
ರಾಷ್ಟ್ರ ರಾಜಧಾನಿ ದೆಹಲಿ ಚುನಾವಣೆ ಮುಗಿದಿದ್ದು, ಅರವಿಂದ ಕೇಜ್ರಿವಾಲ್ ನೇತೃತ್ವ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಜಯ ಗಳಿಸಿದೆ. ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ.
ಇತ್ತ ಚುನಾವಣೆಯಲ್ಲಿ ಒಟ್ಟು 70 ಸ್ಥಾನಗಳ ಪೈಕಿ ಆಪ್ 62, ಬಿಜೆಪಿ 8 ಸ್ಥಾನವನ್ನು ಗೆದ್ದಿದ್ದರೆ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲದೆ ಹೀನಾಯ ಸೋಲು ಅನುಭವಿಸಿದೆ.
ಈ ನಡುವೆ ಕಾಂಗ್ರೆಸ್ ದೆಹಲಿಯಲ್ಲಿ ಹೀನಾಯ ಸೋಲು ಅನುಭವಿಸಿದ್ದರೂ ಕೈ ಮುಖಂಡ ರಾಹುಲ್ ಗಾಂಧಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ನಗುಮುಖದಿಂದ ಅಭಿನಂದಿಸಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೇಜ್ರಿವಾಲ್ ಮತ್ತು ರಾಹುಲ್ ಗಾಂಧಿ ಕೈಕುಲುಕುತ್ತಿರುವ ಫೋಟೋ ಪೋಸ್ಟ್ ಮಾಡಿ ಹೀಗೆ ಹೇಳಲಾಗಿದೆ. ಅಜೀಮ್ ಶೇಖ್ ಎಂಬ ಹೆಸರಿನ ಫೇಸ್‌ಬುಕ್ ಬಳಕೆದಾರರು ಮೊದಲಿಗೆ ಈ ಫೋಟೋವನ್ನು ಪೋಸ್ಟ್ ಮಾಡಿ, ಸಹೋದರತ್ವ ಎಂದರೆ ಇದು. ಹೀನಾಯ ಸೋಲಿನ ಹೊರತಾಗಿಯೂ ರಾಹುಲ್ ಗಾಂಧಿ ನಗುಮುಖದಿಂದ ಕೇಜ್ರಿವಾಲ್ ಅವರನ್ನು ಅಭಿನಂದಿಸಿದ್ದಾರೆ ಎಂದು ಒಕ್ಕಣೆ ಬರೆದಿದ್ದಾರೆ. ಇದೀಗ 1000 ಬಾರಿ ಶೇರ್ ಆಗಿದೆ.
ಆದರೆ ಈ ಫೋಟೋದ ಹಿಂದಿನ ಸತ್ಯಾಸತ್ಯ ಏನು ಎಂದು ಇಂಡಿಯಾ ಟು ಡೇ ಪರಿಶೀಲಿಸಿದಾಗ ವೈರಲ್ ಆಗಿರುವ ಫೋಟೋ ಹಳೆಯದ್ದು ಎನ್ನುವುದು ಖಚಿತವಾಗಿದೆ. ವಾಸ್ತವವಾಗಿ ವೈರಲ್ ಆಗಿರುವ ಫೋಟೋ ಜನವರಿ 26, 2018ರಲ್ಲಿ ರಾಷ್ಟ್ರಪತಿ ಭವನದಲ್ಲಿ ತೆಗೆದಿದ್ದು. ಅಂದಿನ ಗಣರಾಜ್ಯೋತ್ಸವ ಪರೇಡ್ ನಂತರ ರಾಷ್ಟ್ರಪತಿ ಭವನದ ಮುಘಲ್ ಗಾರ್ಡನ್‌ನಲ್ಲಿ ರಾಹುಲ್ ಗಾಂಧಿ ಕೇಜ್ರೀವಾಲ್ ಅವರನ್ನು ಭೇಟಿಯಾಗಿದ್ದರು. ಅದೇ ಫೋಟೋವನ್ನು ಈಗ ಫೋಸ್ಟ್ ಮಾಡಿ ಸುಳ್ಳುಸುದ್ದಿ ಹರಡಲಾಗುತ್ತಿದೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ