* ಅಯೋಧ್ಯೆಯಲ್ಲಿ ಭರದಿಂದ ಸಾಗಿದೆ ದೇಗುಲ ನಿರ್ಮಾಣ ಕಾಮಗಾರಿ
* 2023ರ ಡಿಸೆಂಬರ್‌ಗೆ ಗರ್ಭಗುಡಿ, 2024ರೊಳಗೆ ದೇವಸ್ಥಾನ ಪೂರ್ಣ
* ನಿರ್ಮಾಣ ಸ್ಥಳದಲ್ಲೇ ನಿರ್ಮಾಣ ಮುಖ್ಯಸ್ಥರ ಸಾಕ್ಷಾತ್ ಸಂದರ್ಶನ
ನವದೆಹಲಿ(ಮೇ.02): ಕೋಟ್ಯಂತರ ಹಿಂದೂಗಳ ಆರಾಧ್ಯದೈವ ಶ್ರೀರಾಮನಿಗೆ ಜನ್ಮಸ್ಥಳ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಿಸುವ ಕಾಮಗಾರಿ ಅತ್ಯಂತ ಭರದಿಂದ ಸಾಗಿದ್ದು, 2023ರ ಡಿಸೆಂಬರ್‌ಗೆ ಮಂದಿರದ ಗರ್ಭಗುಡಿ ಕಾಮಗಾರಿ ಮತ್ತು 2024ರ ಅಂತ್ಯಕ್ಕೆ ಇಡೀ ಮಂದಿರದ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತವಾಗಿದೆ.
ಇದರೊಂದಿಗೆ ರಾಮಲಲ್ಲಾನನ್ನು ಅತ್ಯಂತ ನಯನ ಮನೋಹರ ಸ್ಥಳದಲ್ಲಿ ಕಣ್ತುಂಬಿಕೊಳ್ಳುವ ಭಕ್ತರ ಆಸೆ ನೆರವೇರುವ ಜೊತೆಗೆ, ಮಂದಿರ ನಿರ್ಮಿಸುವ ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ಪ್ರಮುಖ ಆಶ್ವಾಸನೆಯೊಂದು ಕೂಡ ಈಡೇರುವ ಶುಭಘಳಿಗೆ ಸನ್ನಿಹಿತವಾದಂತಾಗಿದೆ.
2020ರ ಆ.6ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಳ್ಳಿಯ ಇಟ್ಟಿಗೆ ಇಡುವ ಮೂಲಕ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ನಂತರದ ಪ್ರತಿಯೊಂದು ಹಂತದ ಕೆಲಸಗಳು ಕೂಡ ಅತ್ಯಂತ ಯೋಜನಾಬದ್ಧವಾಗಿ, ಕಾಲಮಿತಿಯಲ್ಲೇ ಸಾಗಿವೆ. ಈ ಎಲ್ಲಾ ಬೆಳವಣಿಗೆ ಕುರಿತು ರಾಮಮಂದಿರ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರು ಸಾಕ್ಷಾತ್ ಮಂದಿರ ನಿರ್ಮಾಣದ ಸ್ಥಳದಲ್ಲೇ ಜೊತೆ ಏಷ್ಯಾನೆಟ್ ಸಮೂಹದ ರಾಜೇಶ್ ಕಾಲ್ರಾ ಜೊತೆಗೆ ಈ ಎಲ್ಲಾ ಮಾಹಿತಿ ಹಂಚಿಕೊಂಡಿದ್ದಾರೆ.
ಭದ್ರ ಅಡಿಪಾಯ:
ದೇಗುಲ ನಿರ್ಮಾಣ ಸ್ಥಳದ ಮಣ್ಣು ಸಡಿಲವಾಗಿದ್ದ ಕಾರಣ, 50 ಮೀಟರ್ ಆಳದವರೆಗೆ ಮಣ್ಣು ತೆಗೆದು, ಅಲ್ಲಿ ಕಾಂಕ್ರೀಟ್ ಮೂಲಕ ಭದ್ರ ಬುನಾದಿ ಹಾಕಲಾಗಿದೆ. ಐಐಟಿ ಮದ್ರಾಸ್, ಐಐಟಿ ದೆಹಲಿ, ಐಐಟಿ ಸೂರತ್, ಐಐಟಿ ಕಾನ್ಪುರ, ಐಐಟಿ ಹೈದ್ರಾಬಾದ್‌ನ ಪರಿಣತ ಎಂಜಿನಿಯರ್‌ಗಳು ಸೇರಿದ ತಜ್ಞರ ಸಮಿತಿಯ ಸಲಹೆಯಂತೆ ಇಡೀ ಮಂದಿರದ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ.
ಗರ್ಭಗುಡಿ ಪೂರ್ಣ:
2023ರ ಡಿಸೆಂಬರ್ ಒಳಗೆ ಗರ್ಭಗುಡಿಯ ಕಾಮಗಾರಿ ಪೂರ್ಣಗೊಳಿಸಿ, ಅದರಲ್ಲಿ ದೇವರ ವಿಗ್ರಹ ಕೂರಿಸುವ ಗುರಿ ಹಾಕಿಕೊಳ್ಳಲಾಗಿದೆ. ಹೀಗೆ ಮಾಡಿದರೆ ಬರುವ ಭಕ್ತರು ದೂರದಿಂದಲೇ ದರ್ಶನ ಮಾಡಬಹುದು. ಇದರಲ್ಲಿ ಐದು ಮಂಟಪಗಳು ಬರಲಿವೆ. ಇವುಗಳು ನೆಲಮಹಡಿಯಲ್ಲೇ ನಿರ್ಮಾಣವಾಗಲಿವೆ. ಇದರ ಮೇಲೆ ಮೊದಲ ಅಂತಸ್ತು ಕಟ್ಟಲಾಗುವುದು. ಆದಾದ ಮೇಲೆ ಎರಡನೇ ಅಂತಸ್ತು. ಇದರಲ್ಲಿ ಮೂರು ಮತ್ತು ಎರಡು ಮಂಟಪಗಳು ಬರಲಿವೆ. ಎಲ್ಲ ಸಮುದಾಯದವರು ದೇವಾಲಯಕ್ಕೆ ಬಂದು ದರ್ಶನ ಪಡೆದುಕೊಳ್ಳಬೇಕು ಎಂಬ ಸದುದ್ದೇಶದಿಂದ ಮುಖ್ಯ ಮಂದಿರ ಮಾತ್ರವಲ್ಲದೇ ರಾಮಮಂದಿರದ ಸುತ್ತಲೂ ವಾಲ್ಮೀಕಿ ಮಂದಿರ, ಶಬರಿ ಮಂದಿರ ಹೀಗೆ ಇನ್ನಿತರ ಚಿಕ್ಕ ದೇವಾಲಯಗಳನ್ನು ಕೂಡ ನಿರ್ಮಾಣ ಮಾಡಲಾಗುತ್ತಿದೆ.
ಲೋಹವಿಲ್ಲದ ಮಂದಿರ:
ಇಡೀ ದೇವಾಲಯದ ನಿರ್ಮಾಣದಲ್ಲಿ ಲೋಹವನ್ನೇ ಬಳಸಿಲ್ಲ. ಬದಲಾಗಿ ಕಾಂಕ್ರೀಟ್ ಬಳಸಲಾಗುತ್ತಿದೆ. ಕಟ್ಟಡದ ಸಾಮರ್ಥ್ಯಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಕರ್ನಾಟಕದ ದೊಡ್ಡಬಳ್ಳಾಪುರ ಜಿಲ್ಲೆಯ ಗ್ರಾನೈಟ್ ಬಳಸಲಾಗಿದ್ದು, ಅದನ್ನು ಕೋಲಾರದಲ್ಲಿರುವ ರಾಕ್ ನ್ಯಾಷನಲ… ಇನ್ಸ್‌ಸ್ಟಿಟ್ಯೂಟ್‌ನಿಂದ ಪರೀಕ್ಷೆಗೆ ಒಳಪಡಿಸಲಾಗಿದೆ. ಕಟ್ಟಡದ ಬೇರಿಂಗ್ ಸಾಮರ್ಥ್ಯವನ್ನೂ ಸೆಂಟ್ರಲ… ಬಿಲ್ಡಿಂಗ್ ರೀಸಚ್‌ರ್ ಇನ್ಸ್‌ಟಿಟ್ಯೂಟ್‌ನವರು ಪರೀಕ್ಷಿಸಿದ್ದು, ಭಾರೀ ಭೂಕಂಪವಾದರೂ ತಡೆದುಕೊಳ್ಳುವ ಸಾಮರ್ಥ್ಯ ದೇವಾಲಯಕ್ಕೆ ಇದೆ ಎಂದು ಪ್ರಮಾಣೀಕರಿಸಿದ್ದಾರೆ.
ನಾಗರ ಶೈಲಿ:
ಸಾಂಪ್ರದಾಯಿಕ ರಘುವಂಶದ ವಾಸ್ತುಶಿಲ್ಪ ಮಾದರಿಯನ್ನೇ ಆಧರಿಸಿ ಉತ್ತರ ಭಾರತದ ಪ್ರಸಿದ್ಧ ನಾಗರ ಶೈಲಿಯಲ್ಲಿ ಇಡೀ ದೇವಾಲಯದ ವಿನ್ಯಾಸ ಇರಲಿದೆ. ಗುಜರಾತಿನ ಸೋಮಪುರದ ಪರಿಣತ ವಾಸ್ತುಶಿಲ್ಪಿಗಳಿಗೆ ಮಂದಿರ ವಿನ್ಯಾಸದ ಕಾರ್ಯವನ್ನು ವಹಿಸಿಕೊಡಲಾಗಿದೆ. ಶ್ರೀರಾಮನು ಮಧ್ಯಾಹ್ನ 12 ಗಂಟೆಗೆ ಜನಿಸಿದ್ದನೆಂದು ಜನರು ನಂಬುತ್ತಾರೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸೂರ್ಯನ ಕಿರಣವು ದೇವರ ಹಣೆ ಸ್ಪರ್ಶಿಸಿ ಹೋಗುವಂತೆ ದೇವಾಲಯ ನಿರ್ಮಾಣ ಮಾಡಲಾಗುತ್ತಿದೆ.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸ್ವಲ್ಪವೂ ಬಳಕೆಯಾಗಲ್ಲ ಲೋಹ, ಏನಿದರ ಮರ್ಮ?
5 ಲಕ್ಷ ಜನರಿಗೆ ಅವಕಾಶ:
ಮಂದಿರ ಪೂರ್ಣಗೊಂಡ ಬಳಿಕ ವಿಶೇಷ ದಿನಗಳಲ್ಲಿ ಒಂದು ದಿನಕ್ಕೆ 5 ಲಕ್ಷ ಜನರು ದರ್ಶನ ಪಡೆಯಬಹುದಾಗಿದ್ದು, ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ವಿಶೇಷ ದರ್ಶನದ ವ್ಯವಸ್ಥೆಯಿರಲಿದೆ. ಸೂರ್ಯನ ಕಿರಣ ರಾಮಲಲ್ಲಾ ಮೂರ್ತಿ ಮೇಲೆ ಬೀಳುವ ದೃಶ್ಯವನ್ನು ಎಲ್ಲ ಭಕ್ತಾದಿಗಳು ನೋಡಿ ಕಣ್ತುಂಬಿಕೊಳ್ಳುವಂತೆ ಮಾಡಲು 100 ಬೃಹತ್ ಪರದೆಗಳ ಮೂಲಕ ದೇವಾಲಯದ ಕ್ಯಾಂಪಸ್‌ನಲ್ಲಿ ಬಿತ್ತರಿಸಲಾಗುತ್ತದೆ.
ರಾಮಮಂದಿರ ನಿರ್ಮಾಣದೊಂದಿಗೆ ಇಡೀ ಅಯೋಧ್ಯೆಯನ್ನು ಅಂತಾರಾಷ್ಟ್ರೀಯ ಮಾದರಿಯಲ್ಲಿ ಅಭಿವೃದ್ಧಿ ಮಾಡುವುದಾಗಿ ಉತ್ತರ ಪ್ರದೇಶದ ಸರ್ಕಾರ ಪಣ ತೊಟ್ಟಿದ್ದು, ರಸ್ತೆ, ಬಸ್ ನಿಲ್ದಾಣ, ಕಾರ್ ಪಾರ್ಕಿಂಗ್, ಪ್ರವಾಸಿಗರಿಗೆ ವ್ಯವಸ್ಥೆಯೊಂದಿಗೆ ಮೂಲ ಸೌಕರ್ಯಗಳ ಅಭಿವೃದ್ಧಿಯತ್ತಲೂ ಗಮನ ಹರಿಸುತ್ತಿದ್ದಾರೆ.
ಸಂದರ್ಶನದ ಮುಖ್ಯಾಂಶಗಳು
- 1000 ವರ್ಷ ಬಾಳಿಕೆ ಬರುವಂತೆ ರಾಮಮಂದಿರ ನಿರ್ಮಾಣ
- ಉತ್ತರ ಭಾರತದ ಪ್ರಸಿದ್ಧ ನಾಗರ ಶೈಲಿಯಲ್ಲಿ ದೇವಸ್ಥಾನ ವಿನ್ಯಾಸ
- ಲೋಹ ಬಳಸದೆ ಸಂಪೂರ್ಣ ಕಾಂಕ್ರಿಟ್‌ನಿಂದ ದೇಗುಲ ನಿರ್ಮಾಣ
- ಮಧ್ಯಾಹ್ನ 12ಕ್ಕೆ ಸೂರ‍್ಯಕಿರಣ ದೇವರ ಹಣೆ ಸ್ಪರ್ಶಿಸುವಂತೆ ವಿನ್ಯಾಸ
- ಕಾಮಗಾರಿ ಮುಗಿದ ಬಳಿಕ ನಿತ್ಯ 5 ಲಕ್ಷ ಜನ ದರ್ಶನ ಪಡೆಯಬಹುದು
- ಪ್ರತಿಯೊಬ್ಬ ಭಕ್ತನಿಗೂ 7 ಸೆಕೆಂಡ್ ದರ್ಶನ ಸಿಗುವಂತೆ ಸುಸಜ್ಜಿತ ವ್ಯವಸ್ಥೆ
ಮಂದಿರಕ್ಕೆ ಕರ್ನಾಟಕ 17000 ಕಲ್ಲು ಬಳಕೆ
ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದಿಂದ ದೊಡ್ಡಬಳ್ಳಾಪುರದಿಂದ ತರಿಸಿಕೊಳ್ಳಲಾಗಿರುವ 17 ಸಾವಿರ ಗ್ರಾನೈಟ್ ಸ್ಲಾಬ್‌ಗಳನ್ನು ಬಳಸಲಾಗುತ್ತಿದೆ. ನಿರ್ಮಾಣಕ್ಕೆ ಬಳಸುತ್ತಿರುವ ಎಲ್ಲ ಕಲ್ಲುಗಳನ್ನು ಕೋಲಾರ ಸಂಸ್ಥೆಯಿಂದ ಪರೀಕ್ಷಿಸಲಾಗಿದೆ.