ಉದ್ದಂಪುರದಲ್ಲಿ ಸೇನೆ ಉಗ್ರರ ಮಧ್ಯೆ ಗುಂಡಿನ ಚಕಮಕಿ: ಯೋಧ ಅಲಿ ಶೇಕ್ ಹುತಾತ್ಮ

Published : Apr 24, 2025, 11:37 AM ISTUpdated : Apr 24, 2025, 02:32 PM IST
 ಉದ್ದಂಪುರದಲ್ಲಿ ಸೇನೆ ಉಗ್ರರ ಮಧ್ಯೆ ಗುಂಡಿನ ಚಕಮಕಿ:  ಯೋಧ ಅಲಿ ಶೇಕ್ ಹುತಾತ್ಮ

ಸಾರಾಂಶ

ಪಹಲ್ಗಾಮ್ ದಾಳಿಯ ನಂತರ ಉದ್ದಂಪುರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆಯ ಓರ್ವ ಯೋಧ ಹುತಾತ್ಮರಾಗಿದ್ದಾರೆ. ದುಡು-ಬಸಂತ್‌ಗಢ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಶ್ರೀನಗರ: 26 ಜನರನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯ ನಂತರ ಉಗ್ರರ ಹೆಡೆಮುರಿಕಟ್ಟಲು ಬೇಟೆಗಿಳಿದಿರುವ ಭಾರತೀಯ ಸೇನೆ ಜಮ್ಮುಕಾಶ್ಮೀರದ ಉದ್ದಂಪುರದಲ್ಲಿ  ಕಾರ್ಯಾಚರಣೆಗಿಳಿದಿದೆ. ದುರಾದೃಷ್ಟವಶಾತ್ ಇಲ್ಲಿ ಅಡಗಿಕೊಂಡಿರುವ ಉಗ್ರರು ಹಾಗೂ ಭದ್ರತಾಪಡೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಸೇನೆಯ ಅಧಿಕೃತ ಮೂಲಗಳ ಪ್ರಕಾರ, ಉದ್ದಂಪುರದ  ದುಡು-ಬಸಂತ್‌ಗಢ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಅಪಾಯಕಾರಿ ಭೂಪ್ರದೇಶ ಮತ್ತು ದಟ್ಟವಾದ ಕಾಡಿನ ಹೊದಿಕೆಗೆ ಹೆಸರುವಾಸಿಯಾದ ಈ ಪ್ರದೇಶವು ಭಾರತೀಯ ಸೇನೆಯ 9 ಕಾರ್ಪ್ಸ್ ವ್ಯಾಪ್ತಿಗೆ ಬರುತ್ತದೆ ಮತ್ತು 16 ಕಾರ್ಪ್ಸ್‌ನ ಕಾರ್ಯಾಚರಣೆಯ ಗಡಿಗೆ ಸಮೀಪದಲ್ಲಿದೆ. 

ಉದ್ದಂಪುರದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಜೀವತೆತ್ತ ಯೋಧನನ್ನು ಝಂತು ಅಲಿ ಶೇಕ್‌ ಎಂದು ಗುರುತಿಸಲಾಗಿದೆ. ಸೇನೆಯಸ 16 ಕಾರ್ಪ್ಸ್‌ನ ಅಧಿಕೃತ ಟ್ವಿಟ್ಟರ್ ಪೇಜ್ ಯೋಧ ಝಂತು ಅಲಿ ಶೇಕ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಅವರ ಅದಮ್ಯ ಧೈರ್ಯ ಮತ್ತು ಅವರ ತಂಡದ ಶೌರ್ಯವನ್ನು ಎಂದಿಗೂ ಮರೆಯಲಾಗುವುದಿಲ್ಲ. ಈ ದುಃಖದ ಕ್ಷಣದಲ್ಲಿ ನಾವು ಅವರ ಕುಟುಂಬದೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ.


 

ಭಾರತೀಯ ಸೇನಾ ಅಧಿಕಾರಿಗಳ ಪ್ರಕಾರ,  ಇಲ್ಲಿ ಉಗ್ರರು ಅಡಗಿರುವ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ನಂತರ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಪ್ರಾಥಮಿಕ ಮಾಹಿತಿಯ ಪ್ರಕಾರ ಕನಿಷ್ಠ ಇಬ್ಬರು ಉಗ್ರರು ಈ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಸವಾಲಿನ ಸ್ಥಳಾಕೃತಿ ಮತ್ತು ದಟ್ಟ ಕಾಡನ್ನು ಹೊಂದಿರುವುದರಿಂದ ಈ ಪ್ರದೇಶವು  ಭಾರತೀಯ ಸೇನೆಗೆ ಸವಾಲಿನ ಸ್ಥಳವಾಗಿದೆ. ಇಲ್ಲಿ ಉಗ್ರರು ಹೊಂಚು ಹಾಕಿ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಇಲ್ಲಿ ಭದ್ರತಾ ಪಡೆಗಳು ಎಚ್ಚರಿಕೆಯಿಂದ ಮುಂದುವರಿಯುತ್ತಿವೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ದಟ್ಟವಾದ ಕಾಡಿನಿಂದ ಆವೃತವಾದ ಎತ್ತರದ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆಯುತ್ತಿದೆ. ಈ ಪ್ರದೇಶವು ಹಲವಾರು ನೈಸರ್ಗಿಕ ಗುಹೆಗಳು ಮತ್ತು ಅಡಗುತಾಣಗಳನ್ನು ಹೊಂದಿದೆ.  ಇದನ್ನು ಭಯೋತ್ಪಾದಕರು ಭದ್ರತಾ ಪಡೆಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಹೆಚ್ಚಾಗಿ ಬಳಸುತ್ತಿದ್ದರು ಎಂದು ಸೇನೆ ಮಾಹಿತಿ ನೀಡಿದೆ. ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಬಲಿ ಪಡೆದ ಭಯೋತ್ಪಾದಕ ದಾಳಿ ನಡೆದ ಎರಡು ದಿನಗಳ ನಂತರ ಈ ಸೇನಾ ಕಾರ್ಯಾಚರಣೆ ನಡೆಯುತ್ತಿದೆ.

ಪಹಲ್ಗಾಮ್ ದಾಳಿಯ ನಂತರ ಕಣಿವೆಯಲ್ಲಿ ಸತತ ಎನ್‌ಕೌಂಟರ್

ಮಂಗಳವಾರ 26 ಜನರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ನಂತರ ಬುಧವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಅಧಿಕಾರಿಗಳ ಪ್ರಕಾರ, ಕುಲ್ಗಾಮ್ ಜಿಲ್ಲೆಯ ತಂಗ್ಮಾರ್ಗ್ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಮಾಹಿತಿ ಬಂದ ನಂತರ ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದವು. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ. 

ಪಹಲ್ಗಾಮ್ ಭಯೋತ್ಪಾದಕ ದಾಳಿ
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನ ಪ್ರವಾಸಿಗರು ಸಾವನ್ನಪ್ಪಿದ್ದಾರೆ. 2019 ರಲ್ಲಿ ಕೇಂದ್ರ ಸರ್ಕಾರ  370 ನೇ ವಿಧಿಯನ್ನು ರದ್ದುಪಡಿಸಿದ ನಂತರ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿಗಳಲ್ಲಿ ಇದು ಒಂದಾಗಿದೆ.

ಲಾಡೆನ್‌ಗೆ ಆದ ಗತಿಯೇ ಪಾಕ್ ಸೇನಾ ಮುಖ್ಯಸ್ಥನಿಗೂ ಆಗಬೇಕು: 

ನವದೆಹಲಿ: ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಬಲಿ ಪಡೆದ ಭಯೋತ್ಪಾದಕ ದಾಳಿಯಿಂದ ಪಾಕಿಸ್ತಾನದ ಬಣ್ಣ ಜಾಗತಿಕ ಮಟ್ಟದಲ್ಲಿ ಬಯಲಾಗುತ್ತಿದೆ. ಘಟನೆಗೆ ಪ್ರಪಂಚದ ಎಲ್ಲಾ ಪ್ರಮುಖ ರಾಷ್ಟ್ರಗಳ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ಅಮರಿಕಾದ ಅಧಿಕಾರಿಯೊಬ್ಬರು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಅಲ್‌ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿದ್ದಾರೆ. 
ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್, ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ಗೆ ಹೋಲಿಸಿದ್ದಾರೆ ಮತ್ತು 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇರುವ ಬಗ್ಗೆ ಅವರು ಟೀಕೆ ಮಾಡಿದ್ದಾರೆ.  ಉಗ್ರ ಒಸಾಮಾ ಬಿನ್ ಲಾಡೆನ್ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನಡುವಿನ ವ್ಯತ್ಯಾಸವೆಂದರೆ ಒಸಾಮಾ ಬಿನ್ ಲಾಡೆನ್ ಗುಹೆಯಲ್ಲಿ ವಾಸಿಸುತ್ತಿದ್ದ ಮತ್ತು ಅಸಿಮ್ ಮುನೀರ್ ಅರಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಅದನ್ನು ಮೀರಿ, ಇಬ್ಬರೂ ಒಂದೇ ಆಗಿದ್ದಾರೆ ಮತ್ತು ಅವರ ಅಂತ್ಯವೂ ಒಂದೇ ಆಗಿರಬೇಕು ಎಂದು ಅಮೆರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಸಹೋದ್ಯೋಗಿಯಾಗಿರುವ ಮೈಕೆಲ್ ರೂಬಿನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 


ಇದನ್ನೂ ಓದಿ:

ಇದನ್ನೂ ಓದಿ: 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್