ಜೈಲಿನಿಂದಲೇ ಗೆದ್ದ ತೀವ್ರವಾದಿ ಅಮೃತ್‌ಪಾಲ್, ಕಾಶ್ಮಿರದ ಎಂಜಿನಿಯರ್ ಉಗ್ರ ರಶೀದ್‌: ಮುಂದೇನು?

By Anusha KbFirst Published Jun 6, 2024, 2:13 PM IST
Highlights

ಜೈಲಿನಲ್ಲಿದ್ದೇ ಗೆದ್ದ ತೀವ್ರವಾದಿ ಅಮೃತ್‌ಪಾಲ್, ಕಾಶ್ಮಿರದ ಎಂಜಿನಿಯರ್ ಉಗ್ರ ರಶೀದ್‌, ಜೈಲಿನಿಂದಲೇ ಸಂಸದರಾಗಿ ಆಯ್ಕೆಯಾಗಿರುವುದರಿಂದ ಮುಂದೆ ಹೇಗೆ ಅವರು ಕಾರ್ಯ ನಿರ್ವಹಿಸುತ್ತಾರೆ. ಅವರು ಜೈಲಿನಿಂದ ಬಿಡುಗಡೆ ಆಗುತ್ತಾರಾ?  ಈ ಬಗ್ಗೆ ಒಂದು ಡಿಟೇಲ್ಡ್ ಸ್ಟೋರಿ ಇಲ್ಲಿದೆ..

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಬ್ಬರು ಜೈಲಿನಿಂದಲೇ ಸ್ಪರ್ಧಿಸಿ ಗೆದ್ದು ಇತಿಹಾಸ ನಿರ್ಮಿಸಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಪಂಜಾಬ್‌ನ ತೀವ್ರವಾದಿ ನಾಯಕ, ವಾರೀಸ್  ಪಂಜಾಬ್ ದೀ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್ ಪಂಜಾಬ್‌ನ ಖದೂರ್ ಸಾಹೀಬ್‌ನಿಂದ ಗೆದ್ದು ಸಂಸತ್ ಪ್ರವೇಶಕ್ಕೆ ಅವಕಾಶ ಪಡೆದಿದ್ದಾರೆ. ಅದೇ ರೀತಿ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ, ಜಮ್ಮು ಕಾಶ್ಮೀರದ ಇಂಜಿನಿಯರ್‌  ರಶೀದ್ ಕೂಡ ಈ ಬಾರಿ ಜಮ್ಮು ಕಾಶ್ಮೀರದ ಬಾರಮುಲ್ಲಾದಿಂದ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಈತನ ವಿರುದ್ಧ ಗಂಭೀರ ಆರೋಪಗಳಿದ್ದು, ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿದೆ. ಆದರೆ ಈಗ ಎದ್ದಿರುವ ಪ್ರಶ್ನೆ ಹೀಗೆ ಗಂಭೀರ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆ ಇರುವ ಈ ಇಬ್ಬರು ಜೈಲಿನಿಂದಲೇ ಸಂಸದರಾಗಿ ಆಯ್ಕೆಯಾಗಿರುವುದರಿಂದ ಮುಂದೆ ಹೇಗೆ ಅವರು ಕಾರ್ಯ ನಿರ್ವಹಿಸುತ್ತಾರೆ. ಅವರು ಜೈಲಿನಿಂದ ಬಿಡುಗಡೆ ಆಗುತ್ತಾರಾ? ಸಂಸತ್‌ ಪ್ರವೇಶಿಸಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸುತ್ತಾರಾ ಇಂತಹದೊಂದು ಪ್ರಶ್ನೆ ಬಹುತೇಕ ಎಲ್ಲಾ ನಾಗರಿಕರನ್ನು ಕಾಡುತ್ತಿದೆ. ಈ ಬಗ್ಗೆ ಒಂದು ಡಿಟೇಲ್ಡ್ ಸ್ಟೋರಿ ಇಲ್ಲಿದೆ..

ಎನ್‌ಎಸ್ಎ ಕಾಯ್ದೆಯಡಿ ಬಂಧಿತನಾಗಿರುವ ಅಮೃತ್‌ಪಾಲ್
ಪ್ರಸ್ತುತ ಅಮೃತ್‌ಪಾಲ್ ಸಿಂಗ್ ಅಸ್ಸಾಂನ ದಿಬ್ರುಗರ್‌ ಜೈಲಿನಲ್ಲಿದ್ದಾನೆ. ಮಾರ್ಚ್ 2023ರ ರಾಷ್ಟ್ರೀಯ ಭದ್ರತಾ ಕಾಯಿದೆ (NSA)ಯಡಿ ಈತ ಬಂಧನದಲ್ಲಿದ್ದಾನೆ. ಈ ಎನ್‌ಎಸ್‌ಎ ಕಾಯ್ದೆಯ ಪ್ರಕಾರ,  ವ್ಯಕ್ತಿಯೊಬ್ಬನನ್ನು ಬಂಧಿಸಿ ಯಾವುದೇ ಔಪಚಾರಿಕ ಆರೋಪಗಳನ್ನು  ಹೊರಿಸದೇ  ಒಂದು ವರ್ಷದ ಕಾಲ ಬಂಧಿಸಲು ಸರ್ಕಾರಕ್ಕೆ ಅನುಮತಿ ನೀಡುತ್ತದೆ.

Latest Videos

ಇತ್ತ ದೆಹಲಿಯ ತಿಹಾರ್ ಜೈಲಿನಲ್ಲಿರುವ ಜಮ್ಮು ಕಾಶ್ಮೀರದ ಇಂಜಿನಿಯರ್ ರಶೀದ್ ವಿರುದ್ಧವೂ ಭಯೋತ್ಪಾದನೆಗೆ ಧನ ಸಹಾಯ ಮಾಡಿದ ಆರೋಪವಿದ್ದು, ಈ  ಹಿನ್ನೆಲೆಯಲ್ಲಿ ಗಂಭೀರವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಉಪ UAPA) ಯಡಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಮಾಜಿ ಶಾಸಕನೂ ಆಗಿರುವ ಈತ ಈ ಬಾರಿ ಅವಾಮಿ ಇತ್ತೇಹಾದ್ ಪಕ್ಷದಿಂದ ಕಣಕ್ಕಿಳಿದು ಲೋಕಸಭೆಗೆ ಆಯ್ಕೆಯಾಗಿದ್ದಾನೆ. 

ಇವರನ್ನು ಜನ ಜೈಲಿನಿಂದಲೇ ಗೆಲ್ಲಿಸಿರುವುದರಿಂದ ಅವರು ಸಂಸದರಾಗಿ ಸಾಂವಿಧಾನಿಕ ಜನಾದೇಶವನ್ನು ಹೊಂದಿದ್ದಾರೆ ಎಂಬುದು ಖಚಿತವಾಗಿದೆ. ಹೀಗಾಗಿ ಇವರು ಮುಂದೆ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಬೇಕಾಗುತ್ತದೆ. ಸಂವಿಧಾನದಲ್ಲಿ ಇದನ್ನು ಸ್ಪಷ್ಟವಾಗಿ ವಿವರಿಸದೇ ಇದ್ದರೂ ಕೂಡ ಈ ಹಿಂದೆ ಬೇರೆ ಪ್ರಕರಣಗಳಲ್ಲಿ ಜೈಲಿನಿಂದ ಆಯ್ಕೆಯಾದವರಿಗೆ ನಂತರ ಪ್ರಮಾಣ ವಚನ ಸ್ವೀಕರಿಸುವುದಕ್ಕಾಗಿ ಪೆರೋಲ್ ನೀಡಿದ ಉದಾಹರಣೆ ಇದೆ. ಆದರೂ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡುವುದು ಜಾಮೀನಿನ ಮೇಲೆ ಬಿಡುಗಡೆ ಮಾಡಿದ ಹಾಗಲ್ಲ. ಇದು ಕೇವಲ ಒಂದು ದಿನದ ವಿಶೇಷ ಪೆರೋಲ್‌ಗೆ ಹೋಲುತ್ತದೆಯಷ್ಟೆ.

ನ್ಯಾಯಾಲಯದ ಅನುಮತಿ ಕಡ್ಡಾಯ
ಇದರ ಜೊತೆಗೆ ಜೈಲಿನಲ್ಲಿರುವ ಜನಪ್ರತಿನಿಧಿಗಳು ಕಲಾಪಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಸ್ಪೀಕರ್‌ಗೆ ಪತ್ರ ಬರೆಯಬೇಕಾಗುತ್ತದೆ. ಸಂವಿಧಾನದ ಅನುಚ್ಛೇದ 101(4) ಪ್ರಕಾರ, ಸ್ಪೀಕರ್‌ ಅನುಮತಿಯಿಲ್ಲದೆ ಎಲ್ಲಾ ಕಲಾಪಗಳಿಗೆ 60 ದಿನಗಳಿಗಿಂತ ಹೆಚ್ಚು ಕಾಲ ಸಂಸದರು ಗೈರಾಗಿದ್ದರೆ, ಅವರ ಸ್ಥಾನವನ್ನು ಖಾಲಿ ಎಂದು ಘೋಷಿಸಲಾಗುತ್ತದೆ. ಇದರ ಜೊತೆಗೆ ಸಂಸತ್‌ ಅಧಿವೇಶನಕ್ಕೆ ಹಾಜರಾಗಲು ಅಥವಾ ಸಂಸತ್ತಿನಲ್ಲಿ ಮತ ಚಲಾಯಿಸಲು ಕೂಡ ಸಂಸದರು ಅನುಮತಿಗಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ.

ಕಳೆದ ಮಾರ್ಚ್‌ನಲ್ಲಿ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್‌ ಜೈಲಿನಲ್ಲಿ  ಬಂಧಿಯಾಗಿರುವ ಎಎಪಿ ನಾಯಕ ಸಂಜಯ್ ಸಿಂಗ್ ಅವರಿಗೆ 2ನೇ ಅವಧಿಗೆ ರಾಜ್ಯಸಭೆಯ ಸದಸ್ಯರಾಗಿ ಮುಂದುವರೆಯುವುದಕ್ಕೆ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ನ್ಯಾಯಾಲಯ ಅವಕಾಶ ನೀಡಿತ್ತು. ಹೀಗಾಗಿ ಅವರಿಗೆ ಸೂಕ್ತ ಭದ್ರತೆಯೊಂದಿಗೆ ಸಂಸತ್ತಿಗೆ ಕರೆದೊಯ್ದು ಮರಳಿ ಜೈಲಿಗೆ ಕರೆತರುವಂತೆ ಜೈಲು ಅಧೀಕ್ಷಕರಿಗೆ ವಿಚಾರಣಾ ನ್ಯಾಯಾಲಯವೂ ಸೂಚಿಸಿತ್ತು.

ಪ್ರಮಾಣ ವಚನಕ್ಕೆ ಅನುಮತಿ ನೀಡಿದ್ದ ಎನ್‌ಐಎ ಕೋರ್ಟ್

ಮತ್ತೊಂದು ಪ್ರಕರಣದಲ್ಲಿ ಅಸ್ಸಾಂನ ಸಿಬ್ಸಾಗರ್‌ನಿಂದ ಅಸ್ಸಾಂ ವಿಧಾನಸಭೆಗೆ ಆಯ್ಕೆಯಾದ ಅಖಿಲ್ ಗೋಗೋಯ್‌ಗೆ  ಶಾಸಕನಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆ ಎನ್‌ಐಎ ಕೋರ್ಟ್ ಅವಕಾಶ ನೀಡಿತ್ತು.

ಜೈಲಿನಿಂದಲೇ ನಿಂತು ಚುನಾವಣೆ ಗೆದ್ದಿದ್ದ ಜಾರ್ಜ್ ಫರ್ನಾಂಡಿಸ್‌

ಆದರೂ ಜೈಲಿನಿಂದಲೇ ಚುನಾವಣೆಗೆ ಗೆದ್ದು ಬಂದು ಅತ್ಯಂತ ಪ್ರಸಿದ್ಧವಾದ ಪ್ರಕರಣ ಎಂದರೆ 1997ರಲ್ಲಿ ಜೈಲಿನಿಂದಲೇ ಆಯ್ಕೆಯಾದ ಜಾರ್ಜ್ ಫರ್ನಾಂಡಿಸ್ ಅವರದ್ದು, ಟ್ರೆಡ್ ಯೂನಿಯನ್ ಲೀಡರ್, ಕಾರ್ಮಿಕ ನಾಯಕನಾಗಿದ್ದ ದಿವಂಗತ ಜಾರ್ಜ್ ಫರ್ನಾಂಡಿಸ್ ಅವರು  ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿನಿಂದಲೇ ಉತ್ತರ ಪ್ರದೇಶದ ಮುಜಾಫರ್‌ನಗರದಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

click me!