎಂಬ ಉತ್ತರವನ್ನಷ್ಟೇ ಪಡೆಯಬೇಕು ಎಂದಿದ್ದಾರೆ.
ಪಿಎಂ ವಿರುದ್ಧ ಅವಹೇಳನ ಸರಿಯಲ್ಲ
ಅಲ್ಲದೇ ಪ್ರಧಾನಿ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಬಾರದು. ಪ್ರಧಾನ ಮಂತ್ರಿ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರೊಂದು ಸಂಸ್ಥೆ ಇದ್ದಂತೆ. ನಾನು ಯಾವತ್ತೂ ಈ ಹಿಂದಿನ ಪ್ರಧಾನ ಮಂತ್ರಿಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿಲ್ಲ ಎಂದೂ ರಾಜನಾಥ್ ಸಿಂಗ್ ಹೇಳಿದ್ದಾರೆ.
ಯಾವುದೇ ದೇಶಗಳಿಗೂ ಮಾತನಾಡುವ ಹಕ್ಕಿಲ್ಲ
ಇದೇ ವೇಳೆ ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಕುರಿತು ಕೆನಡಾ ಸೇರಿದಂತೆ ಇತರ ರಾಷ್ಟ್ರಗಳು ನೀಡಿದ ಪ್ರತಿಕ್ರಿಯೆ ವಿಚಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ ಕೇಂದ್ರ ಸಚಿವ ಸಿಂಗ್ 'ಭಾರತದ ಆಂತರಿಕ ವಿಚಾರವಾಗಿ ಬೇರೆ ದೇಶದ ಪಿಎಂಗಳು ಯಾವುದೇ ಬಗೆಯ ಹೇಳಿಕೆ ನೀಡುವುದು ಸರಿಯಲ್ಲ. ತನ್ನ ಆಂತರಿಕ ವಿಚಾರದಲ್ಲಿ ಇತರ ದೇಶ ಹಸ್ತಕ್ಷೇಪ ಮಾಡುವ ಅವಶ್ಯಕತೆ ಇಲ್ಲ. ಈ ಅಧಿಕಾರ ಕೂಡಾ ಅವರಿಗಿಲ್ಲ ಎಂದು ನುಡಿದಿದ್ದಾರೆ.
ರಾಹುಲ್ ಗಾಂಧಿ ನನಗಿಂತ ಕಿರಿಯರು ಹಾಗೂ ಅವರಿಗಿಂತ ನನಗೆ ಹೆಚ್ಚು ಕೃಷಿ ಬಗ್ಗೆ ತಿಳಿದಿದೆ
ಇನ್ನು ರೈತ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ತೊಡಗಿಸಿಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿದ ರಕ್ಷಣಾ ಸಚಿವರು 'ರಾಹುಲ್ ಗಾಂಧಿ ನನಗಿಂತ ಕಿರಿಯರು ಹಾಗೂ ಅವರಿಗಿಂತ ನನಗೆ ಹೆಚ್ಚು ಕೃಷಿ ಬಗ್ಗೆ ತಿಳಿದಿದೆ. ಯಾಕೆಂದರೆ ನಾನು ರೈತ ಮಹಿಳೆಯ ಮಡಿಲಲ್ಲಿ ಜನಿಸಿದವನು. ಹೀಗಾಗಿ ನಾವು ರೈತ ವಿರೋಧಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ