
ನವದೆಹಲಿ (ಜ. 17) ಭಾರತೀಯ ಶಾಸ್ತ್ರೀಯ ಸಂಗೀತ ದಿಗ್ಗಜ ಮತ್ತು ಪದ್ಮವಿಭೂಷಣ ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಭಾನುವಾರ ಮಧ್ಯಾಹ್ನ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಮಧ್ಯಾಹ್ನ 12.37ಕ್ಕೆ ಕೊನೆಯುಸಿರೆಳೆದರು ಎಂದು ಅವರ ಸೊಸೆ ನಮ್ರತಾ ಗುಪ್ತಾ ಖಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ನಾವು ಮನೆಯಲ್ಲಿ 24 ಗಂಟೆಗಳ ಕಾಲ ಅವರ ಮೇಲೆ ನಿಗಾವಹಿಸುತ್ತಿದ್ದೆವು. ಅವರಿಗೆ ಮಸಾಜ್ ಮಾಡುವ ವೇಳೆ ಅವರು ವಾಂತಿ ಮಾಡಿಕೊಂಡರು. ವೈದ್ಯರಿಗೆ ಮಾಹಿತಿ ನೀಡುವ ವೇಳೆಗೆ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದಿದ್ದಾರೆ.
ಆಶಾ ಭೋಂಸ್ಲೆ, ಮನ್ನಾಡೆ, ವಹೀದಾ ರೆಹಮಾನ್, ಗೀತಾ ದತ್, ಎ.ಆರ್ ರೆಹಮಾನ್, ಹರಿಹರನ್, ಶಾನ್, ಸೋನು ನಿಗಮ್, ಸಾಗರಿಕಾ, ಅಲಿಷಾ ಚಿನಯ್, ಶಿಲ್ಪಾ ರಾವ್ ಮುಂತಾದ ದಿಗ್ಗಜರಿಗೆ ಒಂದೆಲ್ಲ ಒಂದು ರೀತಿಯಲ್ಲಿ ಗುರುವಾಗಿ ಇದ್ದಿದ್ದರು.
ಪದ್ಮಭೂಷಣ ಮುಷ್ತಾಕ್ ಹುಸೇನ್ ಖಾನ್ ಅವರ ಪುತ್ರಿ ಅಮಿನಾ ಬೇಗಂ ಅವರನ್ನು ವರಿಸಿದ ಮುಸ್ತಫಾ ಅವರಿಗೆ ನಾಲ್ವರು ಪುತ್ರರು ಮುರ್ತಜಾ, ಮುಸ್ತಫಾ, ಖಾದಿರ್, ರಬ್ಬಾನಿ ಹಾಗೂ ಹಸನ್ ಎಲ್ಲರೂ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.ಮೆದುಳಿನ ಸಮಸ್ಯೆಯಿಂದಲೂ ಖಾನ್ ಬಳಲಿದ್ದು ಚಿಕಿತ್ಸೆ ಪಡೆದುಕೊಂಡಿದ್ದರು.
ಉಸ್ತಾದ್ ಗುಲಾಮ್ ಮುಸ್ತಫಾ ಖಾನ್ ಅಂತಿಮ ವಿಧಿಗಳನ್ನು ಸಂತಕ್ರೂಜ್ ಕಬ್ರಾಸ್ತಾನ್ ನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಹೇಳಿತ್ತು. ಮಾರ್ಚ್ 3, 1931 ರಂದು ಉತ್ತರ ಪ್ರದೇಶದ ಬಾದೌನ್ ನಲ್ಲಿ ಜನಿಸಿದ ಖಾನ್ ನಾಲ್ಕು ಸಹೋದರರು ಮತ್ತು ಮೂವರು ಸಹೋದರಿಯರ ಕುಟುಂಬದಲ್ಲಿ ಹಿರಿಯ ಪುತ್ರನಾಗಿ ಸಂಗೀತ ಸಾಧಕರಾಗಿ ಗುರುತಿಸಿಕೊಂಡಿದ್ದರು.
1991 ರಲ್ಲಿ ಪದ್ಮಶ್ರೀ, ನಂತರ 2006 ರಲ್ಲಿ ಪದ್ಮ ಭೂಷಣ ಮತ್ತು 2018 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು. 2003 ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು. ಗಾಯಕಿ ಲತಾ ಮಂಗೇಶ್ಕರ್ ಮತ್ತು ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಸೇರಿದಂತೆ ಭಾರತೀಯ ಸಂಗೀತ ದಿಗ್ಗಜರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ