ಕೊರೋನಾ ನಂತರ ಮೋದಿ ವಿಶ್ವಾಸಾರ್ಹತೆ ಭಾರಿ ಹೆಚ್ಚಳ: ಸಮೀಕ್ಷೆಯಲ್ಲಿ ಬಹಿರಂಗ!

By Kannadaprabha NewsFirst Published May 31, 2022, 8:44 AM IST
Highlights

* ನರೇಂದ್ರ ಮೋದಿ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಳ

* 2ನೇ ಅವಧಿಯ ಆಡಳಿತಕ್ಕೆ ದೇಶದ 67% ಜನರ ಮೆಚ್ಚುಗೆ

* ‘ಲೋಕಲ್‌ ಸರ್ಕಲ್ಸ್‌’ ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ

ನವದೆಹಲಿ(ಮೇ.31): ದೇಶದಲ್ಲಿ ಕೊರೋನಾ ಮಹಾಮಾರಿ ರುದ್ರನರ್ತನಗೈದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಳವಾಗಿದೆ. ಬೆಲೆಯೇರಿಕೆ ಹಾಗೂ ನಿರುದ್ಯೋಗದ ಬಗ್ಗೆ ಕಳವಳ ಇದೆಯಾದರೂ ಶೇ.67ರಷ್ಟುಜನರು ಕೇಂದ್ರ ಸರ್ಕಾರದ ಎರಡನೇ ಅವಧಿಯ ಒಟ್ಟಾರೆ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸೋಮವಾರ ಬಿಡುಗಡೆಯಾದ ನೂತನ ಸಮೀಕ್ಷೆಯೊಂದರ ಅಂಕಿಅಂಶಗಳು ಹೇಳಿವೆ.

ನರೇಂದ್ರ ಮೋದಿಯವರ ಎರಡನೇ ಅವಧಿಗೆ ಮೂರು ವರ್ಷ ತುಂಬಿದ ಸಮಯದಲ್ಲಿ ಲೋಕಲ್‌ ಸರ್ಕಲ್ಸ್‌ ಎಂಬ ಸಂಸ್ಥೆ ನಡೆಸಿದ ಈ ಸಮೀಕ್ಷೆ ಪ್ರಕಟವಾಗಿದ್ದು, ಕಳೆದ ವರ್ಷಕ್ಕಿಂತ ಪ್ರಧಾನಿಯ ಜನಪ್ರಿಯತೆ ಶೇ.16ರಷ್ಟುಏರಿಕೆಯಾಗಿದೆ. ಕಳೆದ ವರ್ಷ ಕೊರೋನಾದ ಎರಡನೇ ಅಲೆ ಭೀಕರವಾಗಿ ಜನರನ್ನು ಕಾಡಿದ ವೇಳೆ ಶೇ.51ರಷ್ಟಿದ್ದ ಅವರ ಜನಪ್ರಿಯತೆ ಈ ವರ್ಷ ಶೇ.67ಕ್ಕೆ ಏರಿಕೆಯಾಗಿದೆ. 2020ರಲ್ಲಿ ಕೊರೋನಾ ಬಂದ ಸಮಯದಲ್ಲಿ ಮೋದಿಯವರ ಜನಪ್ರಿಯತೆ ಶೇ.62 ಇತ್ತು.

64 ಸಾವಿರ ಜನರ ಅಭಿಪ್ರಾಯ ಸಂಗ್ರಹ:

ಲೋಕಲ್‌ ಸರ್ಕಲ್ಸ್‌ ಸಂಸ್ಥೆ ದೇಶಾದ್ಯಂತ ಒಟ್ಟು 64 ಸಾವಿರ ಜನರನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಿದೆ. ಅದರಲ್ಲಿ ಕೋವಿಡ್‌ 3ನೇ ಅಲೆಯಲ್ಲಿ ಸೋಂಕನ್ನು ಹಾಗೂ ದೇಶದ ಆರ್ಥಿಕತೆಯನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ ಎಂದು ಶೇ.67ರಷ್ಟುಜನರು ಹೇಳಿದ್ದಾರೆ. ಆದರೆ, ನಿರುದ್ಯೋಗದ ಬಗ್ಗೆ ಶೇ.7ರಷ್ಟುಜನರು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶೇ.47ರಷ್ಟುಜನರು ನಿರುದ್ಯೋಗ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದಿದ್ದಾರೆ. ಶೇ.73ರಷ್ಟುಜನರು ಬೆಲೆಯೇರಿಕೆಯ ಸಮಸ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಯ ಮುಖ್ಯಾಂಶ

67% ಜನರಿಂದ ನರೇಂದ್ರ ಮೋದಿ ಅವರ 2ನೇ ಅವಧಿಯ ಆಡಳಿತಕ್ಕೆ ಮೆಚ್ಚುಗೆ

73% ಜನರಿಗೆ ದೇಶದ ಭವಿಷ್ಯ ಹಾಗೂ ತಮ್ಮ ಭವಿಷ್ಯದ ಬಗ್ಗೆ ಆಶಾಭಾವನೆ

73% ಜನರಿಂದ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಯೇರಿಕೆ ಬಗ್ಗೆ ಕಳವಳ

44% ಜನರು ಮಾಲಿನ್ಯ ಇಳಿಕೆಗೆ ಸರ್ಕಾರ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದಿದ್ದಾರೆ

60% ಜನರಿಂದ ಕೋಮುಸೌಹಾರ್ದ ರಕ್ಷಣೆಗೆ ಸರ್ಕಾರ ಕೈಗೊಂಡ ಕ್ರಮಕ್ಕೆ ಮೆಚ್ಚುಗೆ

50% ಜನರಿಂದ ದೇಶದಲ್ಲಿ ಉದ್ಯಮ ನಡೆಸುವ ವಾತಾವರಣ ಸುಧಾರಿಸಿದೆ ಎಂದು ಶ್ಲಾಘನೆ

click me!