ಎಸ್ಕಾಂ ಖಾಸಗೀಕರಣ: ಕೇಂದ್ರದ ಪ್ರಸ್ತಾವ ತಿರಸ್ಕರಿಸಲು ರಾಜ್ಯ ಇಂಧನ ಇಲಾಖೆ ನಿರ್ಧಾರ!

By Kannadaprabha News  |  First Published Oct 4, 2020, 8:03 AM IST

ಎಸ್ಕಾಂ ಖಾಸಗೀಕರಣ: ಕೇಂದ್ರದ ಪ್ರಸ್ತಾವ ತಿರಸ್ಕಾರ| ಬೆಸ್ಕಾಂ, ಚೆಸ್ಕಾಂ, ಜೆಸ್ಕಾಂ ಖಾಸ​ಗೀ​ಕ​ರ​ಣಕ್ಕೆ ಪ್ರಸ್ತಾವ ಕಳಿ​ಸಿದ್ದ ಕೇಂದ್ರ| ಪ್ರಸ್ತಾವನೆ ಒಪ್ಪದಿರಲು ಇಂಧನ ಇಲಾಖೆ ನಿರ್ಧಾರ| ಸಿಎಂ ಸಮ್ಮತಿ ಪಡೆದು ಕೇಂದ್ರಕ್ಕೆ ಮಾಹಿತಿ| ಬೇಡ ಖಾಸಗೀಕರಣ


ಬೆಂಗಳೂರು(ಅ.04): ರಾಜ್ಯದ ಮೂರು ಪ್ರಮುಖ ವಿದ್ಯುತ್‌ ಸರಬರಾಜು ಕಂಪೆನಿಗಳನ್ನು (ಎಸ್ಕಾಂ) ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಕಳಹಿಸಿರುವ ಪ್ರಸ್ತಾವನೆಯನ್ನು ತಳ್ಳಿ ಹಾಕಲು ಇಂಧನ ಇಲಾಖೆ ನಿರ್ಧರಿಸಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಅನುಮೋದನೆ ಪಡೆದು ಸೋಮವಾರ ಕೇಂದ್ರಕ್ಕೆ ತನ್ನ ಅಂತಿಮ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಿದೆ ಎಂದು ತಿಳಿದುಬಂದಿದೆ.

ರಾಜ್ಯದ ಬೆಸ್ಕಾಂ, ಚೆಸ್ಕಾಂ ಹಾಗೂ ಗುಲ್ಬರ್ಗ ವಿದ್ಯುತ್‌ ಪೂರೈಕೆ ಕಂಪೆನಿಗಳನ್ನು ಖಾಸಗೀಕರಣಗೊಳಿಸಲು ಟೆಂಡರ್‌ ಬಿಡ್‌ನ ಕರಡು ಪ್ರತಿಯನ್ನು ಕೇಂದ್ರ ಸರ್ಕಾರ ಕಳುಹಿಸಿದೆ. ಒಂದು ವೇಳೆ ರಾಜ್ಯ ಸರ್ಕಾರ ಬೆಂಗಳೂರು ವಿದ್ಯುತ್‌ ಸರಬರಾಜು ನಿಗಮ (ಬೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಚೆಸ್ಕಾಂ) ಹಾಗೂ ಗುಲ್ಬರ್ಗಾ ವಿದ್ಯುತ್‌ ಸರಬರಾಜು ನಿಗಮಗಳ (ಜೆ​ಸ್ಕಾಂ) ವಿದ್ಯುತ್‌ ಪೂರೈಕೆಯನ್ನು ಖಾಸಗಿಗೆ ವಹಿಸಲು ಒಪ್ಪಿಗೆ ನೀಡಿದರೆ ರಾಜ್ಯದ 19 ಜಿಲ್ಲೆಗಳ ವ್ಯಾಪ್ತಿಯ ವಿದ್ಯುತ್‌ ಪೂರೈಕೆ ವ್ಯವಸ್ಥೆ ಖಾಸಗಿ ಕೈಗಳಿಗೆ ಹೋಗಲಿದೆ.

Tap to resize

Latest Videos

ಈ ಬಗ್ಗೆ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಅವರು ಎಲ್ಲಾ ಎಸ್ಕಾಂಗಳ ಅಭಿಪ್ರಾಯ ಪಡೆದಿದ್ದಾರೆ. ಈ ವೇಳೆ ಪ್ರಸ್ತುತ ಸ್ಥಿತಿಯಲ್ಲಿ ಖಾಸಗೀಕರಣದ ಅಗತ್ಯವಿಲ್ಲ ಎಂದು ಎಸ್ಕಾಂಗಳು ಸ್ಪಷ್ಟಪಡಿಸಿವೆ. ಹೀಗಾಗಿ ಇಂಧನ ಇಲಾಖೆಯೂ ಸದ್ಯಕ್ಕೆ ರಾಜ್ಯದಲ್ಲಿನ ಎಸ್ಕಾಂಗಳಿಗೆ ಖಾಸಗೀಕರಣದ ಅಗತ್ಯವಿಲ್ಲ. ಮೊದಲು ಕೇಂದ್ರಾಡಳಿತ ಪ್ರದೇಶದಲ್ಲಿ ಖಾಸಗೀಕರಣ ಅನುಷ್ಠಾನಗೊಳಿಸಿ. ಅಲ್ಲಿ ಯಶಸ್ವಿಯಾದರೆ ಬಳಿಕ ಪರಿಶೀಲನೆ ನಡೆಸಬಹುದು ಎಂದು ತನ್ನ ಅಭಿಪ್ರಾಯ ತಿಳಿಸಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಕೆಲ ಎಸ್ಕಾಂಗಳನ್ನು ಖಾಸಗೀಕರಣಗೊಳಿಸುವ ಕುರಿತು ಟೆಂಡರ್‌ನ ಕರಡನ್ನು ಕೇಂದ್ರ ಸರ್ಕಾರ ಕಳುಹಿಸಿತ್ತು. ಈ ಬಗ್ಗೆ ಇಲಾಖೆಯಲ್ಲಿ ಹಲವು ಹಂತದ ಸಭೆಗಳನ್ನು ನಡೆಸಿ ಚರ್ಚಿಸಿದ್ದು ಸದ್ಯಕ್ಕೆ ಖಾಸಗೀಕರಣದ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರ ಅನುಮತಿಯೊಂದಿಗೆ ಸೋಮವಾರ ಕೇಂದ್ರಕ್ಕೆ ಪತ್ರ ಬರೆಯುತ್ತೇವೆ.

- ಮಹೇಂದ್ರ ಜೈನ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ.

ಪೇಪರ್‌ ಕಟಿಂಗ್‌

ಎಸ್ಕಾಂಗಳನ್ನು ಖಾಸಗಿ ತೆಕ್ಕೆಗೆ ನೀಡಲು ಕೇಂದ್ರ ಸಜ್ಜಾಗಿದೆ ಎಂದು ಸೆ.24ರಂದು ಕನ್ನಡಪ್ರಭ ವರದಿ ಮಾಡಿತ್ತು.

click me!