ಕೃಷಿ ಕಾಯ್ದೆಯಿಂದ ರೈತರ ಆದಾಯ ಡಬಲ್‌: ಕಾಯ್ದೆ ಪರ ಅಮಿತ್‌ ಬ್ಯಾಟಿಂಗ್!

By Kannadaprabha NewsFirst Published Jan 18, 2021, 7:55 AM IST
Highlights

ಕೃಷಿ ಕಾಯ್ದೆಯಿಂದ ರೈತರ ಆದಾಯ ಡಬಲ್‌| ಮೋದಿ ಸರ್ಕಾರ ರೈತರ ಸರ್ಕಾರ| ಕೃಷಿ ಕಾಯ್ದೆ ಪರ ಅಮಿತ್‌ ಶಾ ಪ್ರಬಲ ಸಮರ್ಥನೆ| ಹೆಚ್ಚಿನ ಲಾಭಕ್ಕೆ ಅಡ್ಡಿ ಇಲ್ಲದೆ ಬೆಳೆ ಮಾರಬಹುದು| ರೈತರಿಗೆ ಕೇಂದ್ರ ಪ್ರಥಮ ಆದ್ಯತೆ

ಬಾಗಲಕೋಟೆ(ಜ.18): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಅತ್ಯಂತ ಪ್ರಬಲವಾಗಿ ಸಮರ್ಥಿಸಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಕರ್ನಾಟಕ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಗ್ರಾಮ ಬಳಿಯ ಸಾಯಿಪ್ರಿಯ ಶುಗರ್ಸ್‌ ಲಿ. ಯೂನಿಟ್‌ ಆವರಣದಲ್ಲಿ ಎಂಆರ್‌ಎನ್‌(ನಿರಾಣಿ) ಉದ್ಯಮ ಸಮೂಹ ಸಂಸ್ಥೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ನೂತನ ಕಾರ್ಖಾನೆಗಳ ಉದ್ಘಾಟನೆ, ಎಥನಾಲ್‌ ಘಟಕಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಸಮರ್ಪಿತವಾಗಿರುವ ಸರ್ಕಾರ ಎಂದರು. ಕೃಷಿ ಕಾಯ್ದೆಗಳಿಂದಾಗಿ ರೈತರು ಇದೀಗ ತಮ್ಮ ಬೆಳೆಯನ್ನು ಹೆಚ್ಚಿನ ಲಾಭಕ್ಕೆ ಯಾವುದೇ ಅಡ್ಡಿಯಿಲ್ಲದೆ ಮಾರಾಟ ಮಾಡುವಂತಾಗಿದ್ದು ಪ್ರಧಾನಿ ಮೋದಿ ಸರ್ಕಾರ ಆತ್ಮನಿರ್ಭರ ಭಾರತ ನಿರ್ಮಾಣ ಮಾಡುವಲ್ಲಿ ದಿಟ್ಟಹೆಜ್ಜೆಯನ್ನಿಟ್ಟಿದೆ ಎಂದು ಹೇಳಿದರು.

ಹಿಂದಿನ ಸರ್ಕಾರಗಳು ಕೃಷಿಗೆ ಬಜೆಟ್‌ನಲ್ಲಿ ಕೇವಲ .21 ಸಾವಿರ ಕೋಟಿ ನೀಡುತ್ತಿದ್ದವು. ಅದನ್ನು ನಮ್ಮ ಸರ್ಕಾರ 2020ರಲ್ಲಿ .1.34 ಲಕ್ಷ ಕೋಟಿಗಳಿಗೆ ಹೆಚ್ಚಿಸಿದ್ದಲ್ಲದೆ, ಕಿಸಾನ್‌ ಸಮ್ಮಾನ್‌ ಯೋಜನೆ ಮೂಲಕ 9 ಕೋಟಿಗೂ ಹೆಚ್ಚು ರೈತರ ಬ್ಯಾಂಕ್‌ ಖಾತೆಗಳಿಗೆ .1.13 ಲಕ್ಷ ಕೋಟಿಗಳನ್ನು ಜಮಾ ಮಾಡುವ ಮೂಲಕ ರೈತರಿಗೆ ಪ್ರಥಮ ಆದ್ಯತೆ ನೀಡುತ್ತಿದೆ ಎಂದರು.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 50 ಲಕ್ಷ ಹೆಕ್ಟೇರ್‌ ಭೂಮಿಗೆ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸಿದೆ. ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ 5 ವರ್ಷ ಪೂರ್ಣಗೊಳಿಸಿದ್ದು, .90 ಸಾವಿರ ಕೋಟಿ ವಿಮೆ ಈ ಯೋಜನೆಯಡಿ ರೈತರಿಗೆ ಪಾವತಿಯಾಗಿದೆ. ಎಪಿಎಂಸಿಗಳಲ್ಲಿ ಆನ್‌ಲೈನ್‌ ವ್ಯವಹಾರ ಒದಗಿಸುವ ಮೂಲಕ ರೈತರಿಗೆ ಲಾಭದಾಯಕವಾಗುವಂತೆ ಮಾಡಲಾಗಿದೆ. ಹಿಂದಿನ ಸರ್ಕಾರ ರೈತರಿಗೆ .6 ಲಕ್ಷ ಕೋಟಿ ಸಾಲ ನೀಡುತ್ತಿತ್ತು. ನಮ್ಮ ಸರ್ಕಾರ .13.22 ಲಕ್ಷ ಕೋಟಿಯನ್ನು ರೈತರಿಗೆ ಸಾಲ ನೀಡುವ ಮೂಲಕ ನೆರವಾಗಿದೆ. 10 ಸಾವಿರಕ್ಕೂ ಹೆಚ್ಚು ರೈತ ಉತ್ಪಾದಕ ಸಂಘಗಳನ್ನು ಸ್ಥಾಪಿಸಲಾಗಿದ್ದು, .7 ಸಾವಿರ ಕೋಟಿಯನ್ನು ಸರ್ಕಾರ ಇದಕ್ಕಾಗಿ ನೀಡಿದೆ. 1.6 ಕೋಟಿ ರೈತರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ನೀಡಲಾಗಿದೆ ಎಂದರು.

ಇದೇವೇಳೆ ಕರ್ನಾಟಕ ರಾಜ್ಯ ಸರ್ಕಾರ ರೈತರ ಪರವಾಗಿದ್ದು, ರೈತ ಪರವಾದ ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತವನ್ನು ಪ್ರಶಂಸಿಸಿದರು.

2025ಕ್ಕೆ ಪೆಟ್ರೋಲ್‌ ಬಳಕೆ 25% ಕಡಿತ

ಪೆಟ್ರೋಲ್‌ ಹಾಗೂ ಡೀಸೆಲ್‌ ಬಳಕೆಯನ್ನು 2022ರೊಳಗೆ ಶೇ.10ರಷ್ಟುಹಾಗೂ 2025ರ ವೇಳೆಗೆ ಶೇ.25ರಷ್ಟುಕಡಿತಗೊಳಿಸಲಾಗುವುದು. ಪೆಟ್ರೋಲ್‌ಗೆ ಪರ್ಯಾಯವಾಗಿ ಕಬ್ಬು ಬೆಳೆಯ ಸಹ ಉತ್ಪನ್ನವಾಗಿರುವ ಎಥನಾಲ್‌ ಬಳಸುವ ಮೂಲಕ ದೇಶದ ಅಗತ್ಯತೆ ಪೂರೈಸುವುದರೊಂದಿಗೆ ರೈತರಿಗೂ ಆರ್ಥಿಕ ಲಾಭ ಒದಗಿಸಲಾಗುವುದು ಎಂದು ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

ದೇಶದಲ್ಲಿ ಪೆಟ್ರೋಲ್‌ ಆಮದಿಗಾಗಿ ಸರ್ಕಾರದ ಬಹಳಷ್ಟುಆದಾಯ ವಿದೇಶಿ ವಿನಿಮಯಕ್ಕೆ ಖರ್ಚಾಗುತ್ತಿದೆ. ಇದೀಗ ಪ್ರಮಾಣ ಕಡಿತದಿಂದ ಉಳಿಯುವ ಹಣವನ್ನು ನಾವು ರೈತರ ಅಭಿವೃದ್ಧಿಗಾಗಿ ಬಳಸಿಕೊಳ್ಳಲು ಸಹಾಯಕವಾಗಲಿದೆ. ಕಬ್ಬಿನೊಂದಿಗೆ ಭಾರತೀಯ ಆಹಾರ ನಿಗಮದಲ್ಲಿ ಲಭ್ಯವಾಗುವ ಮೆಕ್ಕೆಜೋಳ, ಅಕ್ಕಿ ಧಾನ್ಯವನ್ನು ಎಥನಾಲ್‌ ಉತ್ಪಾದನೆಗೆ ಬಳಸಿಕೊಳ್ಳಲು ನೀತಿಯೊಳಗೆ ಸೇರಿಸಿಕೊಳ್ಳಲಾಗಿದೆ. ಈ ನೂತನ ನೀತಿಯಿಂದಾಗಿ ರೈತರಿಗೆ ಆದಾಯದೊಂದಿಗೆ ಉದ್ಯೋಗ ಸೃಷ್ಟಿಗೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತೇಜನ ನೀಡುತ್ತಿದ್ದಾರೆ ಎಂದರು.

click me!