
ಭೋಪಾಲ್: ಕರ್ನಾಟಕದ ರಾಜ್ಯಪಾಲರಾಗಿರುವ ಥಾವರ್‌ಚಂದ್ ಗೆಹ್ಲೋಟ್ ಅವರ ಮೊಮ್ಮಗ ದೇವೇಂದ್ರ ಗೆಹ್ಲೋಟ್ ಅವರ ವಿರುದ್ಧ ಅವರ ಪತ್ನಿ ದಿವ್ಯಾ ಗೆಹ್ಲೋಟ್ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಪತಿ ದೇವೇಂದ್ರ ಗೆಹ್ಲೋಟ್ ಅವರು ಮಾದಕ ವ್ಯಸನಿಯಾಗಿದ್ದು, ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ. ತನ್ನ ಕೊಲೆಗೂ ಯತ್ನಿಸಿದ್ದು, ಕೌಟುಂಬಿಕ ಹಿಂಸೆ ನೀಡುತ್ತಿದ್ದಾರೆ, ತನ್ನ ಅಪ್ರಾಪ್ತ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ದಿವ್ಯಾ ಗೆಹ್ಲೋಟ್ ಅವರು ಆರೋಪ ಮಾಡಿದ್ದಾರೆ. ತಮ್ಮ ಕುಟುಂಬದ ಈ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ರತ್ಲಂ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಅವರಿಗೆ ದಿವ್ಯಾ ದೂರು ನೀಡಲಾಗಿದ್ದು, ತುರ್ತು ಕ್ರಮ ಕೈಗೊಳ್ಳುವಂತೆ ದಿಆಗ್ರಹಿಸಿದ್ದಾರೆ.
ತನ್ನ 4 ವರ್ಷದ ಅಪ್ರಾಪ್ತ ಮಗಳನ್ನು ಅಪಹರಿಸಲಾಗಿದ್ದು, ಮಗಳನ್ನು ಉಜ್ಜಯಿನಿ ಜಿಲ್ಲೆಯ ನಾಗ್ಡಾದಲ್ಲಿ ತನ್ನ ಅತ್ತೆ-ಮಾವಂದಿರು ಬಲವಂತವಾಗಿ ಇರಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಹೀಗಾಗಿ ತನ್ನ 4 ವರ್ಷದ ಮಗಳನ್ನು ಸುರಕ್ಷಿತವಾಗಿ ಹಿಂದಿರುಗಿಸುವಂತೆ ಕೋರಿ ಅವರು ಎಸ್‌ಪಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ದಿವ್ಯಾ ಅವರ ದೂರಿನ ಪ್ರಕಾರ ಅವರ ಪತಿ ದೇವೇಂದ್ರ ಗೆಹ್ಲೋಟ್ (33), ಅಲೋಟ್‌ನ ಮಾಜಿ ಶಾಸಕರಾಗಿರುವ ಮಾವ ಜಿತೇಂದ್ರ ಗೆಹ್ಲೋಟ್ (55), ಮೈದುನ ವಿಶಾಲ್ ಗೆಹ್ಲೋಟ್ (25), ಮತ್ತು ಅಜ್ಜಿ ಅನಿತಾ ಗೆಹ್ಲೋಟ್ (60) ಅವರು 50 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ಆಗ್ರಹಿಸಿ ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಮದುವೆಗೂ ಮೊದಲೇ ದೇವೇಂದ್ರ ಗೆಹ್ಲೋಟ್‌ಗೆ ಮದ್ಯಪಾನ, ಮಾದಕ ವ್ಯಸನದ ಚಟಗಳ ಜೊತೆ ಹಲವರ ಜೊತೆ ಪ್ರಣಯ ಸಂಬಂಧವಿತ್ತು. ಇದೆಲ್ಲವನ್ನೂ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು ಮದುವೆ ಮಾಡಿಸಿದರು ಎಂದು ದಿವ್ಯಾ ಗೆಹ್ಲೋಟ್ ಆರೋಪಿಸಿದ್ದಾರೆ.
ದಿವ್ಯಾ ಗೆಹ್ಲೋಟ್ ಹಾಗೂ ದೇವೇಂದ್ರ ಗೆಹ್ಲೋಟ್ ಅವರ ಮದುವೆಯೂ 2018ರ ಏಪ್ರಿಲ್ 29 ರಂದು ಮುಖ್ಯಮಂತ್ರಿಗಳ ಕನ್ಯಾದಾನ ಯೋಜನೆಯಡಿಯಲ್ಲಿ ತಾಲ್‌ನಲ್ಲಿ ನಡೆದಿತ್ತು. ಆಗಿನ ಕೇಂದ್ರ ಸಚಿವೆ ಮತ್ತು ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸೇರಿದಂತೆ ಹಿರಿಯ ನಾಯಕರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ ಮದುವೆಯಾಗಿ ಗಂಡನ ಮನೆಗೆ ಬಂದ ನಂತರವೇ ದಿವ್ಯಾಗೆ ಪತಿ ದೇವೇಂದ್ರನ ಹಲವು ಮುಖಗಳ ಪರಿಚಯ ಆಗಿದೆ. ಆತ ಮದ್ಯ ಹಾಗೂ ಮಾದಕವಸ್ತುಗಳಿಗೆ ದಾಸನಾಗಿದ್ದಲ್ಲದೇ ಹಲವು ಮಹಿಳೆಯರ ಜೊತೆಗೆ ಸಂಬಂಧ ಹೊಂದಿರುವುದು ತಿಳಿಯಿತು. ಆತ ದೈಹಿಕ ಹಿಂಸೆ ಮಾನಸಿಕ ಹಿಂಸೆಯ ಜೊತೆಗೆ ಮದುವೆಯಲ್ಲಿ ಕೊಡುವುದಾಗಿ ಹೇಳಿದ್ದ ವರದಕ್ಷಿಣೆ ಹಣಕ್ಕಾಗಿ ನಿರಂತರ ಪೀಡಿಸುತ್ತಿದ್ದ ಎಂದು ದಿವ್ಯಾ ಆರೋಪಿಸಿದ್ದಾರೆ.
2021 ರಲ್ಲಿ ಗರ್ಭಿಣಿಯಾಗಿದ್ದಾಗ ಕಿರುಕುಳ ಮತ್ತಷ್ಟು ಹೆಚ್ಚಾಯ್ತು, ಆಹಾರ ನೀಡ್ತಿರಲಿಲ್ಲ, ಸರಿಯಾಗಿ ಥಳಿಸಿ ಮಾನಸಿಕ ಹಿಂಸೆ ನೀಡ್ತಿದ್ರು, ಮಗಳ ಜನನದ ನಂತರವೂ ಈ ಹಿಂಸೆ ಮುಂದುವರೆಯಿತು. ಈ ಕೌಟುಂಬಿಕ ಕಿತ್ತಾಟದಿಂದಾಗಿ ರಾಜಿ ಮಾಡಿಕೊಳ್ಳಲು ಪ್ರಯತ್ನ ನಡೆದರೂ ಏನೂ ಬದಲಾಗಲಿಲ್ಲ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು ಎಂದು ದೂರಿದ್ದಾರೆ. ಎಂದಿನಂತೆ ಜನವರಿ 26 ರಂದು ಕೂಡ ತನ್ನ ಪತಿ ಕುಡಿದು ಮನೆಗೆ ಬಂದು ತನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಇಂದು ಹಣ ತರದಿದ್ದರೆ, ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದ, ಇದಾದ ನಂತರ ಆತ ನನ್ನ ಕೊಲೆ ಮಾಡುವುದಕ್ಕೆ ಮೇಲ್ಛಾವಣಿಯಿಂದ ತಳ್ಳಿದ್ದರಿಂದ ಕೆಳಗಿನ ಗ್ಯಾಲರಿಗೆ ಬಿದ್ದು ಬೆನ್ನುಮೂಳೆ, ಭುಜ ಮತ್ತು ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದವು. ಆದರೂ ರಾತ್ರಿಯಿಡೀ ತನಗೆ ವೈದ್ಯಕೀಯ ಚಿಕಿತ್ಸೆ ನೀಡಲಿಲ್ಲ ಎಂದು ದಿವ್ಯ ಆರೋಪಿಸಿದ್ದಾರೆ.
ಮರುದಿನ ಬೆಳಗ್ಗೆ, ತನ್ನನ್ನು ನಾಗ್ಡಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಘೋಷಿಸಿ ಇಂದೋರ್‌ನ ಬಾಂಬೆ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಈ ವಿಚಾರವನ್ನು ತನ್ನ ಪೋಷಕರಿಗೆ ಎಂದಿಗೂ ತಿಳಿಸಲಿಲ್ಲ ಮತ್ತು ವೈದ್ಯಕೀಯ ವೆಚ್ಚವನ್ನು ಭರಿಸುವಂತೆ ತನ್ನ ತಂದೆಗೆ ಒತ್ತಡ ಹೇರಲಾಗಿತ್ತು ಎಂದು ದಿವ್ಯ ಆರೋಪಿಸಿದ್ದಾರೆ.
ದಿವ್ಯಾಳ ದೊಡ್ಡ ಸಂಕಟವೆಂದರೆ ಅವರ 4 ವರ್ಷದ ಮಗಳ ಕತೆ. ತನ್ನ ಅತ್ತೆ ಹಾಗೂ ಮಾವ ತನ್ನ 4 ವರ್ಷದ ಮಗಳನ್ನು ಬಲವಂತವಾಗಿ ಇಟ್ಟುಕೊಂಡಿದ್ದಾರೆ ಮತ್ತು ಮಗುವನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ನವೆಂಬರ್‌ನಲ್ಲಿ ತಾನು ಮಗಳನ್ನು ನೋಡಲು ಶಾಲೆಗೆ ಭೇಟಿ ನೀಡಿದಾಗ, ಪತಿ ದೇವೇಂದ್ರ ತನ್ನನ್ನು ತಡೆದು, ನೀನು ನಿನ್ನ ಪೋಷಕರಿಂದ ಹಣವನ್ನು ತರದ ಹೊರತು, ಮಗಳನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಒಬ್ಬ ತಾಯಿ ಮಾತ್ರ ತನ್ನ ಮಗುವನ್ನು ಸರಿಯಾಗಿ ನೋಡಿಕೊಳ್ಳಬಹುದು. ನನಗೆ ನನ್ನ ಮಗಳು ಮರಳಿ ಬೇಕು ಎಂದು ಅವರು ತಮ್ಮ ದೂರಿನಲ್ಲಿ ಹೇಳಿದ್ದು, ಮಗಳನ್ನು ವಾಪಸ್ ನೀಡುವಂತೆ ಮನವಿ ಮಾಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ದಿವ್ಯಾ ಮೊದಲು ರತ್ಲಂನ ಎಸ್‌ಪಿ ಅಮಿತ್ ಕುಮಾರ್ ಅವರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ತನ್ನ ಪೋಷಕರು ರತ್ಲಂನಲ್ಲಿ ವಾಸಿಸುತ್ತಿದ್ದಾರೆ ಮತ್ತು ತಾನೂ ಕೂಡ ಪ್ರಸ್ತುತ ಅಲ್ಲೇ ವಾಸಿಸುತ್ತಿದ್ದಾನೆ ಎಂದು ಅವರು ಹೇಳಿದ್ದರು. ಆದರೆ ಉಜ್ಜಯಿನಿಯ ನಾಗ್ಡಾದಲ್ಲಿಯೇ ಹೆಚ್ಚನ ಘಟನೆಗಳು ನಡೆದ ಕಾರಣ ಉಜ್ಜಯಿನಿ ಎಸ್‌ಪಿಗೆ ಔಪಚಾರಿಕ ದೂರು ಸಲ್ಲಿಸುವಂತೆ ಅವರಿಗೆ ಸೂಚಿಸಲಾಗಿದೆ. ಆದರೂರತ್ಲಂ ಪೊಲೀಸರು ಆಕೆಯ ಅರ್ಜಿಯನ್ನು ಸ್ವೀಕರಿಸಿ ಅಗತ್ಯವಿರುವಲ್ಲಿಗೆ ರವಾನಿಸಿದ್ದಾರೆ. ಸೊಸೆಯ ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಜಿತೇಂದ್ರ ಗೆಹ್ಲೋಟ್,ಯಾರು ಬೇಕಾದರೂ ಆರೋಪಗಳನ್ನು ಮಾಡಬಹುದು. ನಾನು ಎಲ್ಲಾ ಸಂಗತಿಗಳನ್ನು ಮಾಧ್ಯಮಗಳ ಮುಂದೆ ಮಂಡಿಸುತ್ತೇನೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ