
ನವದೆಹಲಿ (ಅ.06) ದೇಶಾದ್ಯಂತ ಇದೀಗ ಚುನಾವಣಾ ಆಯೋಗ, ಗ್ಯಾನೇಶ್ ಕುಮಾರ್ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ(SIR) ಭಾರಿ ಕೋಲಾಹಲ ಸೃಷ್ಟಿಸಿದೆ.ಈ ಕುರಿತು ಎದ್ದಿರುವ ಅಪಪ್ರಚಾರ ಮತ್ತು ಕಾನೂನಾತ್ಮಕ ಗೊಂದಲಗಳಿಗೆ ಚುನಾವಣಾ ಆಯೋಗವು ಸ್ಪಷ್ಟನೆ ನೀಡಿದೆ. ಇದೇ ವೇಳೆ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅಮಾನತು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ.
ಸೆಪ್ಟೆಂಬರ್ 26, 2026 ರ ಪತ್ರಿಕಾ ಪ್ರಕಟಣೆಯಲ್ಲಿ ಚುನಾವಣಾ ಆಯೋಗವು SIR ಗಾಗಿ ಫಾರ್ಮ್ 6 ರೊಂದಿಗೆ ಲಗತ್ತಿಸಲಾದ ಡಿಕ್ಲರೇಶನ್ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ತಿಳಿಸಿತ್ತು. ಈ ಕುರಿತು ಹಲವು ಆರೋಪಗಳು ಕೇಳಿಬಂದಿದೆ. ಮಾಹಿತಿ ತಿರುಚಿದೆ, ತಪ್ಪು ಅನ್ನೋ ಆರೋಪಗಳಿಗೆ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಿದೆ.
1960 ರ ಮತದಾರರ ನೋಂದಣಿ ನಿಯಮಗಳ ಅಡಿಯಲ್ಲಿ ನಿಗದಿಪಡಿಸಲಾದ ಶಾಸನಬದ್ಧ 'ಫಾರ್ಮ್ 6' ರಚನೆ, ವಿಷಯಗಳು ಅಥವಾ ಶಾಸನಬದ್ಧ ಸ್ವರೂಪವನ್ನು ಆಯೋಗವು ಬದಲಾಯಿಸಿಲ್ಲ. SIR ಪ್ರಕ್ರಿಯೆಯ ಸಂದರ್ಭದಲ್ಲಿ ಹೊಸ ಮತದಾರರು ಫಾರ್ಮ್ 6 ರ ಜೊತೆಗೆ 'ಅನುಬಂಧ D' (Annexure D) ಅಡಿಯಲ್ಲಿ ಒಂದು 'ಡಿಕ್ಲರೇಶನ್ ಫಾರ್ಮ್' ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದು ಫಾರ್ಮ್‌ನೊಂದಿಗೆ ಲಗತ್ತಿಸುವ ಹೆಚ್ಚುವರಿ ಸಾಕ್ಷ್ಯ ದಾಖಲೆಯೇ (supporting document) ಹೊರತು, ಸ್ವತಃ ಫಾರ್ಮ್ 6 ರ ಮಾರ್ಪಾಡಲ್ಲ. ಫಾರ್ಮ್ ತಿದ್ದುಪಡಿ ಮಾಡುವುದು ಬೇರೆ, ಹೆಚ್ಚುವರಿ ದಾಖಲೆ ಕೋರುವುದು ಬೇರೆ.
ಸಾಮಾನ್ಯ ಪರಿಷ್ಕರಣೆಗೆ ಫಾರ್ಮ್ 6 ರ ಪ್ರಮಾಣಿತ ದಾಖಲೆ ಚೌಕಟ್ಟು ಸಾಕಾಗಬಹುದಾದರೂ, ಮತದಾರರ ಪಟ್ಟಿ ಪರಿಷ್ಕರಣೆ' (SIR) ವಿಶೇಷ ಪ್ರಕ್ರಿಯೆಗೆ ಸೂಕ್ತವಾದ ಹೆಚ್ಚುವರಿ ದಾಖಲೆಗಳನ್ನು ಕೋರುವ ಶೇಷ ಅಧಿಕಾರ (residual authority) ಚುನಾವಣಾ ಆಯೋಗಕ್ಕಿದೆ ಎಂಬುದನ್ನು ಸುಪ್ರೀಂ ಕೋರ್ಟ್ (ಬಿಹಾರ SIR ತೀರ್ಪು ಹಾಗೂ ಪ್ಯಾರಾ 152 ರಲ್ಲಿ) ಸ್ಪಷ್ಟವಾಗಿ ಗುರುತಿಸಿದೆ.
ಮತದಾರರ ಪಟ್ಟಿಯ ಪವಿತ್ರತೆ ಮತ್ತು ಸಮಗ್ರತೆಯನ್ನು ಕಾಯ್ದುಕೊಳ್ಳಲು ಆಯೋಗವು ನಿರ್ದಿಷ್ಟ ದಾಖಲೆಗಳನ್ನು ನಿಗದಿಪಡಿಸಿರುವುದು ಹಾಗೂ ಕೆಲವು ವಿಭಾಗಗಳನ್ನು ಹೊರಗಿಟ್ಟಿರುವುದು ತರ್ಕಬದ್ಧ ಮಾನದಂಡಗಳನ್ನು ಆಧರಿಸಿದೆ. ಈ ದಾಖಲಾತಿ ಚೌಕಟ್ಟು ಕಾನೂನುಬದ್ಧ ಆಡಳಿತಾತ್ಮಕ ವಿವೇಚನೆಯಾಗಿದ್ದು (administrative discretion), ಇದನ್ನು ಅನಿಯಂತ್ರಿತ ಅಥವಾ ಶಾಸನಬದ್ಧ ಯೋಜನೆಗೆ ವಿರುದ್ಧವಾದದ್ದು ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ತೀರ್ಪಿನ ಪ್ಯಾರಾ 161 ರಲ್ಲಿ ಸ್ಪಷ್ಟಪಡಿಸಲಾಗಿದೆ.
ಪತ್ರಿಕಾ ಪ್ರಕಟಣೆ ಮತ್ತು ಕೋರ್ಟ್ ತೀರ್ಪಿನ ನೈಜತೆ: ಚುನಾವಣಾ ಆಯೋಗವು ಫಾರ್ಮ್ 6 ರ 'ತಿದ್ದುಪಡಿ'ಯನ್ನು ಕೋರ್ಟ್ ಒಪ್ಪಿದೆ ಎಂದು ಎಲ್ಲಿಯೂ ಹೇಳಿಲ್ಲ. ಬದಲಾಗಿ ಫಾರ್ಮ್ 6 ಗೆ ಲಗತ್ತಿಸಲಾದ 'ಡಿಕ್ಲರೇಶನ್' ಕೋರ್ಟ್ ಎತ್ತಿಹಿಡಿದಿದೆ ಎಂದು ಮಾತ್ರ ಹೇಳಿತ್ತು. ಕೋರ್ಟ್ 'ಫಾರ್ಮ್ 6 ಮಾರ್ಪಾಡಿಗೆ ಅನುಮೋದನೆ ನೀಡಿಲ್ಲ' ಎಂಬ ವೀಕ್ಷಣೆಗೂ ಮತ್ತು 'ಅನುಬಂಧಿತ ಡಿಕ್ಲರೇಶನ್ ಅನ್ನು ಒಪ್ಪಿದೆ' ಎಂಬ ಆಯೋಗದ ಹೇಳಿಕೆಗೂ ಯಾವುದೇ ವೈರುಧ್ಯವಿಲ್ಲ ಎಂಬುದನ್ನು ಆಯೋಗ ಸ್ಪಷ್ಟಪಡಿಸಿದೆ.
ಸುಳ್ಳು ಆರೋಪಗಳ ಪತನ: ಶಾಸನಬದ್ಧ ಫಾರ್ಮ್ ತಿದ್ದುಪಡಿ ಮಾಡುವುದು ಮತ್ತು ಹೆಚ್ಚುವರಿ ಬೆಂಬಲಿತ ದಾಖಲೆ ಕೋರುವುದರ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗ್ರಹಿಸಿದರೆ, ಆಯೋಗವು 26 ಸೆಪ್ಟೆಂಬರ್ ಪ್ರಕಟಣೆಯಲ್ಲಿ ಸುಳ್ಳು ಹೇಳಿದೆ ಎನ್ನುವ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಅನ್ನೋದು ಸಾಬೀತಾಗಲಿದೆ ಎಂದು ಆಯೋಗ ಹೇಳಿದೆ.
ಸಿಜೆಐ ಹೇಳಿಕೆಯ ನೈಜ ಕಾನೂನಾತ್ಮಕ ಅರ್ಥ: ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು 'ಯಾವುದೇ ಮಾರ್ಪಡಿಸಿದ ಫಾರ್ಮ್ 6 ಅನ್ನು ಸುಪ್ರೀಂ ಕೋರ್ಟ್ ಅನುಮೋದಿಸಿಲ್ಲ' ಎಂದು ಹೇಳಿರುವುದು, ಆಯೋಗವು ಡಿಕ್ಲರೇಶನ್ ಕೋರಿರುವುದನ್ನು 'ಫಾರ್ಮ್ ತಿದ್ದುಪಡಿ' ಎಂದು ಕರೆಯಲಾಗುವುದಿಲ್ಲ ಎಂಬ ಆಯೋಗದ ವಾದಕ್ಕೇ ಪುಷ್ಟಿ ನೀಡುತ್ತದೆ ಎಂದಿದೆ.
ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರು SIR ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ಅವರ ಅಮಾನತಿಗೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ಪೀಠವು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಪೈಕಿ ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥ ಗ್ಯಾನೇಶ್ ಕುಮಾರ್ ಅಮಾನತು ಆದೇಶಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದಕ್ಕೆ ಕಾರಣವನ್ನು ನೀಡಿದೆ.
ಊಹಾಪೋಹಕ್ಕಿಂತ ಕಾನೂನಾತ್ಮಕ ಪ್ರಕ್ರಿಯೆಗೆ ಆದ್ಯತೆ: ಪತ್ರಿಕೆ ವರದಿಯೊಂದನ್ನು (Indian Express ವರದಿ) ಮಾತ್ರ ಆಧಾರವಾಗಿಟ್ಟುಕೊಂಡು ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರನ್ನು ಅಮಾನತುಗೊಳಿಸಲು ಸಾಧ್ಯವಿಲ್ಲ. ಪತ್ರಿಕಾ ವರದಿ ಶೇ. 100 ಸರಿ ಇರಬಹುದು, ಭಾಗಶಃ ಸರಿ ಇರಬಹುದು ಅಥವಾ ತಪ್ಪೂ ಇರಬಹುದು; ಸತ್ಯಾಸತ್ಯತೆ ತಿಳಿಯದೆ ನಿರ್ಧಾರ ಕೈಗೊಳ್ಳಲಾಗದು ಎಂದು ಪೀಠ ಹೇಳಿದೆ
ಸಂಸ್ಥೆಯ ಕಾರ್ಯಾಚರಣೆಗೆ ಧಕ್ಕೆಯಿಲ್ಲ: ಆಯೋಗಕ್ಕೆ ತನ್ನ ಅಧಿಕೃತ ದಾಖಲೆಗಳನ್ನು ಸಲ್ಲಿಸಲು ಸಮಯ ನೀಡದೆ ಸಿಇಸಿಯವರನ್ನು ಅಮಾನತುಗೊಳಿಸಿದರೆ, ಇಡೀ ಆಯೋಗದ ಕಾರ್ಯಾಚರಣೆಯೇ ಸ್ತಬ್ಧಗೊಳ್ಳುತ್ತದೆ ಮತ್ತು ಚುನಾವಣೆಗಳನ್ನು ಯಾರು ನಡೆಸುತ್ತಾರೆ ಎಂದು ಕೋರ್ಟ್ ಪ್ರಶ್ನಿಸಿದೆ. ದಾಖಲೆಗಳ ಪರಿಶೀಲನೆ ನಂತರ ನಿರ್ಧಾರಗಳು ನಿಯಮಬಾಹಿರವೆಂದು ಕಂಡುಬಂದರೆ ಅದನ್ನು ರದ್ದುಗೊಳಿಸಬಹುದು
ಸಾಂಸ್ಥಿಕ ಸ್ಥಿರತೆಗೆ ಆದ್ಯತೆ: ಯಾವುದೇ ಏಕಪಕ್ಷೀಯ ಮಧ್ಯಂತರ ತಡೆ (ex-parte relief) ನೀಡದೆ, ಆಯೋಗಕ್ಕೆ ನೋಟಿಸ್ ಜಾರಿ ಮಾಡಿ ಅಧಿಕೃತ ದಾಖಲೆ ಕೋರುವ ಮೂಲಕ ಕೋರ್ಟ್ ಸಾಂವಿಧಾನಿಕ ಸಂಸ್ಥೆಯ ಸ್ಥಿರತೆಯನ್ನು ಎತ್ತಿಹಿಡಿದಿದೆ.
ರಾಜಕೀಯ ಆರೋಪ vs ನ್ಯಾಯಾಂಗ ಸಾಕ್ಷ್ಯ: ಮಾಧ್ಯಮ ಹಾಗೂ ರಾಜಕೀಯ ವಲಯದಲ್ಲಿ ಸೃಷ್ಟಿಯಾಗುವ ಹೈ-ಡೆಸಿಬಲ್ ಆರೋಪಗಳಿಗಿಂತ ನ್ಯಾಯಾಲಯದಲ್ಲಿ ಸಲ್ಲಿಕೆಯಾಗುವ ಅಧಿಕೃತ ಸಾಕ್ಷ್ಯಾಧಾರಗಳ ಮೌಲ್ಯವೇ ಶ್ರೇಷ್ಠವಾದುದು.
ಸಮ್ಮತಿ ಮತ್ತು ಒಮ್ಮತದ ಕುರಿತು ಇಸಿಐ ಸ್ಪಷ್ಟನೆ: ಆಂತರಿಕ ಆಡಳಿತಾತ್ಮಕ ಚರ್ಚೆಗಳಲ್ಲಿ ವಿವಿಧ ಅಭಿಪ್ರಾಯಗಳು ಅಥವಾ ಭಿನ್ನಾಭಿಪ್ರಾಯಗಳು ಮೂಡುವುದು ಸಾಮಾನ್ಯ. ಆದರೆ, SIR ಗೆ ಸಂಬಂಧಿಸಿದ ಎಲ್ಲಾ ಅಂತಿಮ ನಿರ್ಧಾರಗಳನ್ನು ಸಂಪೂರ್ಣ ಆಯೋಗವು ಒಮ್ಮತದಿಂದಲೇ ತೆಗೆದುಕೊಂಡಿದೆ ಎಂದು ಇಸಿಐ ತಿಳಿಸಿದೆ.
ಮತದಾರರ ಪಟ್ಟಿಯ ಪರಿಶುದ್ಧತೆಯ ದೊಡ್ಡ ಪ್ರಶ್ನೆ: SIR ಪ್ರಕ್ರಿಯೆಯ ಮುಖ್ಯ ಉದ್ದೇಶ ನಕಲಿ, ಅನರ್ಹ ಹಾಗೂ ಅಸ್ತಿತ್ವದಲ್ಲೇ ಇಲ್ಲದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿ ನಿಖರ ಮತದಾರರ ಪಟ್ಟಿ ಸಿದ್ಧಪಡಿಸುವುದಾಗಿದೆ. ಇಂತಹ ಶುದ್ಧೀಕರಣ ಪ್ರಕ್ರಿಯೆಗೆ ರಾಜಕೀಯ ವಿರೋಧ ವ್ಯಕ್ತವಾಗುತ್ತಿರುವುದರ ಕುರಿತು ಸಾರ್ವಜನಿಕವಾಗಿ ಪ್ರಶ್ನೆಗಳು ಮೂಡುತ್ತಿವೆ
ಸುಪ್ರೀಂ ಕೋರ್ಟ್‌ನ ಸಮತೋಲಿತ ನಡೆ: ಅರ್ಜಿದಾರರ ಮನವಿಗೆ ದಿಢೀರ್ ಮಧ್ಯಂತರ ತಡೆ ನೀಡದೆ, ಪ್ರಕರಣದ ಆಳವಾದ ಪರಿಶೀಲನೆಗೆ ಬಾಗಿಲು ತೆರೆದಿಡುವ ಮೂಲಕ ಕೋರ್ಟ್ ಅತ್ಯಂತ ಜವಾಬ್ದಾರಿಯುತ ನಡೆ ಪ್ರದರ್ಶಿಸಿದೆ.
ಪ್ರಜಾರಾಜ್ಯದ ಶಿಸ್ತು: ರಾಜಕೀಯ ಹೋರಾಟಗಳಿಗೂ ಮತ್ತು ಸಾಂವಿಧಾನಿಕ ನ್ಯಾಯದಂಡದ ಕಟ್ಟುನಿಟ್ಟಿನ ಪ್ರಮಾಣೀಕರಣಕ್ಕೂ ಇರುವ ವ್ಯತ್ಯಾಸವನ್ನು ಈ ವಿಚಾರಣೆ ಸ್ಪಷ್ಟಪಡಿಸಿದೆ.
ಆಯೋಗದ ಕಾನೂನಾತ್ಮಕ ಜವಾಬ್ದಾರಿ: ಸುಪ್ರೀಂ ಕೋರ್ಟ್ ಆಯೋಗಕ್ಕೆ ನೋಟಿಸ್ ನೀಡಿರುವುದರಿಂದ, ಆಯೋಗವು ತನ್ನ ಎಲ್ಲಾ ಆಂತರಿಕ ಪ್ರಕ್ರಿಯೆಗಳ ದಾಖಲೆಗಳನ್ನು ಪಾರದರ್ಶಕವಾಗಿ ಕೋರ್ಟ್ ಮುಂಭಾಗ ಮಂಡಿಸಬೇಕಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ