ಬಾಗೇಶ್ವರ ಧಾಮ ಧೀರೇಂದ್ರ ಶಾಸ್ತ್ರಿ ವಿರುದ್ಧ ‘ಪುತ್ರಯೋಗ’ ವಂಚನೆ ಆರೋಪ, ನಾಲ್ಕನೇ ಬಾರಿಯೂ ಹೆಣ್ಣು ಮಗು ಜನನ!

Published : Sep 26, 2026, 01:17 PM IST
Dhirendra Krishna Shastri

ಸಾರಾಂಶ

ಬಾಗೇಶ್ವರ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿಗಳು ದಿವ್ಯ ದರ್ಬಾರ್‌ನಲ್ಲಿ ಭಕ್ತರೊಬ್ಬರಿಗೆ ಪುತ್ರಯೋಗದ ಭವಿಷ್ಯ ನುಡಿದಿದ್ದರು. ಆದರೆ ಆ ಭಕ್ತನಿಗೆ ಹೆಣ್ಣು ಮಗು ಜನಿಸಿದ್ದು, ವಂಚನೆಗೊಳಗಾದ ಅವರು ಪೊಲೀಸ್ ದೂರು ನೀಡಲು ಮುಂದಾಗಿದ್ದಾರೆ. ಅಂಧಶ್ರದ್ಧಾ ನಿರ್ಮೂಲನ ಸಮಿತಿಯು ಬಾಬಾಗೆ ಪವಾಡ ಸಾಬೀತುಪಡಿಸಲು 1 ಕೋಟಿ ರೂ. ಸವಾಲು ಹಾಕಿದೆ.

ಝಾನ್ಸಿ : ಮಧ್ಯಪ್ರದೇಶದ ಪ್ರಸಿದ್ಧ ಬಾಗೇಶ್ವರ ಧಾಮದ ಪೀಠಾಧಿಪತಿ ಹಾಗೂ ಪ್ರಸಿದ್ಧ ಕಥಾವಾಚಕ ಧೀರೇಂದ್ರ ಕೃಷ್ಣ ಶಾಸ್ತ್ರಿ ಮತ್ತೊಮ್ಮೆ ಭಾರಿ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ‘ದಿವ್ಯ ದರ್ಬಾರ್’‌ನಲ್ಲಿ ನೀಡಲಾದ ಚೀಟಿಯಲ್ಲಿ ‘ಪುತ್ರಯೋಗ’ ಪ್ರಾಪ್ತಿಯಾಗಲಿದೆ ಎಂದು ಸುಳ್ಳು ಭವಿಷ್ಯ ನುಡಿದು ತಮಗೆ ಮೋಸ ಮಾಡಲಾಗಿದೆ ಎಂದು ಉತ್ತರ ಪ್ರದೇಶದ ಝಾನ್ಸಿ ಮೂಲದ ಭಕ್ತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಆ ವ್ಯಕ್ತಿಯು ಅಖಿಲ ಭಾರತೀಯ ಅಂಧಶ್ರದ್ಧಾ ನಿರ್ಮೂಲನ ಸಮಿತಿಯನ್ನು (ABANS) ಸಂಪರ್ಕಿಸಿದ್ದು, ಧೀರೇಂದ್ರ ಶಾಸ್ತ್ರಿಗಳ ವಿರುದ್ಧ ಪೊಲೀಸ್ ದೂರು ದಾಖಲಿಸಲು ಮುಂದಾಗಿದ್ದಾರೆ.

ಪ್ರಕರಣದ ಹಿನ್ನೆಲೆ: 10 ವರ್ಷಗಳ ನಂತರ ಮಗುವಿನ ಯೋಜನೆ

ಝಾನ್ಸಿಯ ಮಗರವಾಡ ನಿವಾಸಿ ರಾಜೇಂದ್ರ ಕುಮಾರ್ ಎಂಬುವವರು ಮಾರ್ಚ್ 2024 ರಿಂದ ಬಾಗೇಶ್ವರ ಧಾಮಕ್ಕೆ ಭೇಟಿ ನೀಡುತ್ತಿದ್ದರು. ಮೇ 2024 ರಲ್ಲಿ ನಡೆದ ದರ್ಬಾರ್‌ನಲ್ಲಿ ರಾಜೇಂದ್ರ ಅವರ ಹೆಸರು ಬಹಿರಂಗವಾಗಿ ಕರೆಯಲ್ಪಟ್ಟು, ಅವರಿಗಾಗಿ ಧೀರೇಂದ್ರ ಶಾಸ್ತ್ರಿಯವರು ಚೀಟಿಯೊಂದನ್ನು ಬರೆದುಕೊಟ್ಟಿದ್ದರು.

ಆ ಪತ್ರದಲ್ಲಿ ರಾಜೇಂದ್ರ ಅವರ ಪತ್ನಿ 'ದುಷ್ಟಶಕ್ತಿಗಳಿಂದ/ದೆವ್ವಗಳಿಂದ' ಬಳಲುತ್ತಿದ್ದಾರೆ ಮತ್ತು 2019 ರಲ್ಲಿ ಅವರ ಮೇಲೆ ಮಾಟಮಂತ್ರ ಮಾಡಲಾಗಿದೆ. 21 ಬಾರಿ ಧಾಮಕ್ಕೆ ಭೇಟಿ ನೀಡಿ ವಿಶೇಷ ಧಾರ್ಮಿಕ ವಿಧಿವಿಧಾನಗಳಿಗೆ ಒಳಗಾಗಬೇಕು. ಹೀಗೆ ಮಾಡಿದರೆ ದಂಪತಿಗೆ 'ಪುತ್ರಯೋಗ' ಸಿದ್ಧಿಸಲಿದೆ ಎಂದು ಲಿಖಿತವಾಗಿ ಬರೆದುಕೊಡಲಾಗಿತ್ತು.

ಈಗಾಗಲೇ ಮೂವರು ಹೆಣ್ಣುಮಕ್ಕಳಿದ್ದ ರಾಜೇಂದ್ರ ಕುಮಾರ್ ದಂಪತಿ, ಆರಂಭದಲ್ಲಿ ಮತ್ತೊಂದು ಮಗುವಿನ ಯೋಜನೆಯಲ್ಲಿರಲಿಲ್ಲ. ಆದರೆ ಬಾಬಾರವರ 'ಪುತ್ರಯೋಗ'ದ ಮಾತನ್ನು ಬಲವಾಗಿ ನಂಬಿ, ಸುಮಾರು 10 ವರ್ಷಗಳ ನಂತರ ನಾಲ್ಕನೇ ಮಗುವಿಗೆ ಪ್ರಯತ್ನಿಸಿದರು.

ನಾಲ್ಕನೇ ಮಗುವೂ ಹೆಣ್ಣು: ಧಾಮದಲ್ಲಿ ಜಗಳ

ಜೂನ್ 11, 2026 ರಂದು ರಾಜೇಂದ್ರ ಅವರ ಪತ್ನಿಗೆ ನಾಲ್ಕನೇ ಮಗುವಾಗಿ ಹೆಣ್ಣು ಮಗು ಜನ್ಮತಾಳಿತು. ಇದರಿಂದ ದಿಗ್ಭ್ರಮೆಗೊಂಡ ರಾಜೇಂದ್ರ, ನವಜಾತ ಶಿಶುವಿನೊಂದಿಗೆ ನೇರವಾಗಿ ಬಾಗೇಶ್ವರ ಧಾಮಕ್ಕೆ ತೆರಳಿ ಧೀರೇಂದ್ರ ಶಾಸ್ತ್ರಿಯವರನ್ನು ಪ್ರಶ್ನಿಸಿದರು.

ಶಾಸ್ತ್ರಿಯವರು "ಏನದು, ಗಂಡು ಮಗು ಬಂದಿದೆಯೋ ಅಥವಾ ಹೆಣ್ಣು ಮಗು ಬಂದಿದೆಯೋ? ಎಂದು ಕೇಳಿದಾಗ, ರಾಜೇಂದ್ರ ನೀವು ಗಂಡು ಮಗು ಹುಟ್ಟುತ್ತದೆ ಎಂದಿದ್ದಿರಿ, ಆದರೆ ಹೆಣ್ಣು ಮಗು ಹುಟ್ಟಿದೆ ಎಂದು ಬಾಬಾರವರ ಹೇಳಿಕೆಯನ್ನು ನೆನಪಿಸಿದರು. ಈ ವೇಳೆ ಶಾಸ್ತ್ರಿಯವರು ಕೋಪಗೊಂಡು, ವಾಗ್ವಾದ ನಡೆದು, ರಾಜೇಂದ್ರ ಅವರನ್ನು ಮಂಟಪದಿಂದ ಬಲವಂತವಾಗಿ ಹೊರಹಾಕಲಾಯಿತು ಎಂದು ಆರೋಪಿಸಲಾಗಿದೆ.

₹25,000 ಆರ್ಥಿಕ ನಷ್ಟ ಹಾಗೂ ಕಾನೂನು ಹೋರಾಟಕ್ಕೆ ಚಿಂತನೆ

ಆರಂಭದಲ್ಲಿ ₹1,100 ಪಾವತಿಸಿ ಪ್ರವೇಶ ಪಡೆದಿದ್ದ ರಾಜೇಂದ್ರ, ನಂತರದ ವಿವಿಧ ಭೇಟಿಗಳು ಹಾಗೂ ಧಾರ್ಮಿಕ ವಿಧಿವಿಧಾನಗಳಿಗಾಗಿ ಒಟ್ಟು ₹25,000 ಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದರು. ಹಣ ಮಾತ್ರವಲ್ಲದೆ ಮಾನಸಿಕ ಹಾಗೂ ಆರ್ಥಿಕ ವಂಚನೆಗೊಳಗಾಗಿದ್ದೇನೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ನಂತರ ಅವರು ಅಖಿಲ ಭಾರತೀಯ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ (ಅನ್ನಿಸ್) ಸಂಘಟಕ ಹರೀಶ್ ದೇಶಮುಖ್ ಅವರನ್ನು ಸಂಪರ್ಕಿಸಿದ್ದಾರೆ. ಮೊದಲು ಝಾನ್ಸಿ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದು, ಅಲ್ಲಿ ದೂರು ಸ್ವೀಕರಿಸದಿದ್ದರೆ ಮಹಾರಾಷ್ಟ್ರ ಪೊಲೀಸರ ಬಳಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಇಂತಹ ದಾರಿತಪ್ಪಿಸುವ ಮಾತುಗಳಿಂದ ವಂಚನೆಗೊಳಗಾದ ಇತರ ಭಕ್ತರೂ ಮುಂದೆ ಬಂದು ದೂರು ನೀಡುವಂತೆ ಸಮಿತಿ ಕರೆ ನೀಡಿದೆ.

ಸಮಿತಿಯಿಂದ ₹1 ಕೋಟಿ ಸವಾಲು!

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಖಿಲ ಭಾರತೀಯ ಅಂಧಶ್ರದ್ಧಾ ನಿರ್ಮೂಲನ ಸಮಿತಿಯು ಧೀರೇಂದ್ರ ಶಾಸ್ತ್ರಿಗೆ ನೇರ ಸವಾಲು ಎಸೆದಿದೆ. ಬಾಗೇಶ್ವರ ಶಾಸ್ತ್ರಿ ಅವರು ತಮ್ಮಲ್ಲಿರುವ ದಿವ್ಯ ಶಕ್ತಿ ಹಾಗೂ ಪವಾಡಗಳನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿದರೆ, ಸಮಿತಿಯ ಪರವಾಗಿ ಅವರಿಗೆ ₹1 ಕೋಟಿ ಬಹುಮಾನ ನೀಡಲಾಗುವುದು. ಇಂತಹ ವೈಜ್ಞಾನಿಕ ಆಧಾರವಿಲ್ಲದ ಹಕ್ಕುಗಳನ್ನು ಸಾರ್ವಜನಿಕರು ನಂಬಬಾರದು ಎಂದು ಸಮಿತಿ ಮನವಿ ಮಾಡಿದೆ.

ಧೀರೇಂದ್ರ ಕೃಷ್ಣ ಶಾಸ್ತ್ರಿ ಯಾರು?

ಜುಲೈ 1996 ರಲ್ಲಿ ಮಧ್ಯಪ್ರದೇಶದ ಛತ್ತರಪುರ ಜಿಲ್ಲೆಯ ಗರ್ಹಾ ಗ್ರಾಮದಲ್ಲಿ ಧೀರೇಂದ್ರ ಕೃಷ್ಣ ಶಾಸ್ತ್ರಿ ಜನಿಸಿದ್ದು, ತಂದೆ ಕಥಾವಾಚಕ ಹಾಗೂ ಅರ್ಚಕರಾಗಿದ್ದರು. ಛತ್ತರಪುರದ ಬಾಗೇಶ್ವರ ಧಾಮವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಹನುಮಾನ್ ಭಕ್ತಿ ಹಾಗೂ ಭಾಗವತ ಕಥೆಗಳ ಮೂಲಕ ಖ್ಯಾತಿ ಗಳಿಸಿದರು.

ಭಕ್ತರ ಹೆಸರುಗಳನ್ನು ಸ್ವತಃ ಕರೆದು, ಅವರ ವೈಯಕ್ತಿಕ ಸಮಸ್ಯೆಗಳನ್ನು ಸ್ಲಿಪ್ ಗಳಲ್ಲಿ ಮುಂಚಿತವಾಗಿಯೇ ಬರೆದಿಡುವ 'ದಿವ್ಯ ದರ್ಬಾರ್' ಮೂಲಕ ಇವರು ಭಾರಿ ಜನಪ್ರಿಯತೆ ಗಳಿಸಿದರು. ಆದರೆ, ಬುದ್ಧಿಜೀವಿಗಳು ಹಾಗೂ ಅಂಧಶ್ರದ್ಧೆ ವಿರೋಧಿ ಸಂಘಟನೆಗಳು ಈ ಪವಾಡಗಳನ್ನು ಸತತವಾಗಿ ಪ್ರಶ್ನಿಸುತ್ತಾ ಬಂದಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಟ್ರೋ ನಿಲ್ದಾಣದ ಬಾಕ್ಸ್‌ನಲ್ಲಿ ಬೆಚ್ಚಗೆ ನಿದ್ದೆಗೆ ಜಾರಿದ ಬೆಕ್ಕು, ಹೊಸ ಟಿಕೆಟ್ ಕಲೆಕ್ಟರ್ ಎಂದ ನೆಟ್ಟಿಗರು
ಬಿಜೆಪಿ ತೊರೆಯಲು ಮುಂದಾದ್ರ ಮಾಜಿ ಸಿಎಂ? ಮುಜುಗರ ಜೊತೆ ಕೋಲಾಹಲ ಸೃಷ್ಟಿಸಿದ ಹೇಳಿಕೆ