ಎಸ್‌ಬಿಐ ಚುನಾವಣಾ ಬಾಂಡ್‌ ದೇಣಿಗೆ ರಹಸ್ಯ ಆಯೋಗದಿಂದ ಬಹಿರಂಗ, ಬಿಜೆಪಿ ಟಾಪ್‌, ಜೆಡಿಎಸ್‌ಗೆ 43 ಕೋಟಿ!

By Kannadaprabha NewsFirst Published Mar 15, 2024, 7:48 AM IST
Highlights

ಚುನಾವಣಾ ಆಯೋಗವು ಗುರುವಾರ ಚುನಾವಣಾ ಬಾಂಡ್‌ಗಳ ದತ್ತಾಂಶವನ್ನು ಸಾರ್ವಜನಿಕಗೊಳಿಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮಾ. 12 ರಂದು ತನ್ನೊಂದಿಗೆ ಹಂಚಿಕೊಂಡಿದ್ದ ದತ್ತಾಂ ಶವನ್ನು ಆಯೋಗ ಬಹಿರಂಗ ಮಾಡಿದೆ.

 ನವದೆಹಲಿ (ಮಾ.15): ಚುನಾವಣಾ ಆಯೋಗವು ಗುರುವಾರ ಚುನಾವಣಾ ಬಾಂಡ್‌ಗಳ ದತ್ತಾಂಶವನ್ನು ಸಾರ್ವಜನಿಕಗೊಳಿಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮಾರ್ಚ್ 12 ರಂದು ತನ್ನೊಂದಿಗೆ ಹಂಚಿಕೊಂಡಿದ್ದ ದತ್ತಾಂ ಶವನ್ನು ಆಯೋಗ ಬಹಿರಂಗ ಮಾಡಿದೆ.

ಮಾರ್ಚ್‌ 15 ರ ಸಂಜೆ 5 ಗಂಟೆ ಯೊಳಗೆ ಆಯೋಗದ ವೆಬ್‌ಸೈಟ್‌ನಲ್ಲಿ ಡೇಟಾವನ್ನು ಅಪ್‌ಲೋಡ್‌ ಮಾಡಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಈ ಪ್ರಕಾರ ದತ್ತಾಂಶ ಬಹಿರಂಗವಾಗಿದೆ.

‘ಎಸ್‌ಬಿಐ ಸಲ್ಲಿಸಿದ ಚುನಾವಣಾ ಬಾಂಡ್‌ಗಳ ಬಹಿರಂಗ’ ವಿಷಯದ ಅಡಿ ವಿವರಗಳನ್ನು ಆಯೋಗ 2 ಭಾಗಗಳಲ್ಲಿ ಇರಿಸಿ ಬಿಡುಗಡೆ ಮಾಡಿದೆ. ಒಂದು ಭಾಗದಲ್ಲಿ ಯಾವ ಪಕ್ಷಕ್ಕೆ ಎಷ್ಟುಹಣ ಎಂಬ ವಿವರ ಇದ್ದರೆ, ಇನ್ನೊಂದರಲ್ಲಿ ಯಾವ ವ್ಯಕ್ತಿ ಹಾಗೂ ಸಂಸ್ಥೆಗಳು ಎಷ್ಟುಹಣ ನೀಡಿವೆ ಎಂಬ ಮಾಹಿತಿ ಇದೆ.

ಸಂಸತ್ತಿನಿಂದ ಪಂಚಾಯಿತಿವರೆಗೆ ಏಕ ಚುನಾವಣೆ, ಕೋವಿಂದ್‌ ಸಮಿತಿ ಶಿಫಾರಸು

ಚುನಾವಣಾ ಬಾಂಡ್‌ ದತ್ತಾಂಶವು ಮೂರು ಮುಖಬೆಲೆಯ ಬಾಂಡ್‌ಗಳ ಖರೀದಿಗಳಿಗೆ ಸಂಬಂಧಿಸಿದೆ. 1 ಲಕ್ಷ, . 10 ಲಕ್ಷ ಮತ್ತು . 1 ಕೋಟಿ. ಏಪ್ರಿಲ್‌ 12, 2019ರಿಂದ ಈವರೆಗಿನ ದೇಣಿಗೆ ಮಾಹಿತಿ ಒಳಗೊಂಡಿದೆ.

ಬಿಜೆಪಿ ನಂ.1: ಈ ಅವಧಿಯಲ್ಲಿ 16 ಸಾವಿರ ಕೋಟಿ ರು. ಮೌಲ್ಯದ ಬಾಂಡ್‌ ಖರೀದಿ ಆಗಿದೆ. ಬಿಜೆಪಿಗೆ ಅತಿ ಹೆಚ್ಚು 6,565 ಕೋಟಿ ರು. ದೇಣಿಗೆ ಸಂಗ್ರಹವಾಗಿದೆ. 2ನೇ ಸ್ಥಾನದಲ್ಲಿರುವ ಟಿಎಂಸಿ ಕಾಂಗ್ರೆಸ್‌ ಅನ್ನು ಹಿಂದೆ ಹಾಕಿದ್ದು, 1609 ಕೋಟಿ ರು. ಹಾಗೂ 3ನೇ ಸ್ಥಾನಕ್ಕೆ ಜಾರಿರುವ ಕಾಂಗ್ರೆಸ್‌1421 ಕೋಟಿ ರು. ಸಂಗ್ರಹಿಸಿದೆ ಎಂದು ದತ್ತಾಂಶ ಹೇಳಿದೆ.

ಫೆ.15 ರಂದು ನೀಡಿದ ಮಹತ್ವದ ತೀರ್ಪಿನಲ್ಲಿ, 5 ನ್ಯಾಯಾಧೀಶರ ಸಂವಿಧಾನ ಪೀಠವು ಅನಾಮಧೇಯ ರಾಜಕೀಯ ನಿಧಿಯನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿತ್ತು, ಇದನ್ನು ‘ಸಾಂವಿಧಾನಿಕ’ ಎಂದು ಕರೆದು ಮತ್ತು ದಾನಿಗಳು ನೀಡಿದ ದೇಣಿಗೆ ನೀಡಿದ ಮೊತ್ತ ಬಹಿರಂಗಪಡಿಸಲು ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.

Kerala financial crisis: 5 ಸಾವಿರ ಕೋಟಿ ಸಾಲ ನೀಡಲು ಸಿದ್ಧ, ಅದಕ್ಕೆ ಷರತ್ತುಗಳಿವೆ ಎಂದ ಕೇಂದ್ರ!

ಜೆಡಿಎಸ್‌ಗೆ 43 ಕೋಟಿ ರುಪಾಯಿ ದೇಣಿಗೆ!: ಕರ್ನಾಟಕದ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾ ದಳ ಒಟ್ಟು 43.5 ಕೋಟಿ ರು. ದೇಣಿಗೆ ಪಡೆದಿದೆ. ಅದರಲ್ಲಿ ಏ.15 2019ರಲ್ಲಿ 10 ಲಕ್ಷ ರು. ಮೌಲ್ಯದ 25 ಬಾಂಡ್‌, ಏ.17, 2023 ರಂದು 10 ಲಕ್ಷ ರು. ಮೌಲ್ಯದ 10 ಬಾಂಡ್‌, ಹಾಗೂ ಏ.18, 2023ರಂದು 1 ಕೋಟಿ ರು. ಮೌಲ್ಯದ 40 ಬಾಂಡ್‌ಗಳನ್ನು ಜೆಡಿಎಸ್‌ ನಗದೀಕರಿಸಿಕೊಂಡಿದೆ. ಈ ಮೂಲಕ ಒಟ್ಟು 43.5 ಕೋಟಿ ರು. ಮೌಲ್ಯದ ದೇಣಿಗೆಯನ್ನು ಜೆಡಿಎಸ್‌ ಸ್ವೀಕರಿಸಿದಂತಾಗಿದೆ.

ಯಾವ ಕಂಪನಿಗಳಿಂದ ಖರೀದಿ?: ಚುನಾವಣಾ ಸಮಿತಿಯು ಅಪ್‌ಲೋಡ್ ಮಾಡಿದ ಮಾಹಿತಿಯ ಪ್ರಕಾರ, ಚುನಾವಣಾ ಬಾಂಡ್‌ಗಳ ಖರೀದಿದಾರರಲ್ಲಿ ಗ್ರಾಸಿಮ್ ಇಂಡಸ್ಟ್ರೀಸ್, ಮೇಘಾ ಇಂಜಿನಿಯರಿಂಗ್, ಪಿರಮಲ್ ಎಂಟರ್‌ಪ್ರೈಸಸ್, ಟೊರೆಂಟ್ ಪವರ್, ಭಾರ್ತಿ ಏರ್‌ಟೆಲ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್, ವೇದಾಂತ ಲಿಮಿಟೆಡ್, ಅಪೊಲೊ ಟೈರ್ಸ್, ಲಕ್ಷ್ಮಿ ಮಿತ್ತಲ್, ಎಡೆಲ್‌ವೀಸ್, ಪಿವಿಆರ್, ಕೆವೆಂಟರ್ , ಸುಲಾ ವೈನ್, ವೆಲ್ಸ್ಪನ್ ಮತ್ತು ಸನ್ ಫಾರ್ಮಾ ಕಂಪನಿಗಳಿವೆ.

ಕ್ವಿಕ್‌ ಸಪ್ಲೈ ಕಂಪನಿಯಿಂದ 410 ಕೋಟಿ ರು. ದೇಣಿಗೆ!: ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಚುನಾವಣಾ ಬಾಂಡ್‌ಗಳ ಮೂಲಕ ಸುಮಾರು 410 ಕೋಟಿ ದೇಣಿಗೆ ನೀಡಿದೆ. ಈ ಕಂಪನಿ ಯಾರದ್ದು ಹಾಗೂ ಯಾರಿಗೆ ಹಣ ನೀಡಿದೆ ಎಂಬ ಮಾಹಿತಿ ಇಲ್ಲ.

ಯಾರು ಯಾರಿಗೆ ಹಣ ನೀಡಿದರು ಎಂಬ ಮಾಹಿತಿ ಇಲ್ಲ: ದೇಣಿಗೆದಾರರ ಹೆಸರು ಹಾಗೂ ದೇಣಿಗೆ ಸ್ವೀಕರಿಸಿದ ಪಕ್ಷಗಳ ಪ್ರತ್ಯೇಕ ಪಟ್ಟಿ ಇದಾಗಿದೆ. ನೇರವಾಗಿ ಯಾವ ವ್ಯಕ್ತಿ/ಸಂಸ್ಥೆ ಯಾರಿಗೆ ಹಣ ನೀಡಿದರು ಎಂಬ ಮಾಹಿತಿ ಇಲ್ಲ. ಈ ಮಾಹಿತಿ ನೀಡಬೇಕು ಎಂದರೆ ಇನ್ನೂ 3 ವಾರ ಸಮಯ ಬೇಕು ಎಂದು ಎಸ್‌ಬಿಐ ಕಾಲಾವಕಾಶ ಕೇಳಿತ್ತು. ಹೀಗಾಗಿ ಸುಪ್ರೀಂ ಕೋರ್ಟು ದೇಣಿಗೆದಾರರ ಹೆಸರು ಹಾಗೂ ಅವರು ನೀಡದ ಹಣ ಬಹಿರಂಗ ಮಾಡಿ. ಅವರು ಯಾರಿಗೆ ಕೊಟ್ಟರು ಎಂಬ ವಿಷಯ ಬೇಕಿಲ್ಲ ಎಂದು ಹೇಳಿತ್ತು.

ಯಾವ ಪಕ್ಷಕ್ಕೆ ಸಂದಾಯ?: ಚುನಾವಣಾ ಬಾಂಡ್‌ಗಳನ್ನು ರಿಡೀಮ್ ಮಾಡಿದ ಪಕ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್, ಡಿಎಂಕೆ, ಜೆಡಿಎಸ್, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್, ಜೆಡಿಯು, ಆರ್‌ಜೆಡಿ, ಎಎಪಿ ಮತ್ತು ಸಮಾಜವಾದಿ ಪಕ್ಷ ಸೇರಿವೆ.

22217 ಬಾಂಡ್‌ ಖರೀದಿ, 22030 ನಗದೀಕರಣ: 2019ರ ಏ.1ರಿಂದ ಈ ವರ್ಷದ ಫೆ.15ರವರೆಗೆ ರಾಜಕೀಯ ಪಕ್ಷಗಳು ಒಟ್ಟು 22,217 ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ. ಅವುಗಳ ಪೈಕಿ 22,030 ಬಾಂಡ್‌ಗಳನ್ನು ನಗದೀಕರಿಸಿಕೊಂಡಿವೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. 16518 ಕೋಟಿ ರು. ಮೌಲ್ಯದ ಬಾಂಡ್‌ ಇವಾಗಿವೆ.

click me!