Swiggy, Zomato, Zepto ಸೇವೆಗೆ ಎಲೆಕ್ಟ್ರಿಕ್ ವಾಹನ ಕಡ್ಡಾಯ -ಡೆಲಿವರಿ ಬಾಯ್ಸ್‌ಗೆ ಸರ್ಕಾರದಿಂದ ಗುಡ್‌ನ್ಯೂಸ್

Published : Aug 08, 2026, 10:21 AM IST
Zomato Delivery Boy

ಸಾರಾಂಶ

ಪ್ರಸ್ತುತ ಸ್ವಿಗ್ಗಿ, ಜೊಮ್ಯಾಟೋ ಅಂತಹ ಕಂಪನಿಗಳು ಕೇಂದ್ರ ಸರ್ಕಾರದ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿವೆ. ಆದರೆ ರಾಜ್ಯದಲ್ಲಿ ಇವುಗಳ ಮೇಲೆ ಯಾವುದೇ ಪ್ರತ್ಯೇಕ ನಿಯಂತ್ರಣ ಇರಲಿಲ್ಲ. ಈಗ ಮಹಾರಾಷ್ಟ್ರ ಸರ್ಕಾರ ಇವುಗಳನ್ನು ರಾಜ್ಯ ಸಾರಿಗೆ ನಿಯಮಗಳ ಅಡಿಯಲ್ಲಿ ತರುತ್ತಿರುವುದರಿಂದ, ಚಾಲಕರ ದೂರುಗಳು ಅಥವಾ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ಸಿಗಲಿದೆ.

ಮುಂಬೈ: ಫುಡ್ ಡೆಲಿವರಿ ಮತ್ತು ಇ-ಕಾಮರ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಡೆಲಿವರಿ ಪಾರ್ಟ್‌ನರ್‌ಗಳ ಹಿತದೃಷ್ಟಿಯಿಂದ ಮಹಾರಾಷ್ಟ್ರ ಸರ್ಕಾರ ದೊಡ್ಡ ಹೆಜ್ಜೆಯನ್ನಿಟ್ಟಿದೆ. ಇನ್ಮುಂದೆ ಸ್ವಿಗ್ಗಿ (Swiggy), ಜೊಮ್ಯಾಟೋ (Zomato) ಮತ್ತು ಝೆಪ್ಟೋ (Zepto) ಅಂತಹ ಕಂಪನಿಗಳನ್ನು ರಾಜ್ಯದ 'ಬೈಕ್ ಟ್ಯಾಕ್ಸಿ' ನಿಯಮಗಳ ವ್ಯಾಪ್ತಿಗೆ ತರಲು ಸರ್ಕಾರ ನಿರ್ಧರಿಸಿದೆ.

ಇದರಿಂದಾಗಿ ಈ ಕಂಪನಿಗಳು ತಮ್ಮ ಡೆಲಿವರಿ ಜಾಲದಲ್ಲಿ ಕೇವಲ ಎಲೆಕ್ಟ್ರಿಕ್ ವಾಹನಗಳನ್ನು (EV) ಬಳಸಬೇಕು ಮತ್ತು ಪ್ರತಿಯೊಂದು ಆರ್ಡರ್‌ನ ಹಣದಲ್ಲಿ ಶೇಕಡಾ 2 ರಷ್ಟು ಮೊತ್ತವನ್ನು 'ಚಾಲಕರ ಕಲ್ಯಾಣ ನಿಧಿ'ಗೆ ನೀಡಬೇಕಾಗುತ್ತದೆ.

ಹೊಸ ಪ್ರಸ್ತಾವನೆಯಲ್ಲಿ ಏನಿದೆ?

ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ನೇತೃತ್ವದ ಸಾರಿಗೆ ಇಲಾಖೆಯು 'ಮಹಾರಾಷ್ಟ್ರ ಬೈಕ್-ಟ್ಯಾಕ್ಸಿ ನಿಯಮಗಳು 2025'ಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಈ ಹೊಸ ನಿಯಮಗಳು ಜಾರಿಗೆ ಬಂದರೆ ಕೆಳಗಿನ ಬದಲಾವಣೆಗಳು ಉಂಟಾಗಲಿವೆ.

  • ಎಲೆಕ್ಟ್ರಿಕ್ ವಾಹನ ಕಡ್ಡಾಯ (EV Fleet): ಪರಿಸರ ಮಾಲಿನ್ಯ ತಡೆಗಟ್ಟಲು ಈ ಕಂಪನಿಗಳು ಕಡ್ಡಾಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರಬೇಕು.
  • ಚಾಲಕರ ಕಲ್ಯಾಣ ನಿಧಿ (Welfare Fund): ಪ್ರತಿ ರೈಡ್ ಅಥವಾ ಆರ್ಡರ್‌ನ ಒಟ್ಟು ದರದ ಶೇ. 2 ರಷ್ಟು ಹಣವನ್ನು ಸರ್ಕಾರ ಸ್ಥಾಪಿಸುವ ಚಾಲಕರ ಕಲ್ಯಾಣ ನಿಧಿಗೆ ಈ ಕಂಪನಿಗಳು ಪಾವತಿಸಬೇಕು. ಈ ಹಣವನ್ನು ಡೆಲಿವರಿ ಮಾಡುವವರ ಪಿಂಚಣಿ, ಅಪಘಾತ ವಿಮೆ, ಇವಿ ವಾಹನ ಖರೀದಿಸಲು ಸಾಲ ಮತ್ತು ಅವರ ಮಕ್ಕಳ ಶಿಕ್ಷಣಕ್ಕಾಗಿ ಬಳಸಲಾಗುತ್ತದೆ.
  • ಜಿಪಿಎಸ್ ಮತ್ತು ಸುರಕ್ಷತೆ: ಎಲ್ಲಾ ಡೆಲಿವರಿ ವಾಹನಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ಕಡ್ಡಾಯವಾಗಲಿದ್ದು, ಗ್ರಾಹಕರು ಮತ್ತು ಚಾಲಕರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ.
  • ಸ್ಥಳೀಯರಿಗೆ ಆದ್ಯತೆ: ಬೈಕ್ ಟ್ಯಾಕ್ಸಿ ಅಥವಾ ಡೆಲಿವರಿ ಕೆಲಸ ಮಾಡುವ ಚಾಲಕರು ಕಡ್ಡಾಯವಾಗಿ 'ವಾಸಸ್ಥಳ ಪ್ರಮಾಣಪತ್ರ' (Domicile Certificate) ಮತ್ತು ಸಾರಿಗೆ ಇಲಾಖೆ ನೀಡುವ ವಿಶೇಷ ಬ್ಯಾಡ್ಜ್ ಹೊಂದಿರಬೇಕು. ಇದು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ನೀಡಲು ಸಹಕಾರಿಯಾಗಲಿದೆ.

ಸಚಿವರ ಹೇಳಿಕೆ ಏನು?

ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಪ್ರತಾಪ್ ಸರ್ನಾಯಕ್, 15 ಕಿಲೋಮೀಟರ್‌ಗಿಂತ ಕಡಿಮೆ ದೂರದ ಸಂಚಾರಕ್ಕೆ ಬಳಸುವ ಎಲ್ಲಾ ಬೈಕ್‌ಗಳನ್ನು ಈ ನಿಯಮದ ವ್ಯಾಪ್ತಿಗೆ ತರಲಾಗುತ್ತದೆ. ಕಂಪನಿಗಳು ತಮ್ಮ ವ್ಯವಹಾರದ ಲಾಭದ ಒಂದು ಭಾಗವನ್ನು ಚಾಲಕರ ಹಿತಕ್ಕೆ ಬಳಸಬೇಕು ಎನ್ನುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.

ಪ್ರಸ್ತುತ ಸ್ವಿಗ್ಗಿ, ಜೊಮ್ಯಾಟೋ ಅಂತಹ ಕಂಪನಿಗಳು ಕೇಂದ್ರ ಸರ್ಕಾರದ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿವೆ. ಆದರೆ ರಾಜ್ಯದಲ್ಲಿ ಇವುಗಳ ಮೇಲೆ ಯಾವುದೇ ಪ್ರತ್ಯೇಕ ನಿಯಂತ್ರಣ ಇರಲಿಲ್ಲ. ಈಗ ಮಹಾರಾಷ್ಟ್ರ ಸರ್ಕಾರ ಇವುಗಳನ್ನು ರಾಜ್ಯ ಸಾರಿಗೆ ನಿಯಮಗಳ ಅಡಿಯಲ್ಲಿ ತರುತ್ತಿರುವುದರಿಂದ, ಚಾಲಕರ ದೂರುಗಳು ಅಥವಾ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ಸಿಗಲಿದೆ.

ದೆಹಲಿ ಮತ್ತು ಹರಿಯಾಣ ರಾಜ್ಯಗಳಲ್ಲೂ ಕೂಡ ಹಂತ ಹಂತವಾಗಿ ಡೆಲಿವರಿ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಬದಲಿಸಲು ಈಗಾಗಲೇ ನಿಯಮಗಳನ್ನು ರೂಪಿಸಲಾಗಿದೆ. ಆದರೆ ಚಾಲಕರ ಕಲ್ಯಾಣಕ್ಕಾಗಿ ಪ್ರತ್ಯೇಕ ನಿಧಿ ಸಂಗ್ರಹಿಸುವ ಮಹಾರಾಷ್ಟ್ರದ ಈ ಮಾದರಿ ದೇಶದಲ್ಲೇ ವಿಶೇಷ ಎನ್ನಲಾಗಿದೆ. ಈ ತಿದ್ದುಪಡಿ ಪ್ರಸ್ತಾವನೆಯನ್ನು ಸದ್ಯ ಕಾನೂನು ಇಲಾಖೆಯ ಪರಿಶೀಲನೆಗೆ ಕಳುಹಿಸಲಾಗಿದ್ದು ಶೀಘ್ರದಲ್ಲೇ ಅಧಿಕೃತವಾಗಿ ಜಾರಿಗೆ ಬರುವ ನಿರೀಕ್ಷೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇ20 ಇಂಧನ ರಹಸ್ಯ: ನಿಮ್ಮ ವಾಹನಕ್ಕೆ ಕಾದಿದೆಯೇ ಅಪಾಯ? ರಾಹುಲ್ ಗಾಂಧಿ ಹೇಳಿದ್ದೇನು?
ಅಂದು ಗಟಾರ್-ಕೊಳಕು; ಇಂದು ದೇಶದ ಸಾಂಸ್ಕೃತಿಕ ರಾಯಭಾರಿ; ಉಲ್ಟಾ ಹೊಡೆದ ಕಂಗನಾ ರಣಾವತ್