ದೂರದ ಊರಿನಿಂದಲೇ ನಿಮ್ಮ ಕ್ಷೇತ್ರದ ಮತ ಚಲಾಯಿಸಿ!

By Kannadaprabha NewsFirst Published Feb 17, 2020, 8:10 AM IST
Highlights

ದೂರದ ಊರಿನಿಂದಲೇ ನಿಮ್ಮ ಕ್ಷೇತ್ರದ ಮತ ಚಲಾಯಿಸಿ| ವಿನೂತನ ತಂತ್ರಜ್ಞಾನ ಸಿದ್ಧಪಡಿಸುತ್ತಿದೆ ಚುನಾವಣಾ ಆಯೋಗ| ಈ ಸಂಬಂಧ ಮದ್ರಾಸ್‌ ಐಐಟಿ ಜತೆ ಒಪ್ಪಂದ| ಮತದಾನದ ದಿನ ಬೇರೆ ಊರಲ್ಲಿದ್ದವರಿಗೆ ಇದರಿಂದ ಅನುಕೂಲ| ಇದ್ದ ಊರಿನಂದಲೇ ಸಂಬಂಧಿತ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಬಹುದು

ನವದೆಹಲಿ[ಫೆ.17]: ಮತದಾನದ ದಿನ ತಮ್ಮ ಮತ ಇರುವ ಊರಿಗೆ ತೆರಳಲು ಆಗದೇ ಅನೇಕರು ಪರದಾಡುತ್ತಾರೆ. ಮತದಾನ ಮಾಡುವುದು ತಪ್ಪಿಹೋಯಿತಲ್ಲ ಎಂದು ಹಳಹಳಿಸುತ್ತಾರೆ. ಇಂಥವರ ಸಮಸ್ಯೆ ಶೀಘ್ರದಲ್ಲೇ ಪರಿಹಾರಗೊಳ್ಳುವ ಸಾಧ್ಯತೆ ಇದೆ.

ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಮತಗಟ್ಟೆಗೆ ತೆರಳದೇ, ದೂರದ ಮತಗಟ್ಟೆಯಿಂದಲೇ ಸಂಬಂಧಿತ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಲು ಮತದಾರರಿಗೆ ಅವಕಾಶ ನೀಡುವ ತಂತ್ರಜ್ಞಾನ ಸಿದ್ಧಪಡಿಸುವ ವಿನೂತನ ಪ್ರಯತ್ನವನ್ನು ಚುನಾವಣಾ ಆಯೋಗ ಆರಂಭಿಸಿದೆ. ಈ ತಂತ್ರಜ್ಞಾನ ರೂಪಿಸಲು ಐಐಟಿ-ಮದ್ರಾಸ್‌ ಜತೆ ಅದು ಒಪ್ಪಂದ ಮಾಡಿಕೊಂಡಿದೆ.

‘ಬ್ಲಾಕ್‌ ಚೈನ್‌’ ತಂತ್ರಜ್ಞಾನವನ್ನು ಆಧರಿಸಿ ಹೊಸ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಇದಿನ್ನೂ ಸಂಶೋಧನೆ ಹಾಗೂ ಅಭಿವೃದ್ಧಿ ಹಂತದಲ್ಲಿದೆ. ತಂತ್ರಜ್ಞಾನ ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ದೃಢಪಟ್ಟಬಳಿಕ ಸಮಾಲೋಚನೆ ನಡೆಸಿ ಚುನಾವಣಾ ನಿಯಮಗಳಿಗೆ ತಿದ್ದುಪಡಿ ತರಲಾಗುತ್ತದೆ. ಬಳಿಕ ಜಾರಿ ಮಾಡಲಾಗುತ್ತದೆ ಎಂದು ಚುನಾವಣಾ ಆಯೋಗ ಅಧಿಕಾರಿಗಳು ಹೇಳಿದ್ದಾರೆ.

ಕಾರ್ಯನಿರ್ವಹಣೆ ಹೇಗೆ?:

ಇದಕ್ಕಾಗಿ ಹೊಸ ಮಾದರಿಯ ವಿದ್ಯುನ್ಮಾನ ಮತಯಂತ್ರವನ್ನು (ಇವಿಎಂ) ಸಿದ್ಧಪಡಿಸಲಾಗುತ್ತದೆ. ಇದು ದ್ವಿಮುಖ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಅಂದರೆ ಇಲ್ಲಿ ಹಾಕಿದ ಮತ ಬೇರೊಂದು ಕ್ಷೇತ್ರದ ಅಭ್ಯರ್ಥಿಗೆ ಸಂಬಂಧಪಟ್ಟಿದ್ದಾಗಿರುತ್ತದೆ. ಇಂಟರ್ನೆಟ್‌ ಸೌಲಭ್ಯವು ಈ ಮತಯಂತ್ರಕ್ಕೆ ಇರುತ್ತದೆ. ಬಯೋಮೆಟ್ರಿಕ್‌ ಯಂತ್ರ ಹಾಗೂ ಮತದಾರನ ಮುಖಚಹರೆ ಗುರುತಿಸಲು ವೆಬ್‌ ಕ್ಯಾಮರಾ ಹೊಂದಿರುತ್ತದೆ. ಇದಕ್ಕೆಂದೇ ಪ್ರತ್ಯೇಕ ಇಂಟರ್‌ನೆಟ್‌ ಲೈನ್‌ ಅಗತ್ಯವಿರುತ್ತದೆ.

ಮತಯಂತ್ರದಲ್ಲಿನ ವೆಬ್‌ ಕ್ಯಾಮರಾ ಮತದಾರನ ಚಹರೆಯನ್ನು ದೃಢಪಡಿಸಬೇಕು. ಆಮೇಲೆ ಇ-ಬ್ಯಾಲೆಟ್‌ ಮೂಲಕ ಸಂಬಂಧಿತ ಕ್ಷೇತ್ರದ ಅಭ್ಯರ್ಥಿಗೆ ಆತ ಮತ ಹಾಕಬಹುದು.

‘ಹಾಗಂತ ಇದು ಮನೆಯಲ್ಲೇ ಕುಳಿತು ಯಾವುದೇ ಕ್ಷೇತ್ರಕ್ಕೆ ಮತದಾನ ಮಾಡಬಹುದು ಎಂಬ ವ್ಯವಸ್ಥೆಯಲ್ಲ. ಇಂತಹ ವ್ಯವಸ್ಥೆ ಇರುವ ಮತಗಟ್ಟೆಯಲ್ಲಿ ಮತ ಹಾಕುವ ಬಗ್ಗೆ ಮೊದಲೇ ಹೆಸರು ನೋಂದಾಯಿಸಿಕೊಂಡಿರಬೇಕು. ಸಮಯವನ್ನೂ ನಿಗದಿ ಮಾಡಿಕೊಂಡಿರಬೇಕು. ಅದೇ ಸಮಯಕ್ಕೇ ಬಂದು ಅಲ್ಲಿ ಮತ ಹಾಕಿದರೆ, ಆ ಮತವು ಸಂಬಂಧಿತ ಕ್ಷೇತ್ರದ ಅಭ್ಯರ್ಥಿಗೆ ಚಲಾವಣೆಯಾಗುತ್ತದೆ’ ಎಂದು ಹಿರಿಯ ಉಪ ಚುನಾವಣಾ ಆಯುಕ್ತ ಸಂದೀಪ್‌ ಸಕ್ಸೇನಾ ಹೇಳಿದ್ದಾರೆ.

ಈ ರೀತಿ ಚಲಾವಣೆ ಆದ ಮತಗಳು ನಿಜವಾಗಿಯೂ ಚಲಾವಣೆ ಆಗಿವೆ. ಯಾವುದೇ ಅಕ್ರಮ ನಡೆದಿಲ್ಲ ಎಂಬುದನ್ನು ಎಣಿಕೆ ಸಂದರ್ಭದಲ್ಲಿ ದೃಢಪಡಿಸಿಕೊಳ್ಳಲಾಗುತ್ತದೆ. ನಂತರ ಇವನ್ನು ಎಣಿಕೆಗೆ ಪರಿಗಣಿಸಲಾಗುತ್ತದೆ.

ಉದಾಹರಣೆಗೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚೆನ್ನೈನ ಮತದಾರ ದಿಲ್ಲಿಯಲ್ಲಿದ್ದಾನೆ ಎಂದುಕೊಳ್ಳೋಣ. ನಾನಾ ಕಾರಣಗಳಿಂದ ಆತನಿಗೆ ಮತದಾನದ ದಿನ ಚೆನ್ನೈಗೆ ಹೋಗಲಾಗುವುದಿಲ್ಲ. ಈ ವೇಳೆ ‘ಬ್ಲಾಕ್‌ ಚೈನ್‌’ ತಂತ್ರಜ್ಞಾನ ಇರುವ ದಿಲ್ಲಿ ಮತಗಟ್ಟೆಗೆ ತೆರಳಿ ಮತ ಹಾಕುವುದಾಗಿ, ಮೊದಲೇ ಚುನಾವಣಾಧಿಕಾರಿಗಳಿಗೆ ಕೋರಿಕೆ ಸಲ್ಲಿಸಿರಬೇಕು. ಅಲ್ಲಿ ಹೆಸರು ನೋಂದಾಯಿಸಿಕೊಂಡು ಸಮಯ ನಿಗದಿ ಮಾಡಿಕೊಂಡಿರಬೇಕು. ಆ ಸಮಯಕ್ಕೆ ತೆರಳಿ ಆತ ತನ್ನ ಚೆನ್ನೈ ಅಭ್ಯರ್ಥಿ ಪರ ಮತ ಹಾಕಬಹುದು.

click me!