
ಆಗ್ರಾ/ಪುಣೆ (ಮೇ 5): ಆಗ್ರಾದ ನಾಗ್ಲಾ ಪಡಿ ಎಂಬ ಪ್ರದೇಶದ ಕಿರಿದಾದ ಗಲ್ಲಿಗಳಲ್ಲಿ, 79 ವರ್ಷದ ಹಣ್ಣು ಹಣ್ಣು ಮುದಿ ಜೀವವೊಂದರ ಕಥೆ ಇಂದು ಇಡೀ ದೇಶದ ಕಣ್ಣಾಲಿಗಳನ್ನು ತೇವಗೊಳಿಸಿದೆ. ಒಂದು ಕಾಲದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (NDA) ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದೆ ಎಂದು ಹೇಳಿಕೊಳ್ಳುವ ಡಾ. ಸಂತೋಷ್ ಗೋಯಲ್ ಅವರ ಜೀವನ, ಅಂದಿನ ಜ್ಞಾನ ಮತ್ತು ಇಂದಿನ ಬಡತನದ ನಡುವಿನ ಕಟು ವಾಸ್ತವಕ್ಕೆ ಸಾಕ್ಷಿಯಾಗಿದೆ. ಜಿಎಸ್‌ಟಿ ಹೆಚ್ಚುವರಿ ಕಮಿಷನರ್ ಅಜಯ್ ಮಿಶ್ರಾ ಅವರು ಚಿತ್ರೀಕರಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ದೃಷ್ಟಿಹೀನರಾಗಿರುವ, ಕೈಯಲ್ಲಿ ವಾಕಿಂಗ್ ಸ್ಟಿಕ್ ಹಿಡಿದು ನಿಂತಿರುವ ಡಾ. ಗೋಯಲ್ ಅವರು ಆ ವಿಡಿಯೋದಲ್ಲಿ ಅತ್ಯಂತ ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ತಮ್ಮ ಶೈಕ್ಷಣಿಕ ಪ್ರಯಾಣವನ್ನು ವಿವರಿಸಿದ್ದಾರೆ.
1971 ರಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದ ಗೋಯೆಲ್, ಪುಣೆಯ ಖಡಕ್ವಾಸ್ಲಾದಲ್ಲಿರುವ ಎನ್‌ಡಿಎ (NDA) ಸೇರಿ ಅಲ್ಲಿ ಮೂರು ವರ್ಷಗಳ ಕಾಲ ಬೋಧನೆ ಮಾಡಿದ್ದಾರೆ. ತಾವು ಪಾಠ ಮಾಡಿದ ವಿದ್ಯಾರ್ಥಿಗಳು ಇಂದು ಭಾರತೀಯ ಸೇನೆಯಲ್ಲಿ ಉನ್ನತ ಅಧಿಕಾರಿಗಳಾಗಿದ್ದಾರೆ ಎಂದು ಅವರು ಹೆಮ್ಮೆಯಿಂದ ಸ್ಮರಿಸಿಕೊಂಡಿದ್ದಾರೆ.
ಕೇವಲ ಅವರ ಮಾತುಗಳಲ್ಲದೆ, ಇಂಗ್ಲಿಷ್ ಸಾಹಿತ್ಯದ ಮೇಲಿನ ಅವರ ಪ್ರಭುತ್ವ ಎಲ್ಲರನ್ನೂ ಬೆರಗುಗೊಳಿಸಿದೆ. ಶೇಕ್ಸ್‌ಪಿಯರ್‌ನ ಕೃತಿಗಳು ಮತ್ತು ಸಂಕೀರ್ಣ ವ್ಯಾಕರಣದ ಬಗ್ಗೆ ಅವರು ಬಹಳ ಸುಲಭವಾಗಿ ಮಾತನಾಡುತ್ತಾರೆ. ಮತ್ತೊಂದು ವಿಡಿಯೋದಲ್ಲಿ, ದಾರಿಹೋಕರು ನೀಡಿದ ಅಲ್ಪಸ್ವಲ್ಪ ಹಣವನ್ನು ಕೈಯಲ್ಲಿ ಹಿಡಿದುಕೊಂಡೇ, ದೇವಸ್ಥಾನದ ಬಳಿ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಿರುವುದು ಕಂಡುಬಂದಿದೆ.
ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ, ಇಂತಹ ಮೇಧಾವಿ ವ್ಯಕ್ತಿ ಬೀದಿಯಲ್ಲಿ ಬದುಕುವಂತಾಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ಮಧ್ಯಪ್ರವೇಶಿಸುವಂತೆ ಭಾರತೀಯ ಸೇನೆಯನ್ನು ಟ್ಯಾಗ್ ಮಾಡಿ ಒತ್ತಾಯಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ 'ಶತ್ರುಜೀತ್ ಬ್ರಿಗೇಡ್'ನ ಸೇನಾ ಸಿಬ್ಬಂದಿ ಮೇ 4, 2026 ರಂದು ನಾಗ್ಲಾ ಪಡಿಗೆ ತಲುಪಿ ಡಾ. ಗೋಯಲ್ ಅವರನ್ನು ಪತ್ತೆಹಚ್ಚಿದರು. ಅವರನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸಿದ ನಂತರ, ವೈದ್ಯಕೀಯ ತಪಾಸಣೆಗಾಗಿ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಎನ್‌ಡಿಎನಲ್ಲಿ ಸೇವೆ ಸಲ್ಲಿಸಿದ ಬಗ್ಗೆ ಸೇನೆಯು ಈಗ ಅಧಿಕೃತ ಪರಿಶೀಲನೆ ನಡೆಸುತ್ತಿದೆ.
ಸೇವೆಯಲ್ಲಿದ್ದಾಗ ದೃಷ್ಟಿ ದೋಷ ಕಾಣಿಸಿಕೊಂಡ ಕಾರಣ, ವೈದ್ಯಕೀಯ ಕಾರಣಗಳ ಮೇಲೆ ಅವರು ಅವಧಿಗೂ ಮುನ್ನವೇ ವೃತ್ತಿಯಿಂದ ಹೊರಬರಬೇಕಾಯಿತು. "ಒಂದು ವೇಳೆ ನಾನು 15 ವರ್ಷಗಳ ಸೇವೆಯನ್ನು ಪೂರೈಸಿದ್ದರೆ, ಇಂದು ನನಗೆ 70 ರಿಂದ 80 ಸಾವಿರ ರೂಪಾಯಿ ಪೆನ್ಷನ್ ಬರುತ್ತಿತ್ತು" ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಈ ಆರ್ಥಿಕ ಭದ್ರತೆಯ ಕೊರತೆಯೇ ಅವರನ್ನು ದಶಕಗಳ ಕಾಲ ಸಂಕಷ್ಟಕ್ಕೆ ತಳ್ಳಿದೆ. ಸ್ಥಳೀಯರ ಪ್ರಕಾರ, ಡಾ. ಗೋಯಲ್ ಅವರು ಅತ್ಯಂತ ಸ್ವಾಭಿಮಾನಿ ವ್ಯಕ್ತಿ. ದೇವಸ್ಥಾನದ ಆವರಣದಲ್ಲೇ ವಾಸಿಸುತ್ತಾ, ಯಾರಾದರೂ ಆಶ್ರಯ ನೀಡಿದರೆ ಅಲ್ಲಿ ಉಳಿದುಕೊಳ್ಳುತ್ತಿದ್ದರು. ಎಂತಹ ಬಡತನದಲ್ಲೂ ಅವರು ತಮ್ಮ ಜ್ಞಾನವನ್ನು ಹಂಚುವುದನ್ನು ನಿಲ್ಲಿಸಿರಲಿಲ್ಲ. "ಯಾರನ್ನೂ ಹಿಂದೆ ಬಿಡುವುದಿಲ್ಲ" (Leaving no one behind) ಎಂಬ ಸೇನೆಯ ತತ್ವವನ್ನು ಎತ್ತಿ ಹಿಡಿದ ಈ ಕ್ರಮಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೋಶಿಯಲ್ ಮೀಡಿಯಾ ಶಕ್ತಿ ಹೇಗೆ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಗಂಟೆಗಳ ಅವಧಿಯಲ್ಲಿ ಬದಲಾವಣೆ ತರಬಲ್ಲದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ