ಆನೆಗೆ ಢಿಕ್ಕಿ ಹೊಡೆದ ಮಹಿಳಾ ಟೀಚರ್‌, ಸ್ಕೂಟಿ ಹೆಡ್‌ಲೈಟ್‌ನಲ್ಲಿ ಸಿಲುಕಿ ಮುರಿದು ಚೂರಾಯ್ತು ದಂತ!

Published : May 22, 2026, 02:27 PM IST
elephant tusk

ಸಾರಾಂಶ

ಉತ್ತರಾಖಂಡದ ಖತಿಮಾದಲ್ಲಿ, ಶಾಲೆಗೆ ಹೊರಟಿದ್ದ ಶಿಕ್ಷಕಿಯ ಸ್ಕೂಟಿಗೆ ಕಾಡಾನೆಯೊಂದು ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಆನೆಯ ದಂತವು ಸ್ಕೂಟಿಯ ಹೆಡ್‌ಲೈಟ್‌ನಲ್ಲಿ ಸಿಲುಕಿ ಮುರಿದುಬಿದ್ದಿದ್ದು, ಶಿಕ್ಷಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅರಣ್ಯ ಇಲಾಖೆಯು ಇದೀಗ ಗಾಯಗೊಂಡ ಆನೆಗಾಗಿ ಹುಡುಕಾಟ ನಡೆಸುತ್ತಿದೆ.

ಖತಿಮಾ, ಉತ್ತರಾಖಂಡ (ಮೇ.22): ಶಾಲಾ ಶಿಕ್ಷಕಿಯೊಬ್ಬರ ಸ್ಕೂಟಿಗೆ ಕಾಡಾನೆ ಡಿಕ್ಕಿ ಹೊಡೆದ ಪರಿಣಾಮ, ಆನೆಯ ದಂತವು ಸ್ಕೂಟಿಯ ಹೆಡ್‌ಲೈಟ್‌ನಲ್ಲಿ ಸಿಲುಕಿ ಮೂರು ತುಂಡುಗಳಾಗಿ ಮುರಿದು ಬಿದ್ದಿರುವ ಅತ್ಯಂತ ವಿಚಿತ್ರ ಹಾಗೂ ಆಘಾತಕಾರಿ ಘಟನೆಯೊಂದು ಉತ್ತರಾಖಂಡದ ಖತಿಮಾದಲ್ಲಿ ನಡೆದಿದೆ. ಆನೆಯ ಭೀಕರ ದಾಳಿಯ ನಡುವೆಯೂ ಮಹಿಳಾ ಶಿಕ್ಷಕಿ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಮಹಿಳಾ ಶಿಕ್ಷಕಿಯನ್ನು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ನಿಕಿತಾ ಕಾಪ್ಡಿ ಎಂದು ಗುರುತಿಸಲಾಗಿದೆ. ಪ್ರಜ್ಞೆ ತಪ್ಪಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ನಡೆದಿದ್ದೇನು?: ಬೆಳಗ್ಗೆ 6:45 ರ ಸುಮಾರಿಗೆ ಘಟನೆ

ವರದಿಗಳ ಪ್ರಕಾರ, ನಿಕಿತಾ ಕಾಪ್ಡಿ ಅವರು ಪ್ರತಿದಿನದಂತೆ ಬೆಳಗ್ಗೆ ಸುಮಾರು 6.45ರ ವೇಳೆಗೆ ತಮ್ಮ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದರು. ಖತಿಮಾದ ಚಕರ್ಪುರ ಬನಖಂಡಿ ದೇವಸ್ಥಾನದ ಸಮೀಪದ ರಸ್ತೆಯಲ್ಲಿ ಅವರು ಚಲಿಸುತ್ತಿದ್ದಾಗ, ಹತ್ತಿರದ ದಟ್ಟ ಅರಣ್ಯದಿಂದ ದಿಢೀರನೆ ಆನೆಯೊಂದು ರಸ್ತೆ ದಾಟಲು ಮುನ್ನುಗ್ಗಿ ಬಂದಿದೆ. ಈ ವೇಳೆ ನಿಯಂತ್ರಣ ಸಿಗದೆ ನಿಕಿತಾ ಅವರ ಸ್ಕೂಟಿ ನೇರವಾಗಿ ಆನೆಗೆ ಡಿಕ್ಕಿ ಹೊಡೆದಿದೆ.

ಹೆಡ್‌ಲೈಟ್‌ನಲ್ಲಿ ಸಿಲುಕಿದ ದಂತ; ಆನೆಗೆ ಬಂದಿತ್ತು ವಿಪರೀತ ಕೋಪ

ಅಪಘಾತದ ತೀವ್ರತೆಗೆ ಸ್ಕೂಟಿಯು ಆನೆಯ ಸೊಂಡಿಲಿಗೆ ಬಡಿದಿದೆ. ಈ ಸಂದರ್ಭದಲ್ಲಿ ಆನೆಯ ಬಲವಾದ ದಂತವು ಸ್ಕೂಟಿಯ ಮುಂಭಾಗದ ಹೆಡ್‌ಲೈಟ್ ಗಾಜಿನೊಳಗೆ ಸಿಲುಕಿಕೊಂಡಿದೆ. ಇದರಿಂದ ವಿಚಲಿತಗೊಂಡು ತೀವ್ರ ಕೋಪಗೊಂಡ ಆನೆಯು ತನ್ನ ದಂತವನ್ನು ಬಿಡಿಸಿಕೊಳ್ಳಲು ಸ್ಕೂಟಿಯನ್ನು ಎರಡು-ಮೂರು ಬಾರಿ ಜೋರಾಗಿ ನೆಲಕ್ಕೆ ಅಪ್ಪಳಿಸಿದೆ. ಈ ಭೀಕರ ದೃಶ್ಯವನ್ನು ಕಂಡು ತೀವ್ರ ಭಯಭೀತರಾದ ಶಿಕ್ಷಕಿ ನಿಕಿತಾ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾರೆ.

ಆನೆ ಬಿಡಿಸಿಕೊಳ್ಳಲು ನಡೆಸಿದ ತೀವ್ರ ಕಸರತ್ತಿನಿಂದಾಗಿ ಅದರ ದಂತವು ಬುಡದಿಂದಲೇ ಮುರಿದು ಮೂರು ತುಂಡುಗಳಾಗಿದೆ. ಇದರಲ್ಲಿ ಎರಡು ದೊಡ್ಡ ದಂತದ ತುಂಡುಗಳು ರಸ್ತೆಯ ಮೇಲೆಯೇ ಬಿದ್ದಿರುವುದು ಪತ್ತೆಯಾಗಿದೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಅಷ್ಟೊಂದು ಸಿಟ್ಟಿನಲ್ಲಿದ್ದರೂ ಸಹ ಆನೆಯು ಪ್ರಜ್ಞೆ ತಪ್ಪಿ ಬಿದ್ದಿದ್ದ ಶಿಕ್ಷಕಿಗೆ ಯಾವುದೇ ದೈಹಿಕ ಹಾನಿ ಮಾಡದೆ, ಸ್ಕೂಟಿಯನ್ನು ಅಲ್ಲೇ ಬಿಟ್ಟು ಕಾಡಿನೊಳಗೆ ಮರಳಿ ಓಡಿಹೋಗಿದೆ.

ಶಿಕ್ಷಕಿಯ ಧೈರ್ಯಕ್ಕೆ ಶ್ಲಾಘನೆ; ಆಸ್ಪತ್ರೆಯಲ್ಲಿ ಚಿಕಿತ್ಸೆ

ನಿಕಿತಾ ಕೆಲಸ ಮಾಡುವ ಶಾಲೆಯ ಸಿಬ್ಬಂದಿ ಮತ್ತು ಸ್ಥಳೀಯರು ಅವರ ಧೈರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. "ಆನೆ ಅಷ್ಟೊಂದು ಕೋಪದಲ್ಲಿದ್ದಾಗ ಪ್ರಜ್ಞೆ ತಪ್ಪಿ ಬಿದ್ದವರ ಮೇಲೆ ಏನೂ ಬೇಕಾದರೂ ಆಗಬಹುದಿತ್ತು. ಯಾವುದೇ ಅನಾಹುತ ಸಂಭವಿಸಬಹುದಿತ್ತು. ಆದರೆ ನಿಕಿತಾ ಅದೃಷ್ಟವಶಾತ್ ಬದುಕುಳಿದಿದ್ದಾರೆ ಮತ್ತು ಆಸ್ಪತ್ರೆಯಲ್ಲಿ ಪ್ರಜ್ಞೆ ಬಂದ ಮೇಲೆಯೂ ಅವರು ಧೃತಿಗೆಟ್ಟಿಲ್ಲ" ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿಕಿತಾ ಅವರ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇನ್ನೂ ಕೆಲವು ದಿನ ಆಸ್ಪತ್ರೆಯಲ್ಲೇ ಇರಲಿದ್ದಾರೆ.

ಗಾಯಗೊಂಡ ಆನೆಗಾಗಿ ಅರಣ್ಯ ಇಲಾಖೆ ಹುಡುಕಾಟ

ವಿಷಯ ತಿಳಿಯುತ್ತಿದ್ದಂತೆ ವಲಯ ಅರಣ್ಯ ಅಧಿಕಾರಿ ಹರೀಶ್ ಸಿಂಗ್ ಬಿಷ್ಟ್ ಅವರ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ಮುರಿದು ಬಿದ್ದಿದ್ದ ದಂತದ ತುಂಡುಗಳನ್ನು ವಶಪಡಿಸಿಕೊಂಡಿದೆ. ದಂತ ಮುರಿದುಕೊಂಡಿರುವ ಕಾಡಾನೆ ತೀವ್ರ ನೋವಿನಿಂದ ಬಳಲುತ್ತಿರಬಹುದು ಅಥವಾ ಗಾಯಗೊಂಡಿರಬಹುದು ಎಂಬ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆನೆಯನ್ನು ಪತ್ತೆಹಚ್ಚಲು ಅರಣ್ಯದಾದ್ಯಂತ ವಿಶೇಷ ಹೈಟೆಕ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆನೆಯನ್ನು ಶೀಘ್ರದಲ್ಲೇ ಪತ್ತೆಹಚ್ಚಿ ಅದಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಿರುಪತಿಯ ಸಾಮಾನ್ಯ ಭಕ್ತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಟಿಟಿಡಿ
Be Alert: ಕಾಕ್ರೋಚ್​ ಜನತಾ ಪಾರ್ಟಿ ಹೆಸ್ರಲ್ಲಿ ಲಕ್ಷ ಲಕ್ಷ ಲೂಟಿ - ಲಿಂಕ್​ ಕ್ಲಿಕ್​ ಮಾಡಿದ್ರೆ ಬ್ಯಾಂಕ್​ ಖಾತೆ ದಿವಾಳಿ