
ನವದೆಹಲಿ (ಆ.20): ಮಹಾರಾಷ್ಟ್ರ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಭಾರೀ ಅಕ್ರಮದ ಕುರಿತು ಅನುಮಾನ ವ್ಯಕ್ತಪಡಿಸಿದ ಎರಡೇ ದಿನದಲ್ಲಿ ಚುನಾವಣಾ ಅಂಕಿ ಅಂಶಗಳ ವಿಶ್ಲೇಷಕ, ಸಿಎಸ್‌ಡಿಎಸ್ ಸಂಸ್ಥೆ ಮುಖ್ಯಸ್ಥ ಸಂಜಯ್ ಕುಮಾರ್ ತಮ್ಮ ಪೋಸ್ಟ್ ಬಗ್ಗೆ ಕ್ಷಮೆ ಯಾಚಿಸಿದ್ದು ಅದನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ ಸಂಸ್ಥೆಯ ಸಿಬ್ಬಂದಿ ಲೆಕ್ಕಾಚಾರದಲ್ಲಿ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಅವರ ಪೋಸ್ಟ್ ಅನ್ನೇ ಬಳಸಿಕೊಂಡು ಚುನಾವಣಾ ಆಯೋಗದ ವಿರುದ್ಧ ತನ್ನ ಆರೋಪವನ್ನು ಪುನರುಚ್ಚರಿಸಿದ್ದ ಕಾಂಗ್ರೆಸ್‌ಗೆ ಇದರಿಂದ ಭಾರೀ ಮುಖಭಂಗವಾಗಿದೆ. ಅದನ್ನೇ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ.
ಸಂಜಯ್ ಆರೋಪವೇನಿತ್ತು ?: ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ನಾಸಿಕ್ ಪಶ್ಚಿಮ ಮತ್ತು ಹಿಂಗ್ಲಾ ಕ್ಷೇತ್ರಗಳಲ್ಲಿ ಶೇ.47 ಮತ್ತು ಶೇ.43ರಷ್ಟು ಮತ ಪ್ರಮಾಣ ಹೆಚ್ಚಾಗಿದೆ. ರಾಮ್ ಟೆಕ್, ದೇಬ್‌ಲಾಲಿ ಕ್ಷೇತ್ರಗಳಲ್ಲಿ ಶೇ. 38 ಮತ್ತು ಶೇ.36ರಷ್ಟು ಕುಸಿತ ಕಂಡಿದೆ ಎಂದಿದ್ದರು. ಕಾಂಗ್ರೆಸ್ ಇದನ್ನು ಹಂಚಿಕೊಂಡಿತ್ತು.
ಕ್ಷಮೆಯಾಚನೆ: ಸಂಜಯ್ ಮಂಗಳವಾರ ದಿಢೀರ್ ತಮ್ಮ ಪೋಸ್ಟ್ ಅಳಿಸಿ ಹಾಕಿದ್ದಾರೆ. ಮಾತ್ರವಲ್ಲದೇ, '2024ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ದತ್ತಾಂಶದಲ್ಲಿ ತಪ್ಪಾಗಿದೆ ಎಂದು ಮಾಡಿದ್ದ ಪೋಸ್ಟ್‌ಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಡೇಟಾವನ್ನು ನಮ್ಮ ತಂಡ ತಪ್ಪಾಗಿ ಓದಿದೆ. ಹಾಗಾಗಿ ಪೋಸ್ಟ್ ಅಳಿಸಲಾಗಿದೆ. ತಪ್ಪು ಮಾಹಿತಿಯನ್ನು ಹರಡುವ ಯಾವ ಉದ್ದೇಶವೂ ನನಗಿರಲಿಲ್ಲ' ಎಂದಿದ್ದಾರೆ.
ಬಿಜೆಪಿ ಕಿಡಿ?: ಸಂಜಯ್ ಕ್ಷಮೆಯಾಚನೆ ಬೆನ್ನಲ್ಲೇ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದೆ. ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, 'ರಾಹುಲ್ ಗಾಂಧಿ ತಮ್ಮ ಆರೋಪಗಳನ್ನು ಪ್ರಚಾರ ಮಾಡಲು ನಂಬಿಕೊಂಡಿದ್ದ ಸಂಸ್ಥೆಯ ಅಂಕಿಅಂಶಗಳು ತಪ್ಪಾಗಿದೆ ಎಂದು ಈಗ ಸಾಬೀತಾಗಿದೆ. ಚುನಾವಣಾ ಆಯೋಗವನ್ನು ನಿರ್ಲಜ್ಜವಾಗಿ ಗುರಿಯಾಗಿಸಿಕೊಂಡಿರುವ ಮತ್ತು ನೈಜ ಮತದಾರರನ್ನು ನಕಲಿ ಎಂದು ಬಿಂಬಿಸುವ ರಾಹುಲ್ ಗಾಂಧಿ ಈಗ ಯಾವ ನಿಲುವು ಹೊಂದಿದ್ದಾರೆ ' ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ