ಶಿವಸೇನೆ ಪಕ್ಷ ಹೋಳಾಗಿ ಏಕನಾಥ್ ಶಿಂಧೆ ಬಣ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದಾರೆ. ಆದರೆ ಶಿವಸೇನೆ ಪಕ್ಷದ ಹೆಸರು ಹಾಗೂ ಪಕ್ಷದ ಚಿಹ್ನೆ ನಡುವಿನ ಹೋರಾಟ ತಾರಕಕ್ಕೇರಿತ್ತು. ಸುದೀರ್ಘ ಹೋರಾಟದಲ್ಲಿ ಉದ್ಧವ್ ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ. ಚುನಾವಣಾ ಆಯೋಗ ಶಿವಸೇನೆ ಹೆಸರು ಹಾಗೂ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡಿದೆ.
ಮುಂಬೈ(ಫೆ.17): ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣ ಸುದೀರ್ಘ ದಿನಗಳಿಂದ ಶಿವಸೇನೆ ಹೆಸರು ಹಾಗೂ ಪಕ್ಷದ ಚಿಹ್ನೆಗಾಗಿ ನಡೆಯುತ್ತಿದ್ದ ಯುದ್ಧ ಅಂತ್ಯಗೊಂಡಿದೆ. ಈ ಹೋರಾಟದಲ್ಲಿ ಉದ್ಧವ್ ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ. ಇದೀಗ ಚುನಾವಣಾ ಆಯೋಗ ಶಿವಸೇನೆ ಹೆಸರು ಹಾಗೂ ಪಕ್ಷದ ಚಿಹ್ನೆಯನ್ನು ಏಕನಾಥ್ ಶಿಂಧೆ ಬಣಕ್ಕೆ ನೀಡಿದೆ. ತ್ರಿಶೂಲ, ಉದಯಿಸುತ್ತಿರುವ ಸೂರ್ಯ ಅಥವಾ ಬೆಳಗುತ್ತಿರುವ ದೀವಟಿಗೆ ಚಿಹ್ನೆ ಹಾಗೂ ಶಿವಸೇನೆ ಪಕ್ಷದ ಹೆಸರು ಇದೀಗ ಸಿಎಂ ಏಕನಾಥ್ ಶಿಂಧೆ ಪರವಾಗಿದೆ. ಈ ಮೂಲಕ ಶಿಂಧೆ ಬಣದ ವಿರುದ್ಧ ನಡೆದ ಹೋರಾಟದಲ್ಲಿ ಠಾಕ್ರೆ ಬಣ ಮತ್ತೆ ಹಿನ್ನಡೆ ಅನುಭವಿಸಿದೆ.
ಇದರಿಂದಾಗಿ ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಪುತ್ರ ಉದ್ಧವ್ ಠಾಕ್ರೆ ಅವರ ಬಣಕ್ಕೆ ಭಾರಿ ಹಿನ್ನಡೆಯಾಗಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಉದ್ಧವ್, ‘ಇದು ಪ್ರಜಾಪ್ರಭುತ್ವದ ಕೊಲೆ. ವಿಷಯ ಸುಪ್ರೀಂ ಕೋರ್ಟಲ್ಲಿರುವಾಗ ಆಯೋಗ ಹೇಗೆ ನಿರ್ಧರಿಸುತ್ತದೆ? ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಚ್ ಮೊರೆ ಹೋಗುತ್ತೇವೆ’ ಎಂದಿದ್ದಾರೆ. ಆದರೆ, ‘ಬಾಳಾ ಠಾಕ್ರೆ ಅವರ ತತ್ವಗಳಿಗೆ, ಸತ್ಯಕ್ಕೆ ಸಂದ ಜಯ ಇದೆ’ ಎಂದು ಆಯೋಗದ ನಿರ್ಣಯಕ್ಕೆ ಶಿಂಧೆ ಹರ್ಷಿಸಿದ್ದಾರೆ.
ಮುಂಬೈ ಪಾರ್ಕ್‌ಗೆ ಇಟ್ಟಿದ್ದ ಟಿಪ್ಪು ಹೆಸರು ಕಿತ್ತೆಸೆದ ಸಿಎಂ ಶಿಂಧೆ, ಸಿಹಿ ಹಂಚಿ ನಿವಾಸಿಗಳ ಸಂಭ್ರಮ!
ಕಳೆದ ವರ್ಷ ಶಿಂಧೆ ಬಣ ಬಂಡೆದ್ದು, ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿತ್ತು. ಆಗ ತಮ್ಮದೇ ನೈಜ ಶಿವಸೇನೆ ಎಂದು ಹೇಳಿಕೊಂಡಿತ್ತು. ಆಗ ಚುನಾವಣಾ ಆಯೋಗಕ್ಕೆ ಎರಡೂ ಬಣಗಳು ತಮ್ಮದೇ ನಿಜವಾದ ಶಿವಸೇನೆ ಎಂದು ಹೇಳಿಕೊಂಡು ದಾಖಲೆ ಸಮೇತ ಮನವಿ ಸಲ್ಲಿಸಿದ್ದವು. ಇದಕ್ಕೆ ಉತ್ತರಿಸಿ ನಿರ್ಣಯ ಪ್ರಕಟಿಸಿರುವ ಆಯೋಗ, ‘2018ರಲ್ಲಿ ಪಕ್ಷದ ನಿಯಮಕ್ಕೆ ತಿದ್ದುಪಡಿ ತರಲಾಗಿತ್ತು. ಆದರೆ ಅದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರಲಿಲ್ಲ. ಅಲ್ಲದೆ, ಪದಾಧಿಕಾರಿಗಳ ಆಯ್ಕೆ ನಿಯಮಾನುಸಾರ ನಡೆದಿಲ್ಲ. ಕೇವಲ ಭಟ್ಟಂಗಿಗಳು ಪದಾಧಿಕಾರಿಗಳಾಗಿದ್ದಾರೆ. ಇಂಥ ಸಂರಚನೆಯನ್ನು ಮಾನ್ಯ ಮಾಡಲಾಗದು. ಅಲ್ಲದೆ, ಶಿಂಧೆ ಬಣದಲ್ಲಿರುವ ಶಾಸಕರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉದ್ಧವ್ ಬಣಕ್ಕಿಂತ ಹೆಚ್ಚು ಮತ ಗಳಿಸಿದ್ದರು’ ಎಂದು ಹೇಳಿ ಉದ್ಧವ್ ಬಣದ ಕೋರಿಕೆ ತಿರಸ್ಕರಿಸಿದೆ ಹಾಗೂ ಶಿಂಧೆ ಬಣಕ್ಕೆ ಮಾನ್ಯತೆ ನೀಡಿದೆ. ಇದೇ ವೇಳೆ, ಸದ್ಯಕ್ಕೆ ದೀವಟಿಗೆ ಚಿಹ್ನೆಯನ್ನು ಇರಿಸಿಕೊಳ್ಳಲು ಉದ್ಧವ್‌ಗೆ ಅನುಮತಿಸಿದೆ.
ಶಿವಸೇನೆ - ಕಾಂಗ್ರೆಸ್ ಮೈತ್ರಿ ಖತಂ..? ಸಾವರ್ಕರ್ ವಿರುದ್ಧ ಹೇಳಿಕೆ ಹಿನ್ನೆಲೆ ಉದ್ಧವ್ ಬಣದ ಚಿಂತನೆ
ಹಂತ ಹಂತದಲ್ಲೂ ಠಾಕ್ರೆಗೆ ಹಿನ್ನಡೆ
ಶಿವಸೇನೆ ಪಕ್ಷದ ಚಿಹ್ನೆ, ಹೆಸರು ಬಳಸದಂತೆ ತಡೆ ನೀಡಿದ್ದ ಚುನಾವಣಾ ಆಯೋಗದ ಮಧ್ಯಂತರ ಆದೇಶದ ವಿರುದ್ಧ ಉದ್ಧವ್ ಠಾಕ್ರೆ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆ ದೆಹಲಿ ಹೈಕೋರ್ಟ್ ವಜಾ ಮಾಡಿತ್ತು. ಈ ಮೂಲಕ ಶಿವಸೇನೆ ಕುರಿತು ಹೋರಾಟದಲ್ಲಿ ಉದ್ದವ್ ಠಾಕ್ರೆ ಬಣಕ್ಕೆ ಪ್ರತಿ ಹಂತದಲ್ಲಿ ಹಿನ್ನಡೆಯಾಗಿತ್ತು. ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದಲ್ಲಿ ನಡೆದ ಬಂಡಾಯದಲ್ಲಿ ಶಿವಸೇನೆ 2 ಬಣಗಳಾಗಿ ಹೋಳಾಗಿತ್ತು. ಈ ವೇಳೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣ, ಶಿವಸೇನೆ ಹೆಸರು ಮತ್ತು ಚಿಹ್ನೆ ನಮ್ಮ ಬಳಿಯೇ ಇರಬೇಕು ಎಂದು ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಚುನಾವಣಾ ಆಯೋಗ ಪ್ರಸ್ತುತ ಇರುವ ಚಿಹ್ನೆ ಮತ್ತು ಹೆಸರು ಬಳಸದಂತೆ ಉಭಯ ಬಣಗಳಿತೂ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿತ್ತು.