ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಛತ್ತೀಸ್‌ಗಢ, ತೆಲಂಗಾಣದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಅಧಿಕಾರ ಹಿಡಿಯುವ ಸಾಧ್ಯತೆ ಇದ್ದರೆ, ಮಿಜೋರಾಂನಲ್ಲಿ ಝಡ್‌ಪಿಎಂ ದೊಡ್ಡ ಪಕ್ಷವಾಗಲಿದ್ದರೂ, ಸರ್ಕಾರ ಅತಂತ್ರವಾಗಲಿದೆ ಎಂದಿದೆ.
ನವದೆಹಲಿ (ನ.30): ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯದಲ್ಲಿ ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ಅಧಿಕಾರ ಹಾಗೂ ಬಿಜೆಪಿಯೇ ದೊಡ್ಡ ಪಕ್ಷವಾಗುವ ಸೂಚನೆ ನೀಡಿದ್ದರೆ, ಚುನಾವಣೆಗೆ ಇಳಿದ ಉಳಿದ ರಾಜ್ಯಗಳಾದ ಛತ್ತೀಸ್‌ಗಢ, ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದೆ. ಅಲ್ಲದೆ, ಕಾಂಗ್ರೆಸ್ ದೊಡ್ಡ ಪಕ್ಷವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಈಶಾನ್ಯದ ಪುಟ್ಟ ರಾಜ್ಯ ಮಿಜೋರಾಂನಲ್ಲಿ ಆಡಳಿತಾರೂಢ ಎಂಎನ್‌ಎಫ್ ಹಿನ್ನಡೆ ಕಾಣುವುದು ಖಚಿತವಾಗಿದ್ದು, ಜೋರಮ್ ಪೀಪಲ್ಸ್ ಮೂವ್‌ಮೆಂಟ್ (ಜಡ್‌ಪಿಎಂ) ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದೆ. ಜಡ್‌ಪಿಎಂ ಆರು ಪಕ್ಷಗಳ ಮೈತ್ರಿ ಸಾಧಿಸುವ ಮೂಲಕ ಚುನಾವಣೆಗೆ ಇಳಿದಿದೆ. 90 ಕ್ಷೇತ್ರಗಳನ್ನು ಹೊಂದಿರುವ ಛತ್ತೀಸ್‌ಗಢದಲ್ಲಿ ಗೆಲುವಿಗೆ 46 ಸೀಟ್ ಗೆಲ್ಲಬೇಕಿದ್ದರೆ, 119 ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣದಲ್ಲಿ 60 ಸೀಟ್ ಬಹುಮತಕ್ಕೆ ಅಗತ್ಯವಾಗಿದೆ. 40 ಕ್ಷೇತ್ರವನ್ನು ಹೊಂದಿರುವ ಮಿಜೋರಾಂನಲ್ಲಿ 21 ಸ್ಥಾನ ಗೆದ್ದ ಪಕ್ಷ ಅಧಿಕಾರ ಹಿಡಿಯಲಿದೆ.
ಛತ್ತೀಸ್‌ಗಢ ರಾಜ್ಯಕ್ಕೆ India Today Axis My India ಸಮೀಕ್ಷೆಯಲ್ಲಿ ಕಾಂಗ್ರೆಸ್ 40 ರಿಂದ 50 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದರೆ, ಬಿಜೆಪಿ 36-46 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ. ಇತರೆ 1 ರಿಂದ 5 ಸ್ಥಾನ ಗೆಲ್ಲಬಹುದು ಎಂದಿದೆ. ಇನ್ನು C Voter ತನ್ನ ಸಮೀಕ್ಷೆಯಲ್ಲಿ ಕಾಂಗ್ರೆಸ್ 41-53 ಸ್ಥಾನ ಗೆಲ್ಲಬಹುದು ಎಂದಿದ್ದರೆ, ಬಿಜೆಪಿ 36-48 ಸ್ಥಾನ ಗೆಲ್ಲಬಹುದು ಎಂದು ಅಂದಾಜು ಮಾಡಿದೆ. ಇತರೆ 0 ಯಿಂದ 4 ಸ್ಥಾನ ಗೆಲ್ಲಬಹುದು ಎಂದು ತಿಳಿಸಿದೆ. ರಿಪಬ್ಲಿಕ್-ಮಾಟ್ರೀಜ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ 44-52 ಸ್ಥಾನ, ಬಿಜೆಪಿ 34-42 ಸ್ಥಾನ ಹಾಗೂ ಇತರೆ 0 ಯಿಂದ 2 ಸ್ಥಾನ ಗೆಲ್ಲಬಹುದು ಎಂದಿದೆ. Times Now ETG ತನ್ನ ಸಮೀಕ್ಷೆಯಲ್ಲಿ ಕಾಂಗ್ರೆಸ್ 34-36 ಸೀಟ್‌ಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದರೆ, ಬಿಜೆಪಿ 26-30 ಸೀಟ್‌ಗಳಲ್ಲಿ ಹಾಗೂ ಇತರೇ 2-4 ಸೀಟ್‌ಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದಿದೆ. News 24-Chanakya ಪ್ರಕಾರ ಕಾಂಗ್ರೆದ್ 57 ಸೀಟ್‌ಗಳಲ್ಲಿ ಗೆಲ್ಲಲಿದ್ದರೆ, ಬಿಜೆಪಿ 33 ಸ್ಥಾನಗಳಲ್ಲಿ ವಿಜಯ ಸಾಧಿಸಲಿದೆ ಎಂದು ತಿಳಿಸಿದೆ.
ತೆಲಂಗಾಣದ ರಾಜ್ಯಕ್ಕೆ ಜನ್ ಕೀ ಬಾತ್ ನೀಡಿರುವ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ 56-68 ಸೀಟ್‌ಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದಿದ್ದು, ಆಡಳಿತಾರೂಢ ಬಿಆರ್‌ಎಸ್ 46-56 ಸ್ಥಾನ, ಬಿಜೆಪಿ 4-9 ಸ್ಥಾನ, ಎಐಎಂಐಎಂ 5-7 ಸ್ಥಾನ ಹಾಗೂ ಇತರೆ 1 ಸ್ಥಾನ ಗೆಲ್ಲುವ ಭವಿಷ್ಯ ನುಡಿದಿದೆ.
ಮೀಜೋರಾಂನಲ್ಲಿ ಜನ್ ಕೀ ಬಾತ್ ನೀಡಿರುವ ಸಮೀಕ್ಷೆಯಲ್ಲಿ ಜಡ್‌ಪಿಎಂ 15-25 ಸೀಟ್ ಗೆಲ್ಲುವ ನಿರೀಕ್ಷೆ ಇದೆ. ಆಡಳಿತಾರೂಢ ಎಂಎನ್‌ಎಫ್ 10 ರಿಂದ 14 ಸ್ಥಾನ ಗೆಲ್ಲುವ ಸಾಧ್ಯತೆ ಇದ್ದರೆ, ಕಾಂಗ್ರೆಸ್ 5-9, ಬಿಜೆಪಿ 0ಯಿಂದ 2 ಸ್ಥಾನ ಗೆಲ್ಲುವ ಸಾಧ್ಯತೆ ಇದೆ.