ಪ್ರಶ್ನೆಗಾಗಿ ಹಣ ಪ್ರಕರಣದಲ್ಲಿ ಲೋಕಸಭಾ ಸ್ಪೀಕರ್ ಕಠಿಣ ನಿರ್ಧಾರ ತಳೆದಿದ್ದು, ಲೋಕಸಭೆ ಸಂಸೆಯಾಗಿದ್ದ ಟಿಎಂಸಿ ಮಹುವಾ ಮೊಯಿತ್ರಾ ಅವರ ಸದಸ್ಯತ್ವವನ್ನು ರದ್ದು ಮಾಡುವ ತೀರ್ಮಾನ ಮಾಡಿದ್ದಾರೆ.
ನವದೆಹಲಿ (ಡಿ.8): ಮಹುವಾ ಮೋಯಿತ್ರ ಲೋಕಸಭಾ ಸದಸ್ಯತ್ವ ರದ್ದಿನ ನಿರ್ಣಯ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಇದರಿಂದಾಗಿ ತೃಣಮೂಲ ಕಾಂಗ್ರೆಸ್ ಸಂಸದೆ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಮಹುವಾ ಮೊಯಿತ್ರಾ ಸದಸ್ಯತ್ವ ರದ್ದು ನಿರ್ಣಯ ಬಹುಮತದಿಂದ ಅಂಗೀಕಾರಗೊಂಡಿದೆ. ಇದರ ಬೆನ್ನಲ್ಲಿಯೇ ಲೋಕಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ಆಕ್ರಮಣಕಾರಿಯಾಗಿ ಮಹುವಾ ಮೊಯಿತ್ರಾ ಭಾಷಣ ಮಾಡುತ್ತಿದ್ದರು. ಇದಕ್ಕಾಗಿ ಹಣ ಪಡೆದಿರುವ ಆರೋಪ ಇವರ ಮೇಲೆ ಬಂದಿತ್ತು. ಹೀರಾನಂದನಿ ಕಂಪನಿಯ ದರ್ಶನ್ ಹೀರಾನಂದನಿಗೆ ಲೋಕಸಭೆಯ ಲಾಗಿನ್ ವಿವರ ನೀಡಿ ಸಂಕಷ್ಟಕ್ಕೆ ತುತ್ತಾಗಿದ್ದರು.ಸದಸ್ಯತ್ವ ರದ್ದಿನ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ಮಹುವಾ ಮೊಯಿತ್ರಾ, ನನಗೆ 49 ವರ್ಷ, ನಾನು ಮುಂದಿನ 30 ವರ್ಷಗಳ ಕಾಲ ಸಂಸತ್ತಿನ ಒಳಗೆ, ಸಂಸತ್ತಿನ ಹೊರಗೆ ನಿಮ್ಮೊಂದಿಗೆ ಹೋರಾಡುತ್ತೇನೆ. ಸದಸ್ಯತ್ವ ರದ್ದಿನ ನಿರ್ಣಯ ಅಂಗೀಕರಿಸಿದ ಬಳಿಕ ಸಂಸತ್ತಿನ ಹೊರಗಡೆ ಬಂದು ಏರಿದ ಧ್ವನಿಯಲ್ಲಿ ಮಹುವಾ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಶ್ನೆಗಾಗಿ ನಗದು ವಿಷಯದಲ್ಲಿ ನೈತಿಕ ಸಮಿತಿಯ ಶಿಫಾರಸನ್ನು ಲೋಕಸಭೆ ಅಂಗೀಕರಿಸಿತು. ಇದಕ್ಕೂ ಮೊದಲು, 'ಅನೈತಿಕ ನಡವಳಿಕೆ'ಗಾಗಿ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಲಾಗುತ್ತಿದೆ ಎಂದು ಕೂಗಿದ ವಿರೋಧ ಪಕ್ಷದ ಸದಸ್ಯರು ಲೋಕಸಭೆಯಿಂದ ಹೊರನಡೆದಿದ್ದರು.
ಎಥಿಕ್ಸ್ ಕಮಿಟಿಗೆ ಸಂಸದ ಸ್ಥಾನದಿಂದ ತೆಗೆದುಹಾಕುವ ಅಧಿಕಾರವಿಲ್ಲ. ಇದು ಬಿಜೆಪಿಯ ಅಂತ್ಯದ ಆರಂಭ. ನನ್ನ ಬಾಯಿ ಮುಚ್ಚಿಸುವ ಮೂಲಕ ಏನು ಮಾಡಲು ಸಾಧ್ಯವಿಲ್ಲ. ನನ್ನ ಬಾಯಿ ಮುಚ್ಚಿಸಿ ಅದಾನಿ ಸಮಸ್ಯೆಯನ್ನು ಮರೆಸಬಹುದು ಎಂದು ಈ ಮೋದಿ ಸರ್ಕಾರ ಭಾವಿಸಿರಬಹುದು. ನಿಜವಾಗಿ ಸಹ ಅದು ಸಾಧ್ಯವಿಲ್ಲದ ಕೆಲಸ. ನಿಮ್ಮ ತರಾತುರಿ ನಿರ್ಧಾರ ನಿಮಗೆ ಅದಾನಿ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ. ಒಂಟಿ ಮಹಿಳಾ ಸಂಸದೆಯ ಬಾಯಿ ಮುಚ್ಚಿಸಲು ನೀವು ಎಷ್ಟು ಕಾಲ ಕಿರುಕುಳ ನೀಡುತ್ತೀರಿ ನೋಡೋಣ ಎಂದು ಲೋಕಸಭೆಯ ಎದುರು ಸವಾಲೆಸೆದಿದ್ದಾರೆ.
ಸಂಸದೆ ಮಹುವಾ ಮೊಯಿತ್ರಾ ಲೋಕಸಭೆ ಸದಸ್ಯತ್ವ ರದ್ದು, ಶಿಸ್ತು ಸಮಿತಿ ಶಿಫಾರಸು ಅಂಗೀಕಾರ!
ಸದನದಲ್ಲಿ ಆಗಿದ್ದೇನು?: ವರದಿಯ ಚರ್ಚೆಗೆ ಲೋಕಸಭೆ ಸ್ಪೀಕರ್ ಅರ್ಧ ಗಂಟೆ ಕಾಲಾವಕಾಶ ನೀಡಿದರು. ನಿಯಮ 316ರ ಅಡಿಯಲ್ಲಿ ವರದಿಯನ್ನು ಚರ್ಚಿಸಲು ಅರ್ಧ ಗಂಟೆ ಕಾಲಾವಕಾಶ ನೀಡಿದ್ದೇನೆ ಎಂದು ಓಂ ಬಿರ್ಲಾ ಹೇಳಿದರು. ಇದಾದ ನಂತರ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಕೂಡ ಅದನ್ನು ಓದಲು 3 ದಿನಗಳ ಸಮಯ ಕೇಳಿದ್ದರು. ಟಿಎಂಸಿ ಸಂಸದರ ನೇತೃತ್ವದಲ್ಲಿ ಪ್ರತಿಪಕ್ಷಗಳು ಸದನದಲ್ಲಿ ಮೋದಿ ಧಿಕ್ಕಾರದ ಘೋಷಣೆಗಳನ್ನು ಕೂಗಿದವು. ಪ್ರತಿಪಕ್ಷಗಳ ಗದ್ದಲದ ನಡುವೆ ಸದನದ ಕಲಾಪವನ್ನು 2 ಗಂಟೆಗೆ ಮುಂದೂಡಲಾಯಿತು. ಮತ್ತೊಂದೆಡೆ, ಸದನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಶಶಿ ತರೂರ್, ಇದು ನ್ಯಾಯಕ್ಕೆ ಮಾಡುತ್ತಿರುವ ಅವಮಾನ ಎಂದು ಹೇಳಿದ್ದರು. ಈ ವರದಿ ಅಪೂರ್ಣವಾಗಿದೆ. ಯಾರೋ ಎರಡೂವರೆ ನಿಮಿಷದಲ್ಲಿ ಸಿದ್ಧಪಡಿಸಿದಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಆರೋಪಿಗಳನ್ನು ಪ್ರಶ್ನಿಸುವ ಪ್ರಯತ್ನ ಮಾಡಿಲ್ಲ. ಸಂಸದರ ಅಮಾನತಿಗೆ ನೇರವಾಗಿ ಹೋಗುವುದು ನಿಜಕ್ಕೂ ಅವಮಾನಕರ ಎಂದು ಹೇಳಿದ್ದಾರೆ.
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಹೆಚ್ಚಿದ ಸಂಕಷ್ಟ, ಉಚ್ಚಾಟನೆಗೆ ನೈತಿಕ ಸಮಿತಿ ಶಿಫಾರಸು!